ಯುವ ಜನರು ಸ್ವಂತ ಬಲದ ಮೇಲೆ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಸೇರಿದಂತೆ ಯಾರ ನೆರವಿಗಾಗಿ ಕಾಯದೇ ಗಟ್ಟಿ ನಿರ್ಧಾರ ಕೈಗೊಂಡು ಪರಿಶ್ರಮದಿಂದ ಬದುಕು ರೂಪಿಸಿಕೊಳ್ಳಬೇಕು. ಅನೇಕ ಯುವಕರು ಮೊಬೈಲ್‌ಗೆ ದಾಸರಾಗಿದ್ದಾರೆ. ಮೊಬೈಲ್ ದುರ್ಬಳಕೆ ಮಾಡಿಕೊಂಡು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಅತಿಯಾದ ಬಳಕೆ ನಿಲ್ಲಿಸಬೇಕು. ಹಿತ ಮಿತವಾಗಿ ಬಳಸಬೇಕುʼ ಎಂದು ಸಲಹೆ ನೀಡಿದರು.
ದಿಶಾ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ʼಯುವಕರು ದೇಶದ ಬೆನ್ನೆಲುಬು, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಶಕ್ತಿ ಯುವಕರಲ್ಲಿದೆ. ಸರ್ಕಾರ ರಾಜಕೀಯ ಹಿನ್ನೆಲೆ ಹೊಂದಿರದ ₹1 ಲಕ್ಷ ಯುವಕರನ್ನು ಗ್ರಾಮ ಪಂಚಾಯಿತಿಯಿಂದ ಸಂಸತ್ ಸದಸ್ಯ ಸ್ಥಾನದವರೆಗೆ ಅಣಿಗೊಳಿಸಲು ಯೋಜನೆ ಹಾಕಿಕೊಂಡಿದೆ. ದೇಶದಲ್ಲಿ ಯುವಕರಿಗೆ ಒಳ್ಳೆಯ ಭವಿಷ್ಯ ಇದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಎಲ್ಲ ಶಕ್ತಿಯೂ ಯುವಕರೊಳಗೆ ಇದ್ದು, ಏನು ಬೇಕಾದರೂ ಸಾಧಿಸಬಹುದುʼ ಎಂದು ಹೇಳಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಓಂಪ್ರಕಾಶ ರೊಟ್ಟೆ, ಪ್ರಭುಲಿಂಗ ಬಿರಾದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ ಸ್ವಾಮಿ, ಮಹೇಶ ಗೋರನಾಳಕರ್, ಯುವ ಮುಖಂಡ ಆದೀಶ್ ರಜನೀಶ್ ವಾಲಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜಕಾರಣಿಗಳು ಹೇಳಿದಂತೆ ಮಠಾಧೀಶರು ಕೇಳುವ ಸ್ಥಿತಿಯಿದೆ : ಸಾಣೇಹಳ್ಳಿ ಶ್ರೀ
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಉಪಸ್ಥಿತರಿದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪವನ್ ಸ್ವಾಗತಿಸಿದರು. ಜಯಪ್ರಕಾಶ ನಿರೂಪಿಸಿದರು. ಲಕ್ಷ್ಮಣ ಎಂ. ವಂದಿಸಿದರು.