ಕನ್ನಡಿಗರ ಅರಣ್ಯ ಆಸ್ತಿ ಸುಮಾರು 14000 ಕೋಟಿ ರೂ.ಗೂ ಅಧಿಕ ಮೌಲ್ಯದ ಎಚ್‌ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ಅರಣ್ಯ ಭೂಮಿಯನ್ನು ಸಚಿವ ಸಂಪುಟದ ಅನುಮತಿ ಇಲ್ಲದೆ ಡಿನೋಟಿಫಿಕೇಷನ್‌ಗೆ ಅರ್ಜಿ ಹಾಕಿರುವ ಐಎಎಸ್, ಐಎಫ್ಎಸ್ ಅಧಿಕಾರಿಗಳು ಮತ್ತು ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದ ಐಎಫ್‌ಎಸ್ ಅಧಿಕಾರಿ ಆರ್ ಗೋಕುಲ್ ಮತ್ತು ಮತ್ತಿತರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ತೀಕ್ಷ್ಣವಾದ ಕಾನೂನು ಕ್ರಮ ಕೈಗೊಳ್ಳಲು ಕೋರಿ ಮನವಿ ಮಾಡಿದರು.
ಬೆಂಗಳೂರಿನ ನೈಜ ಹೋರಾಟ ವೇದಿಕೆಯಿಂದ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರು ಮಹಾನಗರ ವ್ಯಾಪ್ತಿಯ ಪೀಣ್ಯ ಪ್ಲಾಂಟೇಷನ್‌ನಲ್ಲಿರುವ 443 ಎಕರೆ ಅರಣ್ಯ ಭೂಮಿಯನ್ನು ಎಚ್‌ಎಂಟಿಗೆ ನೀಡಿರುವ ಬಗ್ಗೆ ಸ್ಪಷ್ಟವಾದ ದಾಖಲೆ ಪತ್ರಗಳು ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ ಇರುವುದಿಲ್ಲ. ಮಿಗಿಲಾಗಿ ಈ ಭೂಮಿಯಲ್ಲಿ ಹಲವು ವರ್ಷ ಕೈಗಾರಿಕೆ ನಡೆಸಿದ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕೈಗಾರಿಕಾ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿಸದಿರುವುದೂ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಈ ಹಿಂದೆ ಸುಪ್ರೀಂಕೋರ್ಟ್ ವಿಸೃತ ಪೀಠದ ತೀರ್ಪಿನಂತೆ ಡಿನೋಟಿಫಿಕೇಷನ್ ಆಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದ ಭೂಮಿ ಅರಣ್ಯವೇ ಆಗಿರುತ್ತದೆ ಎಂದು ತೀರ್ಪು ಮಡಲಾಗಿದೆ. ಆದಾಗ್ಯೂ ಎಚ್‌ಎಂಟಿ ಎಕರೆ ಲೆಕ್ಕದಲ್ಲಿ ಕೆಲವು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸುಮಾರು 160ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿರುತ್ತದೆ ಎಂದು ವರದಿಯಾಗಿದೆ.
ಈ ಮಧ್ಯೆ ಈ ಹಿಂದಿನ ಅರಣ್ಯ ಸಚಿವರ ಗಮನಕ್ಕೆ ತರದೆ, ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆ 14000 ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಯುಳ್ಳ ಅಧಿಕಾರಿಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿರುವುದು ನಿಯಮ ಬಾಹಿರವಾಗಿರುತ್ತದೆ. ಸದರಿ ಅರಣ್ಯ ಭೂಮಿಯನ್ನು ಉಳಿಸಿಕೊಳ್ಳಲು ಸತತ ಪ್ರಯತ್ನಪಡುತ್ತಿರುವ ಇಂದಿನ ಅರಣ್ಯ ಸಚಿವ ಈಶ್ವರಖಂಡ್ರೆಯವರು ಈ ಪ್ರಕರಣವನ್ನು ಬಯಲಿಗೆಳೆದು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿರುತ್ತಾರೆ.
