ಈ ಲೇಖನವು ಭಾರತದ ಜಿಡಿಪಿ ಲೆಕ್ಕಾಚಾರದ ಪರಿಷ್ಕರಣೆ ಮತ್ತು ಅದರ ಪರಿಣಾಮಗಳ ಬಗ್ಗೆ ಸಮಗ್ರವಾಗಿ ವಿಶ್ಲೇಷಿಸುತ್ತದೆ. ಜಿಡಿಪಿ ಇನ್ನೂ ಆರ್ಥಿಕತೆಯ ಪ್ರಮುಖ ಮಾಪನವಾಗಿದ್ದರೂ, ಅದರ ಲೆಕ್ಕಾಚಾರದ ವಿಧಾನಗಳ ಬಗ್ಗೆ ಇರುವ ಟೀಕೆಗಳ ನಡುವೆಯೇ ಸರ್ಕಾರ ಹೊಸ ಬದಲಾವಣೆಗಳನ್ನು ತಂದಿದೆ. ಮುಖ್ಯವಾಗಿ 2022-23 ಅನ್ನು ಹೊಸ ಆಧಾರ ವರ್ಷವಾಗಿ ತೆಗೆದುಕೊಳ್ಳುವುದು, ಪೂರೈಕೆ-ಬಳಕೆ ಕೋಷ್ಟಕಗಳ (SUT) ಬಳಕೆ, ಡಬಲ್ ಡಿಪ್ಲೇಷನ್ ವಿಧಾನ, ಮತ್ತು ಉತ್ತಮ ದತ್ತಾಂಶ ಮೂಲಗಳನ್ನು ಸೇರಿಸುವುದು ಜಿಡಿಪಿಯ ನಿಖರತೆಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ. ಆದರೆ ಹೊಸ ಅಂದಾಜುಗಳ ಪ್ರಕಾರ ಭಾರತದ ಆರ್ಥಿಕತೆಯ ಗಾತ್ರ ಹಿಂದಿನ ಅಂದಾಜಿಗಿಂತ ಕಡಿಮೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಈ ಬದಲಾವಣೆಗಳು ಆರ್ಥಿಕತೆಯ ಬಗ್ಗೆ ನಮ್ಮ ಗ್ರಹಿಕೆಯನ್ನು ಬದಲಿಸುವುದರ ಜೊತೆಗೆ, ಸರ್ಕಾರದ ಸಾಲ, ಬಜೆಟ್ ಮತ್ತು ಭವಿಷ್ಯದ ಆರ್ಥಿಕ ಗುರಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಜಿಡಿಪಿಯನ್ನು ಒಂದು ದೇಶದ ಆರ್ಥಿಕತೆಯ ಮಾಪನವನ್ನಾಗಿ ಬಳಸುವ ಬಗ್ಗೆ ವಿವಾದ ಲಾಗಾಯ್ತಿನಿಂದ ಇದೆ. ಮಾನವ ಅಭಿವೃದ್ಧಿ ಸೂಚಿಯಂತಹ ಹಲವು ಪರ್ಯಾಯ ಕ್ರಮಗಳನ್ನು ಸೂಚಿಸಲಾಗಿದೆ. ಆದರೂ ಇಂದಿಗೂ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಜಿಡಿಪಿಯನ್ನೇ ವ್ಯಾಪಕವಾಗಿ ಬಳಸಲಾಗುತ್ತಿದೆ. ಜಿಡಿಪಿ ಗತಿಯನ್ನು ಪರಿಶೀಲಿಸಿ ಆರ್ಥಿಕತೆ ಬೆಳೆಯುತ್ತಿದೆಯೋ ಇಲ್ಲ ಕುಸಿಯುತ್ತಿದೆಯೋ ಅನ್ನುವುದನ್ನು ಅಂದಾಜಿಸಲಾಗುತ್ತದೆ. ಜನರ ಜೀವನಮಟ್ಟವನ್ನು ಅರ್ಥಮಾಡಿಕೊಳ್ಳುವುದಕ್ಕೂ ಇದನ್ನು ಗಮನಿಸಲಾಗುತ್ತದೆ. ಹಾಗಾಗಿ ಸರ್ಕಾರದ ನೀತಿ ನಿರೂಪಕರು, ಉದ್ಯಮಗಳು ಮತ್ತು ಹಣಕಾಸು ಸಂಸ್ಥೆಗಳು ಆರ್ಥಿಕ ಯೋಜನೆಗಳನ್ನು ರೂಪಿಸುವುದಕ್ಕೆ, ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದಕ್ಕೆ ಜಿಡಿಪಿಯನ್ನೇ ಮಾಪನವನ್ನಾಗಿ ಬಳಸುತ್ತಿದ್ದಾರೆ.
ನಮ್ಮ ಸರ್ಕಾರವೂ ಜಿಡಿಪಿಯ ಕಣ್ಣಲ್ಲೇ ದೇಶದ ಆರ್ಥಿಕತೆಯನ್ನು, ಜನರ ಬದುಕನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ನಮ್ಮ ಜಿಡಿಪಿಯ ಲೆಕ್ಕಾಚಾರದ ಬಗ್ಗೆಯೂ ತೀವ್ರವಾದ ಅನುಮಾನಗಳು, ಟೀಕೆಗಳು ವ್ಯಕ್ತವಾಗಿದ್ದವು. ನಮ್ಮ ಆರ್ಥಿಕತೆಯ ಮುಖ್ಯ ಭಾಗವಾದ ಅಸಂಘಟಿತ ವಲಯದ ಬಗ್ಗೆ ನಮ್ಮಲ್ಲಿ ಸರಿಯಾದ ಮಾಹಿತಿ ಇಲ್ಲ. ಸಂಘಟಿತ ವಲಯದ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿಯನ್ನೇ ಅದಕ್ಕೂ ಅನ್ವಯಿಸುತ್ತಿದ್ದೆವು. ಆರ್ಥಿಕತೆಯನ್ನು ಹೋಲಿಸುವುದಕ್ಕೆ ಬಳಸುವ ಆಧಾರ ವರ್ಷ(ಬೇಸ್ ಇಯರ್) ತೀರಾ ಹಳತಾಗಿದೆ. ಕಳೆದ 15ವರ್ಷಗಳಿಂದ ಭಾರತದಲ್ಲಿ 2011-12ನ್ನೇ ಆಧಾರ ವರ್ಷವನ್ನಾಗಿ ಇಟ್ಟುಕೊಳ್ಳಲಾಗಿತ್ತು. ನಮ್ಮಲ್ಲಿ ಜನಗಣತಿಯಾಗಿಲ್ಲ. ನಮ್ಮ ಜನಸಂಖ್ಯೆ ಎಷ್ಟೆಂಬುದೇ ನಮಗೆ ಕರಾರುವಾಕ್ಕಾಗಿ ಗೊತ್ತಿಲ್ಲ. ಹೀಗೆ ಹಲವು ಟೀಕೆಗಳು ಇವೆ.
