ಹೆಣ್ಣು ಮಗು ಮನೆಯ ನಂದಾದೀಪ, ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸುವುದರ ಜೊತೆಗೆ ಹೆಣ್ಣು ಭ್ರೂಣಹತ್ಯೆ ಹೊಗಲಾಡಿಸಲು ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಇಲಾಖೆಯ ಹಲವು ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಲು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸೋಣ ಎಂಬ ಈ ವರ್ಷದ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸುತಿದ್ದು, ಜನವರಿ – 24 ರಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ವಿಶೇಷ ಉಡುಗೊರೆ ನೀಡುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಹೆಣ್ಣು ಮಗುವಿಗೆ ರೂ.1,000/- ಬೆಲೆಯ ಮಕ್ಕಳ ಕಿಟ್‌ಗಳನ್ನು ಉಡುಗೊರೆಯಾಗಿ ಇಂದು ನೀಡಲಾಗುವುದು. ಹೆಣ್ಣು ಮಕ್ಕಳ ಆರೋಗ್ಯ ಕಾಪಾಡುವ ವಿಚಾರದಲ್ಲಿ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಅನೀಮೀಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಹೆಣ್ಣು ಮಕ್ಕಳ ರಕ್ತ ಹೀನತೆ ಹೋಗಲಾಡಿಸುವಲ್ಲಿ ಮಹತ್ವದ ಯೋಜನೆಯಾಗಿದೆ. ಶುಚಿ ಯೋಜನೆ, ಜನನಿ ಸುರಕ್ಷಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಶಿಕ್ಷಣ, ಪೋಷಣೆ, ಬಲವಂತದ ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಹಕ್ಕುಗಳಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ಹುಡುಗಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಹೆಣ್ಣನ್ನು ಉಳಿಸಿ, ಬೆಳೆಸಿ, ಕಲಿಸಿ, ಹೆಣ್ಣು ಇರುವ ಮನೆ ನಂದಾಗೊಕುಲದಂತೆ. ವಿಷೇಶವಾಗಿ ಹೆಣ್ಣು ಭ್ರೂಣ ಹತ್ಯೆಗಳನ್ನು ನಡೆಸುವವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಜನನ ವರದಿ ಇ-ಜನ್ಮ ತಂತ್ರಾಂಶದ ಮಾಹಿತಿಯಂತೆ 2022ನೇ ಸಾಲಿನಲ್ಲಿ 13,276 ಗಂಡು, 11,555 ಹೆಣ್ಣು ಮಕ್ಕಳು ಜನಿಸಿದ್ದು, ಇದರ ಲಿಂಗಾನುಪಾತ (870) ಶೇ.87 ಆಗಿದೆ. 2023ನೇ ಸಾಲಿನಲ್ಲಿ 9408 ಗಂಡು, 8805 ಹೆಣ್ಣು ಮಕ್ಕಳು ಜನಿಸಿದ್ದು, ಇದರ ಲಿಂಗಾನುಪಾತ (936) ಶೇ.94ರಷ್ಟು ಆಗಿದೆ. 2024ನೇ ಸಾಲಿನಲ್ಲಿ 8312 ಗಂಡು, 7697 ಹೆಣ್ಣು ಮಕ್ಕಳು ಜನಿಸಿದ್ದು, ಇದರ ಲಿಂಗಾನುಪಾತ (926) ಶೇ.93ರಷ್ಟು ಆಗಿದೆ ಎಂದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | 58% ಕೃಷಿಸಾಲ ಕಡಿತ, ಕಿರುಸಾಲಗಾರರಿಂದ ಕಿರುಕುಳ; ಜ.29ರಂದು ಬೆಂಗಳೂರಿನಲ್ಲಿ ಪ್ರತಿಭಟನೆ
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.