ಹಿಟ್ ಆ್ಯಂಡ್ ರನ್ ಮಾಡಿ ಗರ್ಭಿಣಿಯ ಸಾವಿಗೆ ಕಾರಣವಾಗಿದ್ದ ಅಪರಾಧಿಗೆ ನಾಗಮಂಗಲ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ 11 ತಿಂಗಳು ಜೈಲು ಶಿಕ್ಷೆ ಹಾಗೂ ₹8,000 ದಂಡ ವಿಧಿಸಿ ಆದೇಶಿಸಿದೆ.
2014ರ ಮೇ 16ರಂದು ಪಟ್ಟಣದ ಬೆಳ್ಳೂರು ಕ್ರಾಸ್ ಬಳಿಯ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಮನೋಜ ಎಂಬಾತ ಹಿಟ್ ಆ್ಯಂಡ್ ರನ್ ಮಾಡಿದ್ದ. ಕೆಂಪಮ್ಮ ಹಾಗೂ ಅವರ ಗರ್ಭಿಣಿ ಪುತ್ರಿ ಶ್ರುತಿ ಅವರು ಬಿ ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಲು ಆಟೋದಲ್ಲಿ ಹೋಗುತ್ತಿದ್ದಾಗ ಮನೋಜ ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆದಿದ್ದ. ಇದರಿಂದಾಗಿ ಆಟೋ ಮಗುಚಿ ಗರ್ಭಿಣಿ ಶ್ರುತಿ ಮೃತಪಟ್ಟಿದ್ದು, ಆಟೋ ಚಾಲಕ ಮಂಜಪ್ಪ ಮತ್ತು ಕೆಂಪಮ್ಮ ಅವರಿಗೂ ಗಾಯಗಳಾಗಿದ್ದವು.
ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್ ಎಸ್ ಶಿವರಾಜು ಅವರು ಶಿಕ್ಷೆ ಪ್ರಕಟಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ | ಯುವಕನನ್ನು ಕಂಬಕ್ಕೆ ಕಟ್ಟಿ ಹಲ್ಲೆ