ಈ ನ್ಯೂನತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಸಾಂಖ್ಯಿಕ ಸಚಿವಾಲಯವು(ಮೊಸ್ಪಿ) ಪರಿಷ್ಕೃತ ಜಿಡಿಪಿ ಅಂದಾಜನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಜಿಡಿಪಿ ಅಂದಾಜಿನ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ಆಧಾರ ವರ್ಷವನ್ನು ಬದಲಿಸಲಾಗಿದೆ. ಈ ಬದಲಾವಣೆ ಅನಿವಾರ್ಯವಾಗಿತ್ತು. ಯಾಕೆಂದರೆ ದಿನಕಳೆದಂತೆ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳು, ವಸ್ತುಗಳ ಬೆಲೆ, ಜನರು ಖರ್ಚು ಮಾಡುವ ಕ್ರಮ, ಹೂಡಿಕೆಯ ಕ್ರಮ, ತಂತ್ರಜ್ಞಾನದ ಬೆಳವಣಿಗೆ ಹೀಗೆ ಪ್ರತಿಯೊಂದರಲ್ಲೂ ವಿಪರೀತ ಬದಲಾವಣೆಗಳಾಗುತ್ತಿರುತ್ತವೆ. ಹಳೆಯ ವರ್ಷವನ್ನೇ ಆಧಾರವಾಗಿ ಇಟ್ಟುಕೊಂಡರೆ ಇಂದಿನ ಆರ್ಥಿಕತೆಯ ವಾಸ್ತವ ಚಿತ್ರ ತಿಳಿಯುವುದಿಲ್ಲ. ಉದಾಹರಣೆಗೆ, ಇಂದು ಇಡೀ ಆರ್ಥಿಕತೆ ಕಂಪ್ಯೂಟರುಗಳನ್ನು ಬಳಸುತ್ತಿರುವಾಗ, ಟೈಪ್ ರೈಟರ್ಗಳ ಉತ್ಪಾದನೆ ಮತ್ತು ಬೆಲೆಯನ್ನು ನೋಡಿ ಜಿಡಿಪಿ ಲೆಕ್ಕ ಹಾಕುವುದು ಸರಿಯಲ್ಲ. ಹಾಗಾಗಿ ಆಗ್ಗಿಂದಾಗ್ಗೆ ಆಧಾರ ವರ್ಷವನ್ನು ಬದಲಿಸಲಾಗುತ್ತಿರುತ್ತದೆ.
ಆಧಾರ ವರ್ಷದ ಬದಲಾವಣೆ:
ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ರೀತಿ ಆಧಾರ ವರ್ಷವನ್ನು ಬದಲಾಯಿಸುತ್ತಿರುವುದು ಇದು ಎಂಟನೇ ಬಾರಿ. ಈಗ 2022-23 ಅನ್ನು ಆಧಾರ ವರ್ಷವಾಗಿ ಆರಿಸಿಕೊಳ್ಳಲಾಗಿದೆ. 2022-23ರಲ್ಲಿ ಕೋವಿಡ್ ಇತ್ಯಾದಿ ಯಾವುದೇ ದೊಡ್ಡ ಏರುಪೇರುಗಳಿಲ್ಲದಿದ್ದ ಕಾರಣ ಒಂದು ದೇಶದ ಜಿಡಿಪಿಯನ್ನು ಹಲವು ಬಗೆಗಳಲ್ಲಿ ಅಂದಾಜು ಮಾಡಬಹುದು. ದೇಶದ ಆ ವರ್ಷದ ಒಟ್ಟು ಉತ್ಪದನೆಯನ್ನು, ಅಥವಾ ಒಟ್ಟು ವರಮಾನವನ್ನು, ಅಥವಾ ಒಟ್ಟಾರೆ ಜನರು ಮಾಡುವ ಖರ್ಚನ್ನು ಆಧರಿಸಿ ಜಿಡಿಪಿಯನ್ನು ಲೆಕ್ಕ ಹಾಕಬಹುದು.

ಅದನ್ನು ಹೋಲಿಕೆಗೆ ಆಧಾರವಾಗಿ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಅಂದರೆ ಇನ್ನು ಮುಂದೆ ತಯಾರಾಗುವ ಸರಕು ಹಾಗೂ ಸೇವೆಗಳನ್ನು ಮತ್ತು ಅವುಗಳನ್ನು ಮಾರುವ ಹಾಗೂ ಕೊಳ್ಳುವ ಬೆಲೆಯನ್ನು 2022-23ರ ಉತ್ಪನ್ನ ಹಾಗೂ ಬೆಲೆಗಳೊಂದಿಗೆ ಹೋಲಿಸಲಾಗುತ್ತದೆ. ಈ ಬದಲಾವಣೆ ಜಿಡಿಪಿಗೆ ಮಾತ್ರ ಸೀಮಿತವಲ್ಲ. ‘ಗ್ರಾಹಕ ಬೆಲೆ ಸೂಚ್ಯಂಕ’ (ಸಿಪಿಐ) ಮತ್ತು ‘ಕೈಗಾರಿಕಾ ಉತ್ಪಾದನಾ ಸೂಚ್ಯಂಕ'(IIP) ಇತ್ಯಾದಿ ಪ್ರಮುಖ ಸೂಚಿಗಳಿಗೂ ಇದೇ ಆಧಾರವಾಗಿರುತ್ತದೆ.
ಸಾಂಖ್ಯಿಕ ಅಂತರ
ಒಂದು ದೇಶದ ಜಿಡಿಪಿಯನ್ನು ಹಲವು ಬಗೆಯಲ್ಲಿ ಅಂದಾಜು ಮಾಡಬಹುದು. ದೇಶದ ಆ ವರ್ಷದ ಒಟ್ಟು ಉತ್ಪಾದನೆಯನ್ನು, ಅಥವಾ ವರಮಾನವನ್ನು, ಅಥವಾ ಒಟ್ಟಾರೆ ಜನರು ಮಾಡುವ ಖರ್ಚನ್ನು ಆಧರಿಸಿ ಜಿಡಿಪಿಯನ್ನು ಲೆಕ್ಕ ಹಾಕಬಹುದು. ಜಿಡಿಪಿಯನ್ನು ಲೆಕ್ಕ ಹಾಕುವುದಕ್ಕೆ ನೇರ ಕ್ರಮ ಅಂದರೆ ಒಂದು ದೇಶ ಒಂದು ನಿರ್ದಿಷ್ಟ ವರ್ಷದಲ್ಲಿ ಉತ್ಪಾದಿಸುವ ಎಲ್ಲದರ ಒಟ್ಟು ಮೌಲ್ಯವನ್ನು ಲೆಕ್ಕ ಹಾಕುವುದು. ಇದು ಒಂದು ವರ್ಷದಲ್ಲಿ ಆರ್ಥಿಕತೆಯ ವಿವಿಧ ವಲಯಗಳು ಸೃಷ್ಟಿಸಿದ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ. ಇದನ್ನು ಒಟ್ಟು ಮೌಲ್ಯವರ್ಧನೆ ಅಥವಾ ಜಿವಿಎ(ಗ್ರಾಸ್ ವ್ಯಾಲ್ಯೂ ಆಡೆಡ್) ಎಂದು ಕರೆಯುತ್ತಾರೆ.