ಮೇಲ್ನೋಟಕ್ಕೆ ತಪ್ಪಿತಸ್ತರಂತೆ ಕಂಡು ಬರುತ್ತಿರುವ ಐಎಫ್‌ಎಸ್ ಅಧಿಕಾರಿ ಆರ್ ಗೋಕುಲ್ ಎನ್ನುವವರು ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿರುವ ಬಗ್ಗೆ ಮೇ 31ರಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗಾಗಲಿ ಅಥವಾ ಹಿರಿಯ ಅಧಿಕಾರಿಗಳಿಗಾಗಲಿ ಯಾವುದೇ ರೀತಿಯ ಮನವಿ ಸಲ್ಲಿಸದೆ ಸರ್ಕಾರಿ ನೌಕರರ ಕಾಯ್ದೆಯ ವಿರುದ್ಧವಾಗಿ ಈ ರೀತಿ ಸಿಬಿಐಗೆ ಪತ್ರ ಬರೆಯುವ ಮೂಲಕ ಐಎಫ್ಎಸ್ ಅಧಿಕಾರಿ ಆರ್ ಗೋಕುಲ್ ಅವರ ದುರ್ನಡತೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಸರ್ಕಾರವನ್ನೇ ಬುಡಮೇಲು ಮಾಡುವ ಕೃತ್ಯವಾಗಿರುತ್ತದೆ.
ಐಎಫ್ಎಸ್ ಅಧಿಕಾರಿ ಆರ್ ಗೋಕುಲ್ ಅವರ ಹೇಳಿಕೆಗಳು ಮಾಧ್ಯಮಗಳಲ್ಲಿ ಬರುತ್ತಿದ್ದಂತ ಅರಣ್ಯ ಸಚಿವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವುದು ವರದಿಯಾಗಿದೆ. ಅದರಲ್ಲಿ, ‘ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ತಾವು ಬೇಲಿಕೇರಿ ಪ್ರಕರಣದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಶಿಕ್ಷೆ ಆಗುವಂತೆ ಮಾಡಿದ ಕಾರಣ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ತಿಳಿಸಿ, ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿರುವುದು ಸರ್ಕಾರದ ವಿರುದ್ಧ ಶುದ್ಧ ಸುಳ್ಳು ಆರೋಪವೆಂದು ಅರಣ್ಯ ಸಚಿವರು ತಿಳಿಸಿರುತ್ತಾರೆ(ಅಸಲಿಗೆ ಬೇಲಿಕೆರೆ ಪ್ರಕರಣದ ಬೆಳಕಿಗೆ ಬರಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರ ನೇತೃತ್ವದಲ್ಲಿ ನಡೆದ ತನಿಖೆ ಕಾರಣ ಎಂಬ ಸಾಮಾನ್ಯ ಜ್ಞಾನವು ಆರ್ ಗೋಕುಲ್ ಅವರಿಗೆ ಇದ್ದಂತಿಲ್ಲ)
“2024ರ ಸೆಪ್ಟೆಂಬರ್ 24ರಂದು ತಾವು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ಟಿಪ್ಪಣಿ ಕಳಿಸಿ, ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆ ಸುಪ್ರೀಂ ಕೋರ್ಟಿನಲ್ಲಿ ಮಧ್ಯಂತರ ಅರ್ಜಿಯನ್ನು ಹಾಕಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ಸೂಚನೆ ನೀಡಿದ ಒಂದು ತಿಂಗಳ ನಂತರ ಅಕ್ಟೋಬರ್ 2024ರಲ್ಲಿ ಬೇಲಿಕೇರಿ ತೀರ್ಪು ಬಂದಿದೆ. ಆರ್ ಗೋಕುಲ್ ತಮ್ಮ ತಪ್ಪು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಸಿಬಿಐಗೆ ಸುಳ್ಳು ಆರೋಪ ಮಾಡಿ ಪತ್ರ ಬರೆದಿದ್ದಾರೆ. ಇದೂ ಕೂಡ ಅಧಿಕಾರಿಯ ದುರ್ವರ್ತನೆಯಾಗುತ್ತದೆ ಅಥವಾ ಬೆದರಿಕೆಯ ತಂತ್ರವೆಂದು ಭಾವಿಸಬಹುದಾಗಿದೆ’’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಹೇಳಿರುತ್ತಾರೆ.
