ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಿ ವಾಪಸ್ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಮುಸ್ಲಿಂ ಮುಖಂಡರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಮಧ್ಯಾಹ್ನ ನಮಾಜ್ ನಡೆಸಿದ ಬಳಿಕ ಕೋಲಾರ ನಗರದ ಟಿಪ್ಪು ಸುಲ್ತಾನ್ ರಸ್ತೆಯಲ್ಲಿನ ಬಿಲಾಲ್ ಮಸೀದಿ ಮುಂದೆ ಸೇರಿದ ಸಮುದಾಯದ ಮುಖಂಡರು, ಬಿತ್ತಿಪತ್ರ ಹಿಡಿದು, ‘ನಸೀರ್ ಅಹ್ಮದ್ ಸಾಬ್ ಜೊತೆ ಮುಸ್ಲಿಂ ಸಮುದಾಯ’ ಎಂಬ ಘೋಷಣೆ ಕೂಗಿದರು. ರಸ್ತೆ ತಡೆಹಿಡಿದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ನಸೀರ್ ಅಹ್ಮದ್ ರಾಜೀನಾಮೆ ಪಡೆದರೆ ಉಗ್ರ ಹೋರಾಟದ ಎಚ್ಚರಿಕೆ: ಎನ್.ಅಂಬರೀಷ್
ಪ್ರತಿಭಟನೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಪ್ಸರ್ ಮಾತನಾಡಿ, “ನಾವು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ನಮ್ಮ ಹಕ್ಕು ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ನಮ್ಮೆಲ್ಲರ ಮುಖಂಡ ನಸೀರ್ ವಿರುದ್ಧ ಕ್ರಮ ಕೈಗೊಂಡಿರುವುದು ಸರಿ ಅಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಅವರಿಗೆ ನ್ಯಾಯ ನೀಡುವಂತೆ ಮನವಿ ಮಾಡುತ್ತಿದ್ದೇವೆ” ಎಂದರು.
“ನಸೀರ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದಾರೆ. ಕಾಂಗ್ರೆಸ್ನ ಕಷ್ಟಕಾಲದಲ್ಲೂ ಆಪತ್ಭಾಂದವರಾಗಿ ಕೆಲಸ ಮಾಡಿದ್ದಾರೆ. ಮತ್ತೆ ರಾಜಕೀಯ ಸ್ಥಾನ ಮಾನ ನೀಡಿ ಅವರನ್ನು ಗೌರವಿಸಬೇಕು” ಎಂದು ಹೇಳಿದರು.
“ಕಾಂಗ್ರೆಸ್ ಸಂವಿಧಾನ ಉಳಿಸುವ ಏಕೈಕ ಪಕ್ಷ. ನಸೀರ್ ಆಗಲಿ, ಸಚಿವ ಜಮೀರ್ ಆಗಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಯಾವುದೇ ರೀತಿ ಮಾತನಾಡಿಲ್ಲ. ಜಮೀರ್ ಅವರು ಸ್ಟಾರ್ ಪ್ರಚಾರಕರಾಗಿ ಕೇರಳ ರಾಜ್ಯದಲ್ಲಿದ್ದರು” ಎಂದು ತಿಳಿಸಿದರು.
ಕೋಮುಲ್ ನಾಮಿನಿ ನಿರ್ದೇಶಕ ಶಂಷೀರ್ ಮಾತನಾಡಿ, “ನಾವೆಲ್ಲ ಕಾಂಗ್ರೆಸ್ ಜತೆಗೆ ಇದ್ದೇವೆ. ಈಗ ಉಂಟಾಗಿರುವ ತಪ್ಪುಗಳನ್ನು ತಿದ್ದಿಕೊಂಡರೆ ಪಕ್ಷಕ್ಕೆ ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲ ಕಿಡಿಗೇಡಿಗಳು ಹೈಕಮಾಂಡ್ಗೆ ತಪ್ಪು ಸಂದೇಶ ನೀಡಿರುವ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹೈಕಮಾಂಡ್ ಹಾಗೂ ನಮ್ಮ ಧರ್ಮಗುರುಗಳು ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ” ಎಂದರು.