ಆರ್ಥಿಕತೆಯನ್ನು ನೋಡುವ ಇನ್ನೊಂದು ಕ್ರಮವೆಂದರೆ ವಿಭಿನ್ನ ಜನ ಅಥವಾ ಅರ್ಥಿಕತೆಯ ವಿಭಿನ್ನ ಗುಂಪುಗಳು ( ಅದು ವ್ಯಕ್ತಿಗಳಾಗಿರಬಹುದು, ಸರ್ಕಾರವಾಗಿರಬಹುದು ಅಥವಾ ವ್ಯಾಪಾರ ಉದ್ದಿಮೆಗಳಾಗಿರಬಹುದು) ಮಾಡುವ ಎಲ್ಲಾ ಖರ್ಚುಗಳ ಮೊತ್ತವನ್ನು ಲೆಕ್ಕ ಹಾಕುವುದು. ಇದನ್ನು ಜಿಡಿಪಿ ಎಂದು ಕರೆಯುತ್ತಾರೆ. ಇವೆರಡರ ನಡುವಿನ ಸಂಬಂಧವನ್ನು ಕೆಳಗಿನ ಸಮೀಕರಣದ ಮೂಲಕ ವಿವರಿಸಬಹುದು.
ಜಿಡಿಪಿ = ಜಿವಿಎ+ನಿವಳ ಪರೋಕ್ಷ ತೆರಿಗೆ,
ಇಲ್ಲಿ ನಿವ್ವಳ ಪರೋಕ್ಷ ತೆರಿಗೆ ಅಂದರೆ ಸರ್ಕಾರ ವಿವಿಧ ಸರಕುಗಳ ಮೇಲೆ ಹಾಕುವ ತೆರಿಗೆಯಲ್ಲಿ ಸರ್ಕಾರ ವಿಭಿನ್ನ ಸರಕುಗಳಿಗೆ ಕೊಡುವ ಸಬ್ಸಿಡಿಯನ್ನು ಕಳೆದಾಗ ಬರುವ ಮೊತ್ತ.
ಸೈದ್ಧಾಂತಿಕವಾಗಿ ಇವೆರಡೂ ಸಮನಾಗಿ ಇರಬೇಕು. ಆದರೆ ಮೋಸ್ಪಿ ಹೇಳುವಂತೆ ಎರಡು ಒಂದೇ ಇರುವುದಿಲ್ಲ. ಅವೆರಡರ ನಡುವಿನ ವ್ಯತ್ಯಾಸವನ್ನು ಸಾಂಖ್ಯಿಕ ಅಂತರ (ಸ್ಪಾಟಿಸ್ಟಿಕಲ್ ಡಿಸ್ಟ್ರಿಪೆನ್ಸಿ) ಎಂದು ಕರೆಯಲಾಗಿದೆ. ಹೀಗೆ ವ್ಯತ್ಯಾಸ ಬರುವುದಕ್ಕೆ ಕಾರಣ ಕೆಲವೊಮ್ಮೆ ಖರ್ಚಿಗೆ ಸಂಬಂಧಿಸಿದ ಮಾಹಿತಿಗಳು ಸಮಯಕ್ಕೆ ಸಿಗದೇ ಇರುವುದು. ಉದಾಹರಣೆಗೆ ಒಂದು ಕಾರು ಉತ್ಪಾದನೆಯಾದ ಲೆಕ್ಕ ಸಿಗುತ್ತದೆ. ಅದನ್ನು ಯಾರು ಕೊಂಡರು, ಅಥವಾ ಖರ್ಚಾಗದೆ ಹಾಗೇ ಉಳಿದಿದೆಯೇ ಇತ್ಯಾದಿ ಮಾಹಿತಿಗಳು ತಕ್ಷಣ ಸಿಗದೇ ಇರಬಹುದು. ಹೀಗೆ ಹಲವು ಕಾರಣಗಳಿಂದಾಗಿ ಎರಡರ ನಡುವೆ ವ್ಯತ್ಯಾಸ ಇರುತ್ತದೆ. ಅದನ್ನು ಸರಿಪಡಿಸುವುದಕ್ಕೆ ಉತ್ಪನ್ನ ಸಮತೋಲನ ಸಿದ್ಧಾಂತವನ್ನು ಅನುಸರಿಸಲಾಗಿದೆ. ಅಂದರೆ ಒಟ್ಟು ಪೂರೈಕೆ ಒಟ್ಟು ಬಳಕೆಗೆ ಸಮನಾಗಿರಬೇಕು ಅನ್ನುವ ನಿಯಮವನ್ನು ಅನುಸರಿಸಿ ಎರಡರ ನಡುವೆ ಸಮತೋಲನವನ್ನು ಸ್ಥಾಪಿಸಲು ಪ್ರಯತ್ನಿಸಲಾಗಿದೆ. ಅಂದರೆ ಒಟ್ಟು ಪೂರೈಕೆ (ಉತ್ಪಾದನೆ + ಆಮದು) = ಒಟ್ಟು ಬಳಕೆ (ಖರ್ಚು + ರಫ್ತು) ಆಗಿರುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಪೂರೈಕೆ ಮತ್ತು ಬಳಕೆ ಕೋಷ್ಟಕದ (SUT) ಮೂಲಕ ಉತ್ಪಾದನೆ. ಆದಾಯ ಮತ್ತು ವೆಚ್ಚದ ಅಂಕಿಅಂಶಗಳನ್ನು ಪರಸ್ಪರ ತಾಳೆ ನೋಡಿ ಸಮತೋಲನಗೊಳಿಸಲು ಪ್ರಯತ್ನಿಸಲಾಗಿದೆ. ಭಾರತದ ಹೊಸ ಜಿಡಿಪಿ ಸರಣಿಯಲ್ಲಿ ಈ SUT ಚೌಕಟ್ಟನ್ನು ವ್ಯವಸ್ಥಿತವಾಗಿ ಬಳಸಲಾಗುತ್ತಿದೆ. ದೇಶದ ಒಟ್ಟು ಪೂರೈಕೆ ಮತ್ತು ಒಟ್ಟು ಬೇಡಿಕೆಯನ್ನು ತಾಳೆ ಮಾಡುವ ಮೂಲಕ ಲೆಕ್ಕಾಚಾರದಲ್ಲಿ ಸ್ಥಿರತೆ ತರಲು ಯತ್ನಿಸಲಾಗುತ್ತಿದೆ.
ಪೂರೈಕೆ ಮತ್ತು ಬಳಕೆ ಕೋಷ್ಟಕಗಳು(Supply and Use Tables – SUT)
ಜಿಡಿಪಿ ಲೆಕ್ಕಾಚಾರದಲ್ಲಿ ಪೂರೈಕೆ ಮತ್ತು ಬಳಕೆ ಕೋಷ್ಟಕಗಳು ಅತ್ಯಂತ ಶಕ್ತಿಯುತವಾದ ಮತ್ತು ವ್ಯವಸ್ಥಿತವಾದ ಸಾಧನಗಳಾಗಿವೆ. ಇವು ಆರ್ಥಿಕತೆಯ ಒಂದು ‘ಕನ್ನಡಿ’ಯಂತೆ ಕೆಲಸ ಮಾಡುತ್ತವೆ.
