2022ರಲ್ಲಿ ಆರಂಭವಾದ ಬೀದರ್ ವಿಶ್ವವಿದ್ಯಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಬೇಕೆಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯ ಅನುಷ್ಠಾನ ಸಮಿತಿ ಒತ್ತಾಯಿಸಿದೆ.
ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ರಾಜ್ಯಪಾಲರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ʼಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ (ಕೆ) ಸ್ನಾತ್ತಕೋತ್ತರ ಕೇಂದ್ರಕ್ಕೆ ನೂತನ ವಿಶ್ವವಿದ್ಯಾಲಯ ಎಂದು ಘೋಷಣೆಯಾಗಿದ್ದು, ನಮಗೆ ಸಂತೋಷದ ವಿಷಯ. ಮುಖ್ಯವಾಗಿ ಭಾರತದ ಎಲ್ಲ ವಿಶ್ವವಿದ್ಯಾಲಯಗಳ ಅಧಿನಿಯಮದ ಮೂಲ ಬಾಂಬೆ ವಿಶ್ವವಿದ್ಯಾಲಯವಾಗಿದ್ದು, ಈ ಅಧಿನಿಯಮದ ಕಾನೂನು ರೂಪಿಸಿದ್ದು ಡಾ.ಅಂಬೇಡ್ಕರ್ ಅವರಾಗಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆಗೆ ಹೊಸದಾಗಿ ಘೋಷಣೆಯಾಗಿರುವ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಹೆಸರಿಡುವಂತೆ ಜಿಲ್ಲೆಯ ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳ ಬೇಡಿಕೆಯಾಗಿದೆʼ ಎಂದರು.
ಈ ಬೇಡಿಕೆ ಕುರಿತು 2024ರಲ್ಲಿ ಪತ್ರಿಕಾ ಹೇಳಿಕೆ ಮುಖಾಂತರ ಮನವಿ ಸಲ್ಲಿಸಲಾಗಿತ್ತು. ಆದರೆ ಅದನ್ನು ಪರಿಗಣಿಸಲಿಲ್ಲ. ಈ ಅಧಿವೇಶನದಲ್ಲಿ ಬೀದರ್ ವಿವಿಗೆ ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕೆಂದು ಪ್ರಸ್ತಾಪಿಸಬೇಕು. ಅಧಿವೇಶನ ಮುಗಿಯುವರೆಗೆ ಘೋಷಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೋಧಗಯಾ ಟೆಂಪಲ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ
ಈ ಸಂದರ್ಭದಲ್ಲಿ ಈ ಸಮಿತಿಯ ಪ್ರಮುಖರಾದ ಮುಕೇಶ್ ಚೆಲವಾ, ಭೀಮರಾವ್ ಮಾಲಗತ್ತಿ, ಪೃಥ್ವಿರಾಜ ಮುಧೋಳಕರ್, ಸಿದ್ದಾರ್ಥ ಭಾವಿದೊಡ್ಡಿ, ಸಿದ್ದಾರ್ಥ ಕೊಗಟುನೋರ, ದೇವರಾಜ ಜಾಧವ, ನಿತೀಶ ಶಿಂಧೆ ಸೇರಿದಂತೆ ಮತ್ತಿತರರಿದ್ದರು.