“ನಸೀರ್ ನಮ್ಮ ನಾಯಕರು. ಅವರಿಗೆ ಉಪಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು, ಕೋರ್ ಕಮಿಟಿಯಲ್ಲಿದ್ದರು. ಅವರನ್ನು ಕೈಬಿಟ್ಟಿರುವುದು ತುಂಬಾ ನೋವುಂಟು ಮಾಡಿದೆ. ಕಾಂಗ್ರೆಸ್ ನಾವು ಕಟ್ಟಿ ಬೆಳೆಸಿದ ಪಕ್ಷ. ನಾವು ಪಕ್ಷದ ವಿರುದ್ಧ ನಿಂತಿಲ್ಲ. ಬದಲಾಗಿ ನಸೀರ್ ಅವರಿಗೆ ನ್ಯಾಯ ನೀಡುವಂತೆ ಕೇಳುತ್ತಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ
ಇನ್ನು ಮುಖಂಡ ಸೈಫ್ ಮಾತನಾಡಿ, “ನಸೀರ್ ಹಾಗೂ ಜಮೀರ್ ಜೊತೆ ನಮ್ಮ ಸಮುದಾಯ ಗಟ್ಟಿಯಾಗಿ ನಿಂತಿದೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ನಸೀರ್ ಜೊತೆ ಇರುವುದಾಗಿ ಹೇಳಿದ್ದಾರೆ. ನಸೀರ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ನೀಡಲಾಗಿತ್ತು. ಮುಂದೆ ಧರ್ಮದ ಗುರುಗಳು ಹೇಳಿದಂತೆ ನಾವು ಕೇಳುತ್ತೇವೆ” ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್ಗೆ ಶೇ 100ರಷ್ಟು ವೋಟ್ ಹಾಕಿರುವ ಯಾವುದಾದರೂ ಸಮುದಾಯ ಇದ್ದರೆ ಅದು ಮುಸ್ಲಿಂ ಸಮುದಾಯ. ಆದರೆ, ಈಗ ಈ ಸಮುದಾಯಕ್ಕೆ ಅನ್ಯಾಯ, ದ್ರೋಹ ಬಗೆಯುವ ರೀತಿಯ ವಾತಾವರಣ ನಿರ್ಮಾಣವಾಗಿದೆ. ಈಗ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅವರನ್ನು ಕೆಳಗಿಳಿಸಿರುವುದಕ್ಕೆ ಮುಸ್ಲಿಮರಿಗೆ ನೋವಾಗಿದೆ. ಧಾರ್ಮಿಕ ಮುಖಂಡರು, ಮೌಲ್ವಿಗಳು ಕೂಡ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ” ಎಂದರು.
“ಮುಸ್ಲಿಂ ಸಮುದಾಯಕ್ಕೆ ನ್ಯಾಯ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿ ಒತ್ತಾಯಿಸುತ್ತೇವೆ. ಮುಂದೆ ಚುನಾವಣೆಗಳು ಬರಲಿದ್ದು ನಮ್ಮ ಸಹಕಾರ ಬೇಕೆಂದರೆ, ನಮ್ಮ ಮತಗಳು ಬೇಕೆಂದರೆ ಅನ್ಯಾಯ ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (KUDA) ಅಧ್ಯಕ್ಷ ಹನೀಫ್, ಕಾಂಗ್ರೆಸ್ ಹಿರಿಯ ಮುಖಂಡರಾದ ಅಬ್ದುಲ್ ಖಯ್ಯುಂ, ಜಫರುಲ್ಲಾ, ಕೋಲಾರ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಫೈರೋಜ್ ಖಾನ್, ಸೈಫುಲ್ಲಾ, ಏಜಾಜ್, ಶಫಿ, ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ರಿದ್ ಯುವ ಮುಖಂಡರಾದ ಮನ್ಸೂರ್ ಅಲಿ, ಮೊಹಮ್ಮದ್ ನೂರ್, ಬಾಬರ್ , ಸಾಧೀಕ್, ರಿಯಾಜ್ ಗೋರು, ರೋಹಿದ್, ಸುಹೈಲ್, ಅರ್ಬಾಜ್ ಮುಂತಾದವರು ಉಪಸ್ಥಿತರಿದ್ದರು.