ಸರಳವಾಗಿ ಹೇಳುವುದಾದರೆ, ಈ ಕೋಷ್ಟಕವು ಒಂದು ದೇಶದಲ್ಲಿ ಯಾವೆಲ್ಲಾ ಸರಕು ಮತ್ತು ಸೇವೆಗಳು ಎಲ್ಲಿಂದ ಪೂರೈಕೆಯಾದವು ಮತ್ತು ಎಲ್ಲಿ ಬಳಕೆಯಾದವು ಎಂಬುದನ್ನು ವಿವರಿಸುತ್ತದೆ. ಆರ್ಥಿಕತೆಯ ಪ್ರತಿಯೊಂದು ವಲಯದ (ಉದಾಹರಣೆಗೆ: ಕೃಷಿ, ಕೈಗಾರಿಕೆ, ಸೇವೆ) ಮಾಹಿತಿಗಳನ್ನು ಇದು ಪರಸ್ಪರ ತಾಳೆ ಹಾಕುತ್ತದೆ. ಇದರಲ್ಲಿ ಮುಖ್ಯವಾಗಿ ಎರಡು ಭಾಗಗಳಿರುತ್ತವೆ. ಪೂರೈಕೆ ಕೋಷ್ಟಕ ಹಾಗೂ ಬಳಕೆಯ ಕೋಷ್ಟಕ.
1.ಪೂರೈಕೆ ಕೋಷ್ಟಕವು ಆರ್ಥಿಕತೆಗೆ ಸರಕುಗಳು ಎಲ್ಲಿಂದ ಸರಬರಾಜು ಆದವು ಎಂಬುದನ್ನು ದಾಖಲಿಸುತ್ತದೆ. ಇದರಲ್ಲಿ ನಮ್ಮ ದೇಶದ ಒಳಗಿನ ಕೈಗಾರಿಕೆಗಳು ಮತ್ತು ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳು ಹಾಗೂ ಬೇರೆ ದೇಶಗಳಿಂದ ನಾವು ತರಿಸಿಕೊಂಡ ವಸ್ತುಗಳು ಸೇರಿರುತ್ತವೆ.
ಒಟ್ಟು ಪೂರೈಕೆ = (ದೇಶೀಯ ಉತ್ಪಾದನೆ + ಆಮದುಗಳು + ವ್ಯಾಪಾರ ಮತ್ತು ಸಾರಿಗೆ ವೆಚ್ಚಗಳು + ತೆರಿಗೆಗಳು – ಸಬ್ಸಿಡಿಗಳು).
2.ಬಳಕೆ ಕೋಷ್ಟಕವು ಪೂರೈಕೆಯಾದ ಸರಕುಗಳು ಎಲ್ಲಿ ಬಳಕೆಯಾದವು ಎಂಬುದನ್ನು ತೋರಿಸುತ್ತದೆ. ಇಲ್ಲಿ ಬಳಕೆ ಎಂದರೆ ಮಧ್ಯಂತರ ಬಳಕೆ (Intermediate Consumption): ಮತ್ತೊಂದು ವಸ್ತುವಿನ ತಯಾರಿಕೆಗೆ ಬಳಸಬಹುದು. (ಉದಾಹರಣೆಗೆ: ಪೂರೈಕೆಯಾದ ಹಿಟ್ಟನ್ನು ಬ್ರೆಡ್ ತಯಾರಿಸಲು ಬಳಸುವುದು). ಎರಡನೆಯದು ಅಂತಿಮ ಸರಕಾಗಿ ಬಳಸುವುದು. ಮೂರನೆಯದು ರಫ್ತು ಮಾಡಬಹುದು.
ಸಟ್ನ (SUT) ಅತ್ಯಂತ ಪ್ರಮುಖ ಕೆಲಸವೆಂದರೆ ಪೂರೈಕೆ ಹಾಗೂ ಬಳಕೆಯ ನಡುವೆ ಸಮತೋಲನ ಸ್ಥಾಪಿಸುವುದು. ಆರ್ಥಿಕ ನಿಯಮದ ಪ್ರಕಾರ ಒಟ್ಟು ಪೂರೈಕೆ ಯಾವಾಗಲೂ ಒಟ್ಟು ಬಳಕೆಗೆ ಸಮನಾಗಿರಬೇಕು. ಒಂದು ವೇಳೆ ಪೂರೈಕೆ ಹೆಚ್ಚಿದ್ದು ಬಳಕೆ ಕಡಿಮೆಯಿದ್ದರೆ, ಆ ವಸ್ತುಗಳು ‘ದಾಸ್ತಾನು’ ರೂಪದಲ್ಲಿವೆ ಎಂದು ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ಅಂಕಿ-ಅಂಶಗಳಲ್ಲಿ ವ್ಯತ್ಯಾಸವಿದ್ದರೆ (Statistical Discrepancy), ಅದನ್ನು ಎಲ್ಲಿ ತಪ್ಪಾಗಿದೆ ಎಂದು ಹುಡುಕಿ ಸರಿಪಡಿಸಲು ಈ ಕೋಷ್ಟಕಗಳು ಸಹಾಯ ಮಾಡುತ್ತವೆ.
ಜಿಡಿಪಿಯನ್ನು ಲೆಕ್ಕ ಹಾಕುವಾಗ ಇಲ್ಲಿಯವರೆಗೆ ಜಿಡಿಪಿಯನ್ನು ಒಟ್ಟಾರೆ ಉತ್ಪಾದನೆ ಮತ್ತು ಖರ್ಚನ್ನು ಆಧರಿಸಿ ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತಿತ್ತು. ಇವೆರಡರ ನಡುವೆ ದೊಡ್ಡ ವ್ಯತ್ಯಾಸ ಬರುತ್ತಿತ್ತು. ಈಗಿನ ಕ್ರಮದಲ್ಲಿ ಉತ್ಪಾದನೆಯ ಅಂಕಿ-ಅಂಶಗಳು ಮತ್ತು ಖರ್ಚಿನ ಅಂಕಿ-ಅಂಶಗಳನ್ನು ಒಂದೇ ಚೌಕಟ್ಟಿನಲ್ಲಿ ತಂದು ತಾಳೆ ಮಾಡಲಾಗುತ್ತಿದೆ. ಯಾವುದಾದರೂ ಒಂದು ವಲಯದ ಮಾಹಿತಿ ಸಿಗದಿದ್ದರೆ ಬೇರೆ ಮೂಲಗಳಿಂದ ಮಾಹಿತಿಯನ್ನು ಬಳಸಿಕೊಂಡು ಅದನ್ನು ಅಂದಾಜು ಮಾಡಲಾಗುತ್ತದೆ.
