ರಾಜ್ಯದಲ್ಲಿ ಡೆಂಘೀ ನಿರಂತರವಾಗಿ ಹೆಚ್ಚಳವಾಗುತ್ತಿರುವ ನಡುವೆಯೇ, ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಾಗಿರುವ ಚೆಲುವಾಂಬ ಸರ್ಕಾರಿ ಆಸ್ಪತ್ರೆ, ಜನರ ಪಾಲಿಗೆ ಅಕ್ಷರಶಃ ನರಕದ ಕೂಪವಾಗಿ ಪರಿಣಮಿಸಿವೆ.
ಸಾವಿರಾರು ಬಡ ಹೊರ ರೋಗಿಗಳು ಬರುವ, ನೂರಾರು ಜನ ಒಳ ರೋಗಿಗಳನ್ನು ಹೊಂದಿರುವ ಜಿಲ್ಲಾಸ್ಪತ್ರೆ ಎಂದರೆ ಚೆಲುವಾಂಬ ಸರ್ಕಾರಿ ಆಸ್ಪತ್ರೆ. ಆದರೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ. ಸ್ವಚ್ಛತೆಯಂತೂ ಇಲ್ಲಿ ಮರೀಚಿಕೆಯಾಗಿದೆ. ಆರೈಕೆ ಅರಸಿಕೊಂಡು ಬರುವ ಜನರಿಗೆ ಸ್ಪಷ್ಟವಾಗಿ ಯಾವುದೇ ಮಾಹಿತಿ ಕೂಡ ಇಲ್ಲಿ ಸಿಗುವುದು ಅಷ್ಟಕ್ಕಷ್ಟೇ.

ದಿನೇ ದಿನೆ ಡೆಂಘೀ ಪ್ರಕರಣ ಹೆಚ್ಚುತ್ತಾ ಇರುವ ಸಂದರ್ಭದಲ್ಲಿ ಜಿಲ್ಲಾಡಳಿತ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕಿತ್ತು. ಒಂದು ಕಡೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಜನರಲ್ಲಿ ಡೆಂಘೀ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ಆದರೆ ಮೈಸೂರಿನ ಜಿಲ್ಲಾಸ್ಪತ್ರೆಯ ಆವರಣವನ್ನೊಮ್ಮೆ ಏನಾದರೂ ಸುತ್ತಾಡಿದರೆ ಸಾಕು. ಎಲ್ಲ ದೃಶ್ಯಗಳು ಕಾಣ ಸಿಗುತ್ತದೆ.
ಎಲ್ಲೆಂದರಲ್ಲಿ ಕಡ್ಡಿ ಕಸಗಳ ರಾಶಿ, ಅಲ್ಲಲ್ಲಿ ನೀರು ನಿಂತಿರುವುದು, ಆಸ್ಪತ್ರೆ ಮುಂಭಾಗದಲ್ಲಿ ಕೆಮಿಕಲ್ ನಿರುಪಯುಕ್ತ ವಸ್ತುಗಳ ಸಂಗ್ರಹ ತೊಟ್ಟಿ ಎಲ್ಲವೂ ಕಾಣ ಸಿಗಲು ಸಾಧ್ಯ. ಸುಮಾರು 50 ಮೀಟರ್ ಸುತ್ತ ಕೆಟ್ಟ ವಾಸನೆ. ಜನರಿಗೆ ಉಸಿರಾಡಲು ಸಾಧ್ಯವೇ ಇಲ್ಲದಂತ ಸ್ಥಿತಿ. ಆಸ್ಪತ್ರೆಯ ಆವರಣದಲ್ಲಿ ಓಡಾಡಬೇಕೆಂದರೆ ಸದಾ ಮೂಗು ಮುಚ್ಚಬೇಕಾದ ಪರಿಸ್ಥಿತಿ ಇದೆ. ತಾಳಲಾರದ ಕೆಟ್ಟ ವಾಸನೆ ಸಹಿಸಿಕೊಂಡು ಇಲ್ಲಿನ ಒಳರೋಗಿಗಳು ಇರಬೇಕಾದ ದುಸ್ಥಿತಿ ಇದೆ.

