ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತವಾಗಿ ಸುದ್ದಿ ಕಳುಹಿಸಿದರೂ ಕೂಡಾ ಪ್ರಕಟಿಸದೆ ಉದಯವಾಣಿ ಪತ್ರಿಕೆಯು ಓದುಗರಿಗೆ ದ್ರೋಹ ಬರೆಯುತ್ತಿದೆ. ಪತ್ರಿಕೆಯ ಹೆಸರ ಪಕ್ಕದಲ್ಲೇ ‘ಹೆಗ್ಗಡೆವಾಣಿ’ ಎಂದು ಬರೆಯಬಹುದು ಎಂದು ನಾಗರಿಕ ಸೇವಾ ಟ್ರಸ್ಟ್ ಹೇಳಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಧರ್ಮಸ್ಥಳಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ನಾಗರಿಕ ಸೇವಾ ಟ್ರಸ್ಟ್ ಮತ್ತು ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ-ಕರ್ನಾಟಕ ಜಂಟಿಯಾಗಿ ಉದಯವಾಣಿ ದೈನಿಕ ಸಂಪಾದಕರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವರದಿಗಾರರಿಗೆ ಪತ್ರ ಬರೆದಿದೆ.
ಇದನ್ನು ಓದಿದ್ದೀರಾ? ಸೌಜನ್ಯ ಪ್ರಕರಣ | ಅಣ್ಣಪ್ಪ ಬೆಟ್ಟದಲ್ಲಿ ಸೌಜನ್ಯ ತಾಯಿ, ಆರೋಪ ಹೊತ್ತವರು ಮುಖಾಮುಖಿ
“ನಮ್ಮೆರಡು ಜಿಲ್ಲೆಯ (ದಕ್ಷಿಣ ಕನ್ನಡ, ಉಡುಪಿ) ಪ್ರಮುಖ ದೈನಿಕ ಉದಯವಾಣಿ. ಓದುಗರಿಗೆ ಎಲ್ಲಾ ಸುದ್ದಿಗಳನ್ನು ನೀಡುವುದು ಪತ್ರಿಕಾ ಧರ್ಮ. ಅದು ನೀವು ಮಾಡುವ ಉಪಕಾರವೇನಲ್ಲ. ಹೆಗ್ಗಡೆಯವರ ಸುದ್ದಿಗಳನ್ನು ಕಾಲಂ ಗಟ್ಟಲೆ ಪೋಟೋಸಹಿತ ರಾಜ್ಯಮಟ್ಟದ ವರದಿಯಾಗಿ ಪ್ರಕಟಿಸುವ ನೀವು ನಾಗರಿಕ ಸೇವಾ ಟ್ರಸ್ಟ್‌ನ ವರದಿಗಳನ್ನು ವರದಿಗಳನ್ನು ಪ್ರಕಟಿಸುತ್ತಿಲ್ಲ” ಎಂದು ಪತ್ರದಲ್ಲಿ ಬರೆಯಲಾಗಿದೆ.
“ನಾವು ಹೆಗ್ಗಡೆಯವರ ಅಕ್ರಮಗಳನ್ನು ದಾಖಲೆ ಸಹಿತ ಬಯಲಿಗೆಳೆಯುತ್ತಿರುವ ಕಾರಣದಿಂದಾಗಿ, ಹೆಗ್ಗಡೆಯವರು ನಿಮಗೆ ಕೋಟಿಗಟ್ಟಲೆ ರೂಪಾಯಿಯ ಜಾಹೀರಾತು ನೀಡುವ ಕಾರಣದಿಂದಾಗಿ ನಮ್ಮ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲ. ಪದೇ ಪದೇ ನೆನಪಿಸಿದಾಗ ಬೆಳ್ತಂಗಡಿ-ಬಂಟ್ವಾಳಕ್ಕೆ ಸೀಮಿತವಾದ ಸುದಿನದಲ್ಲಿ ಒಂದು ಸಣ್ಣ ಸುದ್ದಿ ಪ್ರಕಟಿಸಲಾಗುತ್ತದೆ. ಸುದ್ದಿಯನ್ನು ಜನರಿಗೆ ತಲುಪಿಸದಿರುವುದು ನೀವು ಮಾಡುವ ದ್ರೋಹ” ಎಂದು ದೂರಲಾಗಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಸಹೋದರನ 7.59 ಎಕರೆ ಭೂ ಮಂಜೂರಾತಿ ರದ್ದುಗೊಳಿಸಿದ ನ್ಯಾಯಾಲಯ
“ನಿಮ್ಮ ಪತ್ರಿಕೆಗೆ ಬ್ರೇಕೆಟ್‌ನಲ್ಲಿ ಹೆಗ್ಗಡೆವಾಣಿ ಎಂದು ಹಾಕಿದರೆ ಸೂಕ್ತವಲ್ಲವೇ” ಎಂದು ಪತ್ರದಲ್ಲಿ ಕುಟುಕಲಾಗಿದೆ. “ಉಜಿರೆಯಿಂದ ಧರ್ಮಸ್ಥಳಕ್ಕೆ ನಾಲ್ಕು ಸಾವಿರ ಮಂದಿಯ ಪಾದಯಾತ್ರೆ ನಿಮ್ಮ ಪತ್ರಿಕೆಯಲ್ಲಿ 25 ಸಾವಿರವೆಂದು ಪ್ರಕಟಿಸಲಾಗುತ್ತದೆ. ಆದರೆ ಧರ್ಮಸ್ಥಳದ ದಲಿತರ ಮುರುಕು ಮನೆಗಳ ದುಃಸ್ಥಿತಿ ನಿಮ್ಮ ಕಣ್ಣಿಗೆ ಕಾಣುವುದಿಲ್ಲ” ಎಂದು ಉದಯವಾಣಿಯನ್ನು ನಾಗರಿಕ ಸೇವಾ ಟ್ರಸ್ಟ್ ಪತ್ರ ಟೀಕಿಸಿದೆ.
“ಹೆಗ್ಗಡೆಯವರ ಬೀಡು ಚಿತ್ರೀಕರಿಸುವ ನಿಮಗೆ ಸೌಜನ್ಯಾಳ ಕುಟುಂಬದ ಗೋಳು ಕೇಳುವುದಿಲ್ಲ. ಧರ್ಮಸ್ಥಳದಲ್ಲಾದ ನೂರಾರು ಎಕರೆ ಅತಿಕ್ರಮಣ ಕಾಣುವುದಿಲ್ಲ. ನಾವು ಆಧಾರ ಸಹಿತ ನಿಮಗೆ ಕಳುಹಿಸಿದ ವರದಿ ಕಸದ ಬುಟ್ಟಿಗೆ ಸೇರುತ್ತದೆ. ಈ ವಿಚಾರದಲ್ಲಿ ನೀವು ಪಶ್ಚಾತ್ತಾಪ ಪಡಬೇಕಾದ ಕಾಲ ದೂರವಿಲ್ಲ, ನೆನೆಪಿರಲಿ” ಎಂದು ಪತ್ರದಲ್ಲಿ ಬರೆಯಲಾಗಿದೆ.