ಪರಿಮಾಣಾತ್ಮಕ ವಿಸ್ತರಣಾವಿಧಾನ(Volume Extrapolation Method)
ಜಿಡಿಪಿಯನ್ನು ಅಳೆಯುವಾಗ ‘ಹಣದುಬ್ಬರ’ ಅಥವಾ ಬೆಲೆ ಏರಿಕೆಯ ಪ್ರಭಾವವನ್ನು ತೆಗೆದುಹಾಕಿ, ಕೇವಲ ಉತ್ಪಾದನೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದು ಬಹಳ ಮುಖ್ಯ. ಇದನ್ನು ಮಾಡಲು ಸಾಮಾನ್ಯವಾಗಿ ‘ಡಿಪ್ಲೇಷನ್’ ಕ್ರಮ ಬಳಸುತ್ತಾರೆ. ಆದರೆ, ಬೆಲೆಗಳ ನಿಖರವಾದ ಸೂಚ್ಯಂಕ ಲಭ್ಯವಿಲ್ಲದಿದ್ದಾಗ, ಈ ‘ಪರಿಮಾಣಾತ್ಮಕ ವಿಸ್ತರಣಾ ವಿಧಾನ’ವನ್ನು ಬಳಸಲಾಗುತ್ತದೆ.
ಹೆಸರೇ ಸೂಚಿಸುವಂತೆ, ಇಲ್ಲಿ ಉತ್ಪಾದನೆಯ ಪ್ರಮಾಣ ಅಥವಾ ಗಾತ್ರವನ್ನು ಆಧಾರವಾಗಿ ತೆಗೆದುಕೊಳ್ಳಲಾಗುತ್ತದೆ. ಮೊದಲು ಆಧಾರ ವರ್ಷದಲ್ಲಿ ಒಂದು ನಿರ್ದಿಷ್ಟ ವಲಯದ ಒಟ್ಟು ಮೌಲ್ಯ ಎಷ್ಟಿತ್ತು ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಆ ವಲಯದ ಬೆಳವಣಿಗೆಯನ್ನು ಅಳೆಯಲು ಒಂದು ಭೌತಿಕ ಸೂಚಿಯನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ: ರೈಲ್ವೆ ವಲಯದಲ್ಲಿ ಬೆಳವಣಿಗೆಯನ್ನು ಅಳೆಯುವುದಕ್ಕೆ ಸಾಗಿಸಿದ ಸರಕಿನ ಪ್ರಮಾಣ ಅಥವಾ ಪ್ರಯಾಣಿಕರ ಸಂಖ್ಯೆಯನ್ನು ಸೂಚಿಯಾಗಿ ತೆಗೆದುಕೊಳ್ಳಬಹುದು. ಇದನ್ನು ಆಧರಿಸಿ ಮುಂದಿನ ವರ್ಷದಲ್ಲಿ ಉತ್ಪಾದನೆಯ ಪ್ರಮಾಣದಲ್ಲಿ ಆಗಿರುವ ಬೆಳವಣಿಗೆಯನ್ನು ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ ಪ್ರಯಾಣಿಕರ ಸಂಖ್ಯೆ ಎಷ್ಟು ಜಾಸ್ತಿಯಾಗಿದೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ. ಅದರಲ್ಲಿ 5% ಏರಿಕೆಯಾಗಿದ್ದರೆ ರೈಲ್ವೆ ವಲಯದ ಮೌಲ್ಯ ಆ ವರ್ಷ ಶೇಕಡ 5ರಷ್ಟು ಹೆಚ್ಚಾಗಿದೆ ಎಂದು ನಿರ್ಧರಿಸಲಾಗುತ್ತದೆ. ಉತ್ಪಾದನಾ ಬೆಲೆ ಸೂಚ್ಯಂಕ ಲಭ್ಯವಿಲ್ಲದ ಸೇವಾ ವಲಯಗಳಂತಹ ಕಡೆಗಳಲ್ಲಿ ಇದನ್ನು ಬಳಸಲಾಗುತ್ತಿದೆ.
ಡಬಲ್ ಡಿಪ್ಲೇಷನ್:
ಈಗಿನ ಜಿಡಿಪಿ ಅಂದಾಜು ಮಾಡುವ ಕ್ರಮದಲ್ಲಿ ಇನ್ನೊಂದು ಸುಧಾರಣೆ ಅಂದರೆ ಡಬಲ್ ಡಿಪ್ಲೇಷನ್ ಕ್ರಮದ ಬಳಕೆ. ಇದಕ್ಕಾಗಿ ಹಲವು ಅರ್ಥಶಾಸ್ತ್ರಜ್ಞರು ಒತ್ತಾಯಿಸುತ್ತಲೇ ಇದ್ದರು.
ಏನಿದು ಡಬಲ್ಡಿಪ್ಲೇಷನ್ ಕ್ರಮ?
ಜಿಡಿಪಿಯನ್ನು ಅಂದಾಜು ಮಾಡುವುದಕ್ಕೆ ದೇಶದಲ್ಲಿ ತಯಾರಾದ ಒಟ್ಟಾರೆ ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗೆ ಮಾರುಕಟ್ಟೆ ಮೌಲ್ಯದಲ್ಲಿ ಲೆಕ್ಕ ಹಾಕಿದ ಜಿಡಿಪಿಯನ್ನು ನಾಮಿನಲ್ ಜಿಡಿಪಿ ಎನ್ನಲಾಗುತ್ತದೆ. ಇದರ ಸಮಸ್ಯೆ ಅಂದರೆ ಒಟ್ಟಾರೆ ಉತ್ಪನ್ನ ಅಷ್ಟೇ ಇದ್ದರೂ ಉತ್ಪಾದನೆಯಾದ ಸರಕುಗಳ ಬೆಲೆಗಳಲ್ಲಿ ಏರಿಕೆಯಾದರೆ ಜಿಡಿಪಿಯಲ್ಲಿ ಏರಿಕೆಯಾಗುತ್ತದೆ. ಆದರೆ ವಾಸ್ತವದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದಿಲ್ಲ. ಅವುಗಳ ಬೆಲೆಗಳಲ್ಲಿ ಮಾತ್ರ ಏರಿಕೆಯಾಗಿರುತ್ತದೆ. ಅದರಿಂದ ನೈಜ ಜಿಡಿಪಿಯನ್ನು ಲೆಕ್ಕ ಹಾಕುವುದಕ್ಕೆ ನಾಮಿನಲ್ ಜಿಡಿಪಿಯಿಂದ ಹಣದುಬ್ಬರದ ದರವನ್ನು ಕಳೆಯಲಾಗುತ್ತದೆ. ಹೀಗೆ ಹಣದುಬ್ಬರದ ಪರಿಣಾಮವನ್ನು ತೆಗೆಯುವ ಪ್ರಕ್ರಿಯೆಯನ್ನು ಡಿಪ್ಲೇಷನ್ ಎಂದು ಕರೆಯುತ್ತಾರೆ. ಹೀಗೆ ಹಣದುಬ್ಬರದ ಪರಿಣಾಮವನ್ನು ಕಳೆದು ಅಂದಾಜು ಮಾಡಿದ ನೈಜ ಜಿವಿಎ ನಿಜವಾಗಿ ಉತ್ಪಾದನಾ ಪ್ರಕ್ರಿಯೆಯಿಂದಾಗಿ ಹೆಚ್ಚುವರಿಯಾಗಿ ಸೇರ್ಪಡೆಯಾದ ಮೌಲ್ಯವನ್ನು ಅಥವಾ ಮೌಲ್ಯವರ್ಧನೆಯನ್ನು ತೋರಿಸುತ್ತದೆ.