ಡೆಂಘೀ ಪೀಡಿತರಾದ ರೋಗಿಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದರೆ, ಆಸ್ಪತ್ರೆಯ ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಚತೆ ಇಲ್ಲ. ಅಧಿಕಾರಿಗಳು, ಸಿಬ್ಬಂದಿಗಳು, ಆಸ್ಪತ್ರೆ ಆಡಳಿತ ಮಂಡಳಿ ಗಮನ ಹರಿಸಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ ಇದು. ‘ಆಸ್ಪತ್ರೆಯ ಪರಿಸರವನ್ನೇ ಸ್ವಚ್ಛವಾಗಿ ಇರಿಸಿಕೊಳ್ಳಲು ಸಾಧ್ಯವಾಗದ ಆರೋಗ್ಯ ಸಿಬ್ಬಂದಿಗಳು, ಜನರಿಗೆ ನೀತಿ ಪಾಠ ಹೇಳುವುದರಲ್ಲಿ ಅರ್ಥ ಏನಿದೆ’ ಎಂಬುದು ಇಲ್ಲಿಗೆ ಆಗಮಿಸುವ ರೋಗಿಗಳ ಕುಟುಂಬಸ್ಥರ ಪ್ರಶ್ನೆ.
ಒಳರೋಗಿಗಳ ಪಾಡೇನು?
ಆಸ್ಪತ್ರೆಯ ಆವರಣ ಈ ರೀತಿಯಲ್ಲಿದ್ದರೆ, ಒಳರೋಗಿಗಳ ಪಾಡು ಕೂಡ ಇದಕ್ಕಿಂತ ಭಿನ್ನವೇನೂ ಇಲ್ಲ. ಒಳಗಡೆ ರೋಗಿಗಳು ಇರುವ ವಾರ್ಡ್‌ಗೆ ಹೋದರೆ ಸಾಕು. ನರಕ ಅನ್ನುವುದು ಇರೋದೆ ಹೀಗೆಯೇ ಅನ್ನುವ ಅನುಭವ ಖಾತ್ರಿಯಾಗುತ್ತದೆ.

ಬೆಡ್ ಮೇಲಿನ ಹೊದುಪು, ಬೆಡ್ ಶೀಟ್ ಅನ್ನು ವಾರಗಟ್ಟಲೆ ಆದರೂ ಕೂಡ ಬದಲಾವಣೆ ಮಾಡಲ್ಲ ಅನ್ನುವುದು ಒಳರೋಗಿಗಳ ದೂರು. ಶೌಚಾಲಯದ ಪರಿಸ್ಥಿತಿಯನ್ನು ವಿವರಿಸಲು ಸಾಧ್ಯವೇ ಇಲ್ಲ. ಅದು ಅಲ್ಲಿ ಬಂದು ನೋಡಿದರಷ್ಟೇ ಗೊತ್ತಾಗಬಹುದು. ಮಲ, ಮೂತ್ರ ವಿಸರ್ಜನೆ ಒಂದೆಡೆಯಾದರೆ, ಊಟ, ತಿಂಡಿಗೆ ಬಳಸಿದ ಪಾತ್ರೆಗಳನ್ನು ಕೂಡ ಅಲ್ಲೇ ಶುಚಿಗೊಳಿಸಿಕೊಳ್ಳಬೇಕಾದ ದುಸ್ಥಿತಿ.
ಇದನ್ನು ಓದಿದ್ದೀರಾ? ಭದ್ರಾವತಿ | ಅಪಘಾತ ಸಂತ್ರಸ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಟ ಶಿವರಾಜ್‌ಕುಮಾರ್ ದಂಪತಿ
ಆಸ್ಪತ್ರೆಯ ಇಡೀ ವಾತಾವರಣ ದುರ್ನಾತ ಬೀರುತ್ತಿದೆ. ಸಂಬಂಧಪಟ್ಟವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಇದು ಕಣ್ಣಿಗೆ ಕಾಣಿಸಿಲ್ಲ ಅನ್ನೋದೇ ಆಶ್ಚರ್ಯ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಇತ್ತೀಚೆಗೆ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳ ಜತೆ ಸಭೆ ನಡೆಸಿ, ಡೆಂಘೀ ಪ್ರಕರಣ ತಡೆ ಗಟ್ಟುವಲ್ಲಿ ಶ್ರಮಿಸಿ ಎಂದು ಸೂಚಿಸಿದ್ದರು. ಆದರೆ, ಇದನ್ನು ಅಧಿಕಾರಿಗಳು ಪಾಲಿಸುತ್ತಿದ್ದಾರ ಅನ್ನೋದನ್ನು ನೋಡಬೇಕಾದರೆ ಒಂದೋ ಚೆಲುವಾಂಬ ಸರ್ಕಾರಿ ಆಸ್ಪತ್ರೆ ಅಥವಾ ಕೆ ಆರ್ ಆಸ್ಪತ್ರೆ ಕಡೆಗೆ ಬಂದರೆ ಕಾಣಬಹುದು. ಅಲ್ಲಿಯ ಅಧಿಕಾರಿಗಳು ಯಾವ ರೀತಿ ಆಸ್ಪತ್ರೆಯನ್ನು ಇರಿಸಿದ್ದಾರೆ ಅನ್ನುವುದನ್ನು ಕಣ್ಣಾರೆ ದರ್ಶನ ಮಾಡಿಕೊಳ್ಳಬಹುದು.