ಬೆಂಗಳೂರು ಮಹಾನಗರದ ಜನತೆಯ ಕಣ್ಣಿಗೆ ಕಾಣುವಂತೆ ಎಚ್‌ಎಂಟಿ ಅರಣ್ಯ ಭೂಮಿ ಪ್ರದೇಶದಲ್ಲಿ ಇಂದಿಗೂ 280 ಎಕರೆಯಷ್ಟು ನೆಡುತೋಪು ಇರುತ್ತದೆ. ಆದರೆ, ಸದರಿ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್‌ಗೆ ಈ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಇದು ಸುಪ್ರೀಂಕೋರ್ಟ್‌ಗೆ ಮಾಡಿದ ವಂಚನೆ ಮತ್ತು ಕೋರ್ಟನ್ನೇ ದಾರಿತಪ್ಪಿಸುವ ಕೆಲಸದ ಜತೆಗೆ ಬೆಲೆ ಬಾಳುವ ಭೂಮಿಯನ್ನು ಇತರರಿಗೆ ಪರಭಾರೆ ಮಾಡಲು ಮತ್ತು ಲಾಭಗಳಿಸುವ ಉದ್ದೇಶದಿಂದ ಸರ್ಕಾರದ ಗಮನಕ್ಕೂ ತರದೆ ಈ ರೀತಿ ಸರ್ವೋಚ್ಛ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕಠಿಣಕ್ರಮ ಜರುಗಿಸುವಂತೆ ಇಂತಹ ಅಧಿಕಾರಿಗಳನ್ನು ಶೀಘ್ರ ತನಿಖೆಯ ಮೂಲಕ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ನೈಜ್ಯ ಹೋರಾಟಗಾರರ ವೇದಿಕೆಯು ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿಯವರನ್ನು ಒತ್ತಾಯಿಸುತ್ತಿದೆ.
ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ದುರ್ನಡತೆಯಿಂದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ತರದೆ ಮತ್ತು ಅನುಮತಿಯನ್ನು ಪಡೆಯದೆ ಸಿಬಿಐಗೆ ಪತ್ರ ಬರೆದಿರುವ ಐಎಫ್ಎಸ್ ಅಧಿಕಾರಿ ಆರ್ ಗೋಕುಲ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಈ ರೀತಿ ಸರ್ಕಾರದ ಬೆಲೆಬಾಳುವ ಅರಣ್ಯ ಆಸ್ತಿಯನ್ನು ಕೆಲವೇ ಅಧಿಕಾರಿಗಳು ಪರಭಾರೆ ಮಾಡಿ ಲಾಭಗಳಿಸುವ ಉದ್ದೇಶ ಹೊಂದಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಆದುದರಿಂದ ಜವಾಬ್ದಾರಿಯುತ್ತ ಸ್ಥಾನದಲ್ಲಿರುವ ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳಾದ ತಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಐಎಫ್ಎಸ್ ಅಧಿಕಾರಿ ಆರ್ ಗೋಕುಲ್ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳು ಈ ಹಿಂದೆ ಕಾರ್ಯನಿರ್ವಹಿಸಿದ ಹುದ್ದೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಪುನರ್ಪರಿಶೀಲಿಸುವ ಮೂಲಕ ಅವರ ಕರ್ತವ್ಯ ಲೋಪವನ್ನು ಇನ್ನಷ್ಟು ಆಳವಾಗಿ ತನಿಖೆ ನಡೆಸಬೇಕು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ಗಡೀಪಾರು ನೋಟಿಸ್: ಜೂ. 6ರಂದು ವಿಚಾರಣೆ
ಇನ್ನಷ್ಟು ಸಮಯ ವ್ಯರ್ಥಮಾಡದೆ ಈ ಪ್ರಕರಣದಲ್ಲಿ ಭಾಗಿಯಾಗಿ ಕರ್ತವ್ಯಲೋಪ ಎಸಗಿ ಸದರಿ ಅರಣ್ಯ ಭೂಮಿಯನ್ನು ಡಿ-ನೋಟಿಫಿಕೇಷನ್‌ಗೆ ಅರ್ಜಿ ಸಲ್ಲಿಸಿದ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಹಾಗೂ ಈ ಪ್ರಕರಣದಲ್ಲಿ ಕೈಚಳಕ ತೋರಿಸಿರುವ ನಿವೃತ್ತಿ ಹೊಂದಿದ ಅಧಿಕಾರಿಗಳ ಮೇಲೆ ತಕ್ಷಣ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ನೈಜ್ಯ ಹೋರಾಟಗಾರರ ವೇದಿಕೆಯಿಂದ ಆಗ್ರಹಿಸಿದರು.
ಹಿರಿಯ ಸಾಮಾಜಿಕ ಹೋರಾಟಗಾರರಾದ ಎಚ್ ಎಂ ವೆಂಕಟೇಶ್, ಬಿ ಎಸ್ ಲೋಕೇಶ್, ಎಂ ಜಗದೀಶ್, ಕುಣಿಗಲ್ ನರಸಿಂಹಮೂರ್ತಿ ಇದ್ದರು.