ಈವರೆಗೂ ಅಂತಿಮ ಉತ್ಪನ್ನದ ಬೆಲೆಯ ಪರಿಣಾಮವನ್ನು ಮಾತ್ರ ಸರಿತೂಗಿಸುವ ಕೆಲಸ ಮಾಡಲಾಗುತ್ತಿತ್ತು. ಅಂದರೆ ಕೇವಲ ಅಂತಿಮ ಉತ್ಪನ್ನದ ಮೌಲ್ಯದಿಂದ ಮಾತ್ರ ಹಣದುಬ್ಬರದ ದರವನ್ನು ಕಳೆಯಲಾಗುತ್ತಿತ್ತು. ಇದನ್ನು ಸಿಂಗಲ್ ಡಿಪ್ಲೇಷನ್ ಎಂದು ಕರೆಯಲಾಗುತ್ತದೆ. ಇದರ ಸಮಸ್ಯೆಯೆಂದರೆ ಉತ್ಪಾದನೆ ಅಷ್ಟೇ ಇದ್ದು ಉತ್ಪಾದನೆಗೆ ಬಳಸುವ ಕಚ್ಚಾಪದಾರ್ಥಗಳ ಬೆಲೆ ಕಡಿಮೆಯಾದರೂ ಜಿಡಿಪಿ ಹೆಚ್ಚಾದಂತೆ ತೋರುತ್ತಿತ್ತು. ಹಲವು ಅರ್ಥಶಾಸ್ತ್ರಜ್ಞರು ಜಿಡಿಪಿ ಹೆಚ್ಚಳಕ್ಕೆ ಇದನ್ನೇ ಕಾರಣ ಎಂದು ಟೀಕಿಸಿದ್ದರು. ಕಚ್ಚಾವಸ್ತುಗಳ ಮತ್ತು ಸಿದ್ದಪಡಿಸಿದ ವಸ್ತುಗಳ ಬೆಲೆಗಳು ಒಂದೇ ಪ್ರಮಾಣದಲ್ಲಿ ಬದಲಾಗುವುದಿಲ್ಲ. ಆದ್ದರಿಂದ ಇವೆರಡರ ಮೌಲ್ಯಗಳನ್ನು ಅವುಗಳ ಬೆಲೆಗೆ ಅನುಗುಣವಾಗಿ ಪ್ರತ್ಯೇಕವಾಗಿ ಹೊಂದಿಸುವುದು ಹೆಚ್ಚು ಸಮರ್ಪಕ ಕ್ರಮ. ಇದನ್ನು ಡಬಲ್ ಡಿಪ್ಲೇಷನ್ ಎನ್ನಲಾಗುತ್ತದೆ.

ಡಿಪ್ಲೇಷನ್ ಮಾಡುವುದಕ್ಕೆ ಉತ್ಪಾದನಾ ಬೆಲೆಯ ಸೂಚ್ಯಂಕ ಬೇಕು. ಆದರೆ ಕೆಲವು ಕ್ಷೇತ್ರಗಳಲ್ಲಿ, ಉದಾಹರಣೆಗೆ ಸೇವಾವಲಯದಲ್ಲಿ ಉತ್ಪಾದನಾ ಬೆಲೆ ಸೂಚ್ಯಂಕ ಸಿಗುವುದಿಲ್ಲ. ಹಾಗಾಗಿ ದತ್ತಾಂಶ ಲಭ್ಯವಿರುವ ಕೃಷಿ ಮತ್ತು ಉತ್ಪಾದನಾ ವಲಯಗಳಲ್ಲಿ ಈ ವಿಧಾನವನ್ನು ಬಳಸಬಹುದು. ಈಗ ಪರಿಷ್ಕೃತ ಅಂದಾಜಿನಲ್ಲಿ ಮಾಹಿತಿ ಲಭ್ಯವಿರುವ ಕಡೆಗಳಲ್ಲಿ ಈ ಕ್ರಮವನ್ನು ಬಳಸಲಾಗಿದೆ. ಉತ್ಪಾದನಾ ಬೆಲೆ ಸೂಚ್ಯಂಕ ಲಭ್ಯವಿಲ್ಲದ ಇತರ ವಲಯಗಳಲ್ಲಿ ತಯಾರಾದ ಒಟ್ಟು ಸರಕು ಹಾಗೂ ಸೇವೆಗಳ ಪ್ರಮಾಣವನ್ನು ಆಧರಿಸಿ ಇದನ್ನು ಅಂದಾಜು ಮಾಡಲಾಗಿದೆ. ಜೊತೆಗೆ ಈ ಪರಿಷ್ಕೃತ ಕ್ರಮದಲ್ಲಿ ಇನ್ನೂ ಒಂದು ಬದಲಾವಣೆಯನ್ನು ಮಾಡಲಾಗಿದೆ. ಇದಕ್ಕೆ ಮೊದಲು ಹಲವು ಪದಾರ್ಥಗಳನ್ನು ಕ್ರೋಡೀಕರಿಸಿ ಅವುಗಳ ಬೆಲೆ ಸೂಚ್ಯಂಕವನ್ನು ಒಟ್ಟಾರೆಯಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಉದಾಹರಣೆಗೆ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ಹೊಂದಿಸುವಾಗ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳನ್ನು ಕ್ರೋಡೀಕರಿಸಿ ತಯಾರಿಸಿದ ಸೂಚಿಯನ್ನು ಬಳಸಲಾಗುತ್ತಿತ್ತು. ಈಗ ಪ್ರತಿಯೊಂದು ಪದಾರ್ಥಗಳನ್ನು ಪ್ರತ್ಯೇಕವಾಗಿ ಗಣನೆಗೆ ತೆಗೆದುಕೊಂಡು ಜಿಡಿಪಿಯನ್ನು ಅದಕ್ಕೆ ಅನುಗುಣವಾಗಿ ಹೊಂದಿಸಲಾಗುತ್ತಿದೆ. ಈಗ 260ಕ್ಕೂ ಹೆಚ್ಚು ವಸ್ತುಗಳ ಮಟ್ಟದಲ್ಲಿ ಬೆಲೆ ಸೂಚ್ಯಂಕಗಳನ್ನು-ಸಿಪಿಐ ಬಳಸುವ ಮೂಲಕ ಅತ್ಯಂತ ಸೂಕ್ಷ್ಮವಾಗಿ ಬೆಲೆ ಬದಲಾವಣೆಯನ್ನು ಅಳೆಯಲಾಗುತ್ತಿದೆ.