ಆಸ್ಪತ್ರೆಯ ಈ ಅವ್ಯವಸ್ಥೆಯ ಬಗ್ಗೆ ಈದಿನ.ಕಾಮ್ ಜತೆ ಮಾತನಾಡಿದ ಬಂಡಳ್ಳಿ ನರಸಯ್ಯ ಎಂಬುವವರು, “ಇದು ಆಸ್ಪತ್ರೆ ಅಲ್ಲ. ಜನರ ಜೀವ ಹಿಂಡೋಕೆ ಇರುವ ಅವ್ಯವಸ್ಥೆ. ನಾವು ಓದಿಲ್ಲ ಬರೆದಿಲ್ಲ. ಒಂದು ಮಾಹಿತಿ ಕೇಳಿದರೆ ಸಿಬ್ಬಂದಿಗಳು ಹೇಳಲ್ಲ. ನಮ್ಮನ್ನೇ ಗದರುತ್ತಾರೆ. ರಕ್ತ ಪರೀಕ್ಷೆ, ಡೆಂಘೀ ಪರೀಕ್ಷೆ ಎಲ್ಲಿ ಅಂತ ಜನಸಾಮಾನ್ಯರು ಬಂದು ಕೇಳಿದರೆ, ಮಾಹಿತಿ ನೀಡಲು ಒಬ್ಬನೇ ಒಬ್ಬ ಸಿಗುವುದಿಲ್ಲ. ರಕ್ತಪರೀಕ್ಷೆ ಮಾಡುವ ಯಂತ್ರ ಪದೇ ಪದೇ ಕೆಟ್ಟೋಗುತ್ತಲೇ ಇರುತ್ತದೆ. ಆಗ ದುಡ್ಡು ಕೊಟ್ಟು ಹೊರಗಡೆ ಹೋಗಿ ಪರೀಕ್ಷೆ ಮಾಡಿಸ್ಕೊಂಡು ಬರಬೇಕು. ಅಲೆದು ಅಲೆದು ಸುಸ್ತಾಗಿ ಹೋಗುತ್ತದೆ. ಈ ನರಕ ಯಾರಿಗೂ ಬೇಡ” ಎಂದು ಮರುಗಿದರು.
ಕೆ ಆರ್ ನಗರದ ನಿವಾಸಿ ಜಬೀನಾ ಈ ದಿನ.ಕಾಮ್ ಜೊತೆ ಮಾತನಾಡಿ, “ನನ್ನ ಮಗುವಿಗೆ ಜ್ವರ, ಡೆಂಘೀ ಆಗಿದೆ. ಆಸ್ಪತ್ರೆಗೆ ದಾಖಲಾಗಿ ಆರು ದಿನ ಆಯ್ತು. ಒಬ್ಬರು ಸರಿಯಾಗಿ ನೋಡ್ತಾ ಇಲ್ಲ. ಕೇಳಿದರೆ ಯಾವುದೇ ಔಷಧಿ ಇಲ್ಲ. ಜ್ವರಕ್ಕೆ ಅಷ್ಟೇ ಮದ್ದು ಕೊಡೋದು ಅಂತಾರೆ. ಇನ್ನೇನಾದರು ಕೇಳಿದರೆ ವೈದ್ಯರು ಸಿಟ್ಟು ಮಾಡಿಕೊಳ್ತಾರೆ. ಮಾತಾಡಲ್ಲ. ನಮ್ಮನ್ನೇ ಹೆದರಿಸುತ್ತಾರೆ. ಸ್ವಚ್ಛತೆಯ ಕೆಲಸ ಮಾಡುವವರು, ವಾಚ್ ಮ್ಯಾನ್ ಎಲ್ಲರು ಇಲ್ಲಿ ಡಾಕ್ಟರ್ ಆಗಿದ್ದಾರೆ. ಅವರು ಜನರನ್ನ ದನ ಅಂದುಕೊಂಡಿದ್ದಾರೆ. ಗೌರವ ಇಲ್ಲ. ಬಹಳ ಕೆಟ್ಟದಾಗಿ ವರ್ತಿಸುತ್ತಾರೆ. ಮನುಷ್ಯತ್ವ ಕೂಡ ಇಲ್ಲಿ ಉಳಿದಿಲ್ಲ” ಎಂದು ಆಸ್ಪತ್ರೆಯಲ್ಲಿ ತಮಗಾದ ನೋವನ್ನು ತೋಡಿಕೊಂಡಿದ್ದಾರೆ.