ಮಾಹಿತಿ ಸಂಗ್ರಹಣೆಗೆ ಹೊಸ ಹಾಗೂ ಪರಿಷ್ಕೃತ ಮೂಲಗಳ ಬಳಕೆ:
ಈವರೆಗೆ ಜಿಡಿಪಿ ಲೆಕ್ಕಾಚಾರಕ್ಕೆ ಬೇಕಾದ ನಿಖರವಾದ ಮಾಹಿತಿ ಸಿಗುತ್ತಿರಲಿಲ್ಲ. ಆ ಸಮಸ್ಯೆಯನ್ನು ಮೀರಿಕೊಳ್ಳುವುದಕ್ಕೆ ಹೊಸ ಹಾಗೂ ಪರಿಷ್ಕೃತ ಮೂಲಗಳನ್ನು ಬಳಸಲಾಗುತ್ತಿದೆ. ನಿಯತಕಾಲಿಕ ಕಾರ್ಮಿಕ ಶಕ್ತಿ ಸಮೀಕ್ಷೆ (PLFS) ಮತ್ತು ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆಗಳಿಂದ (ASUSE) ಮಾಹಿತಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಹಲವಾರು ಸಚಿವಾಲಯಗಳ ಆಡಳಿತಾತ್ಮಕ ದತ್ತಾಂಶಗಳನ್ನು ಬಳಸಲಾಗಿದೆ. ಪಿಎಲ್ಎಫ್ ಸಮೀಕ್ಷೆಯು ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ಅಸ್ಯುಸ್ ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ. ಮತ್ತು ಈ ಸಮೀಕ್ಷೆಗಳೂ ಪ್ರತಿವರ್ಷ ನಡೆಯುವುದರಿಂದ ಗುಣಮಟ್ಟದ ಅಂಕಿಅಂಶಗಳು ದೊರೆಯಬಹುದು. ಮತ್ತು ಜಿಡಿಪಿ ಅಂದಾಜೂ ಹೆಚ್ಚು ನಿಖರವಾಗುವ ಸಾಧ್ಯತೆಯಿದೆ. ಹಿಂದೆ ಅಸಂಘಟಿತ ವಲಯದ ಬೆಳವಣಿಗೆಯನ್ನು ಹಳೆಯ ಸಮೀಕ್ಷೆಗಳನ್ನು ಅಥವಾ ಇತರ ಪರ್ಯಾಯ ಸೂಚಿಗಳನ್ನು ಬಳಸಿ ಅಂದಾಜು ಮಾಡಲಾಗುತ್ತಿತ್ತು. ಆದರೆ ಈಗ ಸಮೀಕ್ಷೆಗಳ ಮೂಲಕ ಪ್ರತಿವರ್ಷ ಮಾಹಿತಿ ಸಂಗ್ರಹಿಸುತ್ತಿರುವುದರಿಂದ ಆನೌಪಚಾರಿಕ ವಲಯಕ್ಕೆ ಸಂಬಂಧಿಸಿದಂತೆ ಹೆಚ್ಚು ನಿಖರವಾದ ವಾದ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಜೊತೆಗೆ ಜಿಎಸ್ಟಿ ಮತ್ತು ಡಿಜಿಟಲ್ ವಹಿವಾಟಿನ ದತ್ತಾಂಶಗಳನ್ನು ಬಳಸಿಕೊಳ್ಳುವ ಪ್ರಯತ್ನದಿಂದಾಗಿ ಅಸಂಘಟಿತ ವಲಯದ ಪರಿಸ್ಥಿತಿಯನ್ನು ಹೆಚ್ಚು ನಿಖರವಾಗಿ ತಿಳಿಯಬಹುದು.
ಕಂಪೆನಿಗಳ ವಿವಿಧ ಚಟುವಟಿಕೆಗಳ ಕಂಪನಿಗಳ ಪ್ರತ್ಯೇಕ ವರ್ಗೀಕರಣ:
ಮತ್ತೊಂದು ಪ್ರಮುಖ ಬದಲಾವಣೆ ಅಂದರೆ ಈವರೆಗೆ ಒಂದು ಕಂಪೆನಿ ಹಲವು ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿದ್ದಾಗ ಅದರ ಸಂಪೂರ್ಣ ಲಾಭವನ್ನು ಅದರ ಪ್ರಮುಖ ಕ್ಷೇತ್ರದ ಅಡಿಯಲ್ಲಿ ಲೆಕ್ಕ ಹಾಕಲಾಗುತ್ತಿತ್ತು. ಉದಾಹರಣೆಗೆ ಹೋಟಲ್ ನಡೆಸುತ್ತಿದ್ದ ಕಂಪೆನಿಯೊಂದು ಸಾಧ್ಯವೇರನ್ನು ಉತ್ಪಾದಿಸುತ್ತಿದ್ದರೆ ಅದರ ಲಾಭವನ್ನು ಹೋಟೆಲ್ ಉದ್ದಿಮೆಯಲ್ಲಿ ದಾಖಲಿಸಲಾಗುತ್ತಿತ್ತು. ಈಗ ಆ ಕಂಪೆನಿಯು ಪ್ರತಿ ಕ್ಷೇತ್ರದಿಂದ ಗಳಿಸುವ ಲಾಭವನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತದೆ.
ಈ ಎಲ್ಲಾ ಬದಲಾವಣೆಗಳಿಂದ ಜಿಡಿಪಿ ಹೆಚ್ಚು ನಿಖರವಾಗುತ್ತದೆ. ಇದರಿಂದ ಯಾವ ವಲಯ ಕುಸಿಯುತ್ತಿದೆ ಮತ್ತು ಯಾವ ವಲಯ ಬೆಳೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಜಿಡಿಪಿಯನ್ನು ಕುರಿತಂತೆಹೊಸ ಅಂದಾಜು
ಹೊಸ ವಿಧಾನವನ್ನು ಮತ್ತು ದತ್ತಾಂಶವನ್ನು ಬಳಸಿ ಮಾಡಿರುವ ಅಂದಾಜನ್ನು ಮೊಸ್ಸಿ ಪ್ರಕಟಿಸಿದೆ. ಈಗ ಪ್ರಕಟವಾಗಿರುವ ಪರಿಷ್ಕೃತ ಜಿಡಿಪಿ ಅಂದಾಜು ಹಳೆಯ ಜಿಡಿಪಿಗೆ ಹೋಲಿಸಿದರೆ 2022ರಿಂದ 2025ರ ಅವಧಿಯಲ್ಲಿ ಮೊದಲಿಗಿಂತ ಸುಮಾರು 3%ರಿಂದ 3.8%ರಷ್ಟು ಕಡಿಮೆಯಾಗಿದೆ. ಅಂದರೆ ಆರ್ಥಿಕತೆಯ ಗಾತ್ರ ನಿರೀಕ್ಷೆಗಿಂತ ಕಡಿಮೆ ಇದೆ. ಹೊಸ ಸರಣಿಯ ದತ್ತಾಂಶದ ಪ್ರಕಾರ, 2025-26ರಲ್ಲಿ ಭಾರತದ ಆರ್ಥಿಕತೆಯ ಗಾತ್ರವು 345.47 ಲಕ್ಷ ಕೋಟಿ ರೂಪಾಯಿ ಆಗುವ ನಿರೀಕ್ಷೆಯಿದೆ. ಇದು ಹಳೆಯ ಸರಣಿಯ ಆಧಾರದ ಮೇಲೆ ನೀಡಲಾಗಿದ್ದ ಮೊದಲ ಮುಂಗಡ ಅಂದಾಜಿಗಿಂತ ಸುಮಾರು ಶೇ. 3.3ರಷ್ಟು ಚಿಕ್ಕದಾಗಿದೆ.