“ಕೆ ಆರ್ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಆದರೆ ಎಲ್ಲ ಪರೀಕ್ಷೆಗಳಿಗೆ ಹೊರಗೆ ಹೋಗಬೇಕು. ಏನಾದರೂ ಪ್ರಶ್ನಿಸಿದರೆ, ಆಗಲ್ಲ ಅಂದರೆ ನಿಮ್ಮ ರೋಗಿಯನ್ನು ಡಿಸ್ಚಾರ್ಜ್ ಮಾಡಿಕೊಂಡು ಹೋಗಿ ಅನ್ನುವ ಉಡಾಫೆ ಮಾತುಗಳು. ಇಲ್ಲಿ ಕೆಲಸ ಮಾಡುವ ಯಾವ ಸಿಬ್ಬಂದಿಗೂ ತಾಳ್ಮೆ ಇಲ್ಲ. ನಾವು ಬಡವರು. ಖಾಸಗಿ ಆಸ್ಪತ್ರೆಗೆ ಹೋಗಲು ನಮ್ಮ ಕೈಯ್ಯಲ್ಲಿ ಶಕ್ತಿ ಇಲ್ಲ” ಎಂದು ನಂಜನಗೂಡಿನ ಸರಸ್ವತಿ ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣದ ನಿವಾಸಿ ಧನಂಜಯ ಮಾತನಾಡಿ, “ಹುಷಾರಿಲ್ಲ ಅಂತ ಇಲ್ಲಿಗೆ ಬರ್ತೀವಿ. ಆದ್ರೆ ಇಲ್ಲಿ ಇರೋ ಕೆಟ್ಟ ವಾತಾವರಣಕ್ಕೆ ಚೆನ್ನಾಗಿ ಇರೋರ ಆರೋಗ್ಯ ಕೂಡ ಕೆಟ್ಟೋಗುತ್ತೆ. ರೋಗಿಗಳ ಜೊತೆ ಬಂದವರಿಗೆ ಉಳಿಯಲು ಒಂದು ಸರಿಯಾದ ವ್ಯವಸ್ಥೆ ಇಲ್ಲ. ಮಳೆ, ಗಾಳಿ ಅಂತ ಲೆಕ್ಕಿಸದೆ ಸೊಳ್ಳೆ ಕಡಿಸ್ಕೊಂಡು ಗೇಟಿನ ಹೊರಗಿನ ಆವರಣದಲ್ಲಿ ಮಲಗಬೇಕು. ದುಡ್ಡು ಕೊಟ್ಟು ಪಬ್ಲಿಕ್ ಟಾಯ್ಲೆಟ್ ಬಳಸಬೇಕು. ಯಾವ ಪುರುಷಾರ್ಥಕ್ಕೆ ಜನ ಸರ್ಕಾರಿ ಆಸ್ಪತ್ರೆಗೆ ಬರಬೇಕೋ ಗೊತ್ತಿಲ್ಲ. ಇಲ್ಲಿ ಯಾರಿಗೂ ಮನುಷ್ಯತ್ವ ಅನ್ನೋದೇ ಇಲ್ಲ” ಎಂದು ಅಲವತ್ತುಕೊಂಡರು.
ಕೆ ಆರ್ ಆಸ್ಪತ್ರೆ, ಚೆಲುವಾಂಬ ಹಾಗೂ ಮಕ್ಕಳ ಆಸ್ಪತ್ರೆ ಸ್ವಚ್ಛತೆ ಕಡೆಗಣಿಸಿದಂತಿದೆ. ಜನರನ್ನ ಕನಿಷ್ಠ ಸೌಜನ್ಯತೆಯಿಂದ ನಡೆಸಿಕೊಳ್ಳುವುದನ್ನು ಇಲ್ಲಿನ ಸಿಬ್ಬಂದಿಗಳು ಮರೆತಂತಿದೆ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ಪರಿ ಇದು. ಆರೋಗ್ಯ ಇಲಾಖೆಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ದಿಢೀರ್ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿಯನ್ನು ಒಮ್ಮೆ ಕಣ್ಣಾರೆ ನೋಡಿ, ಅವಲೋಕಿಸುವ ಅವಶ್ಯಕತೆ ಇದೆ. ಆ ಮೂಲಕ ಜನರಿಗೆ ಸೂಕ್ತವಾದ ಮೂಲಭೂತ ಸೌಲಭ್ಯದೊಂದಿಗೆ ಚಿಕಿತ್ಸೆ ದೊರೆಯುವಂತೆ ಮಾಡಲಿ ಎಂಬ ಕಳಕಳಿ ನಮ್ಮದು.