ತಾತ್ವಿಕವಾಗಿ ಹೇಳುವುದಾದರೆ ಆಧಾರವರ್ಷ ಬದಲಾದರೆ ಜಿಡಿಪಿಯ ಪ್ರಮಾಣದಲ್ಲಿ ಬದಲಾವಣೆಯಾಗಬಾರದು. ಯಾಕೆಂದರೆ ಅಂದಾಜು ಮಾಡುತ್ತಿರುವ ಆರ್ಥಿಕತೆ ಅದೇ ಇರುತ್ತದೆ. ಹೊಸ ಮಾಹಿತಿ ಸಿಗುವುದರಿಂದ, ವಿಧಾನದಲ್ಲಿ ಸುಧಾರಣೆ ಆಗುವುದರಿಂದ ಆರ್ಥಿಕತೆಯ ಗಾತ್ರ ಹಿಗ್ಗಬಹುದು. ಕಡಿಮೆಯಾಗಿರುವುದರ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಹುಶಃ ಹಿಂದಿನ ಜಿಡಿಪಿಯ ಅಂದಾಜು ಜಿಡಿಪಿಯ ಗತವ ಗಾತ್ರವನ್ನು ಉತ್ತೇಕ್ಷೆಗೊಳಿಸಿದೆ ಅನ್ನುವ ಟೀಕೆಯನ್ನು ಇದು ಸಮರ್ಥಿಸುತ್ತಿದೆಯೇ ಅನ್ನುವ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಇದು ನಮ್ಮ ಆರ್ಥಿಕತೆಯ ಬಗೆಗಿನ ಗ್ರಹಿಕೆಯನ್ನು ಬದಲಿಸುತ್ತದೆ. ನಮ್ಮ ಐದು ಟ್ರಿಲಿಯನ್ ಆರ್ಥಿಕತೆಯ ಕನಸು ಇನ್ನಷ್ಟು ದೂರಕ್ಕೆ ಹೋಗುತ್ತದೆ.
ಇದು ವಿತ್ತೀಯ ಕೊರತೆ, ಸರ್ಕಾರದ ಬಜೆಟ್ ಮತ್ತು ಸಾಲದ ಲೆಕ್ಕಾಚಾರದ ಮೇಲೆ ಪರಿಣಾಮವಾಗುತ್ತದೆ. ಇದರಿಂದ ಸರ್ಕಾರದ ವಿತ್ತೀಯ ಕೊರತೆಯ ಅನುಪಾತ ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಸಾಲದ ಹೊರೆ ಇಳಿಸುವ ಗುರಿಯ ಮೇಲೂ ಇದು ಪರಿಣಾಮ ಬೀರಲಿದೆ. 2026-27ನೇ ಹಣಕಾಸು ವರ್ಷಕ್ಕೆ ಸಾಲ-ಜಿಡಿಪಿ ಅನುಪಾತವನ್ನು ಶೇ. 55.6 ಎಂದು ನಿಗದಿಪಡಿಸಲಾಗಿತ್ತು, ಆದರೆ ಈಗ ಅದು ಶೇ. 57.5 ರಷ್ಟು (1.9 ಶೇಕಡಾವಾರು ಪಾಯಿಂಟ್ ಹೆಚ್ಚು) ಇರಲಿದೆ. ಇದು 2031ರ ವೇಳೆಗೆ ಆರ್ಥಿಕತೆಯನ್ನು ಸ್ಥಿರಗೊಳಿಸುವ ಹಾದಿಯನ್ನು ಮೊದಲಿದ್ದಕ್ಕಿಂತ ಕಠಿಣವಾಗಿಸಲಿದೆ ಎನ್ನುವ ಅನುಮಾನವೂ ಕೇಳಿ ಬರುತ್ತಿದೆ.
ಜೊತೆಗೆ ಹಳೆಯ ಜಿಡಿಪಿ ಅಂದಾಜಿನ ಬಗ್ಗೆ ಇರುವ ಪ್ರಶ್ನೆಗಳೆಲ್ಲಾ ಪರಿಹಾರಗೊಂಡಿವೆಯೇ ಅನ್ನುವುದೂ ಸ್ಪಷ್ಟವಿಲ್ಲ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಸಿಗಬೇಕಾದರೆ ಪರಿಷ್ಕರಣೆಗೆ ಬಳಕೆಯಾಗಿರುವ ವಿಧಾನದ ಹೆಚ್ಚಿನ ವಿವರಗಳು ಸಿಗಬೇಕು.
ಸುಧಾರಣೆಯಾಗಿರುವುದು ಖಂಡಿತಾ ಸ್ವಾಗತಾರ್ಹ. ಅದು ಮುಂದುವರಿದುಕೊಂಡು ಹೋಗಬೇಕು. ಸಮೀಕ್ಷೆಯನ್ನು ಅತಿಯಾಗಿ ಅವಲಂಭಿಸುವುದು ಒಳ್ಳೆಯದಲ್ಲ. ಜನಗಣತಿ ಮತ್ತು ಆರ್ಥಿಕ ಗಣತಿ ನಡೆಸುವುದು ಸಮೀಕ್ಷೆಗಳ ನಿಖರತೆಯ ದೃಷ್ಟಿಯಿಂದಲೂ ಅನಿವಾರ್ಯ. ಸುಮ್ಮನೆ ಜನಸಂಖ್ಯೆ ಶೇಕಡ 0.9ರಷ್ಟು ಹೆಚ್ಚುತ್ತಿದೆ ಎಂದು ಭಾವಿಸಿಕೊಂಡು ಉಳಿದ ಅಂದಾಜುಗಳನ್ನು ಮಾಡುವುದರಿಂದ ದಾರಿತಪ್ಪುವ ಸಾಧ್ಯತೆಯಿದೆ. ಪರಿಷ್ಕೃತ ಜಿಡಿಪಿಯ ಅಂದಾಜಿನ ಕ್ರಮಗಳ ಬಗ್ಗೆ ವಿವರಗಳು ಮತ್ತು ಹಿಂದಿನ ವರ್ಷಗಳ ಅಂದಾಜು ಸಿಕ್ಕ ಮೇಲೆ ಆರ್ಥಿಕತೆಯನ್ನು ಕುರಿತಂತೆ ಹೆಚ್ಚು ಸ್ಪಷ್ಟವಾದ ಚಿತ್ರವನ್ನು ಹೊಂದುವುದಕ್ಕೆ ಸಾಧ್ಯ. ಆದರೂ ಸುಧಾರಣೆಗೆ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಇದು ಇಲ್ಲಿಗೆ ನಿಲ್ಲದೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತಾ ಹೋಗುವಂತಾಗಬೇಕು. ಸಮೀಕ್ಷೆಗಳು ನಡೆಸುವ ಸಂಸ್ಥೆಗಳು ಸ್ವಾಯತ್ತವಾಗಿ ಮುಂದುವರಿಯಬೇಕು.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




