ಬೀದರ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಲು ₹300 ಕೋಟಿ ಅನುದಾನ ಅಗತ್ಯವಿದ್ದು, ಪ್ರತಿ ವರ್ಷ ₹100 ಕೋಟಿಯಂತೆ ಯೋಜನೆ ವರದಿ ಸಿದ್ಧಪಡಿಸಿ ನೀಡಿದ್ದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಒದಗಿಸಲಾಗುವುದುʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭರವಸೆ ನೀಡಿದರು.
ಶನಿವಾರದಂದು ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿಯಲ್ಲಿರುವ ಬೀದರ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ʼಪರಿಶ್ರಮ ಮತ್ತು ಬದ್ಧತೆಯಿಂದ ಅಭ್ಯಾಸ ನಡೆಸಿದ್ದಲ್ಲಿ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಸಾಧಿಸಲು ಸಾಧ್ಯʼ ಎಂದರು.
ʼನಾವು ಅಂಗನವಾಡಿಯಿಂದ ಹಿಡಿದು ಪದವಿವರೆಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ನೂರಾರು ಕೋಟಿ ಅನುದಾನ ನೀಡಿ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದು, ಆದರೆ ಪದವಿ ಪೂರ್ವ ಶಿಕ್ಷಣ, ಸ್ನಾತಕೋತ್ತರ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ವಿಶ್ವವಿದ್ಯಾಲಯಗಳು ವಿಭಾಗಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದವಿಗಳಿಗೆ ಮಾನ್ಯತೆ ಸಿಗುವಂತಾಗಬೇಕು. ವಿಶ್ವವಿದ್ಯಾಲಯ ಅಭಿವೃದ್ಧಿ ಆದರೆ ಮಾತ್ರ ಸಾರ್ಥಕವಾಗುತ್ತದೆʼ ಎಂದರು.
ʼಬೀದರ ವಿಶ್ವವಿದ್ಯಾಲಯಕ್ಕೆ 124 ಕಾಲೇಜು ಸಂಯೋಜಿತವಿದ್ದು, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಮಹಾವಿದ್ಯಾಲಯಗಳ 30 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಜಗತ್ತನ್ನು ನಿರ್ಮಾಣ ಮಾಡುವಲ್ಲಿ ನಮ್ಮ ವಿದ್ಯಾರ್ಥಿಗಳು ಪಾಲು ಇದೆ. ಇದೇ ಕಾರಣಕ್ಕೆ ದೇಶಗಳು ನಮ್ಮ ದೇಶದ ಕಡೆ ಮುಖ ಮಾಡುತ್ತಿವೆ. ನಮ್ಮ ವಿದ್ಯಾರ್ಥಿಗಳಲ್ಲಿ ಯಾವುದೇ ಕೊರತೆ ಇಲ್ಲ. ಎಲ್ಲ ಗುರಿ ಮುಟ್ಟಿ ಪರಿಶ್ರಮ ಮಾಡಬೇಕುʼ ಎಂದು ಸಲಹೆ ನೀಡಿದರು.
ʼಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ಒತ್ತು ನೀಡಿ ಮೀಸಲಾತಿ ನೀಡಿ ಶಕ್ತಿ ನೀಡುತ್ತಿದೆ. ಅನೇಕ ವಿಷಯಗಳಲ್ಲಿ ಬೇಡಿಕೆಯಿದ್ದು, ಆ ವಿಷಯಗಳನ್ನು ಅರಿತು ವಿದ್ಯಾಭ್ಯಾಸ ಮಾಡಿದರೆ ಎಲ್ಲಾ ಕಂಪನಿಗಳು ನಮ್ಮನ್ನು ಉದ್ಯೋಗ ಹುಡುಕಿಕೊಂಡು ಬರುತ್ತವೆ. ನಮ್ಮ ಕೈಗಾರಿಕೆಗಳನ್ನು ಏನು ಬೇಡಿಕೆ ಇದೆ ಅದನ್ನು ಕಲಿಯಬೇಕಾಗಿದೆ. ಕೌಶಲ್ಯ ತರಬೇತಿ ಅವಶ್ಯಕತೆ ಇದೆ.ಬೀದರ ವಿಶ್ವವಿದ್ಯಾಲಯಕ್ಕೆ 312 ಎಕರೆ ಜಮಿನು ಇದ್ದು, ಶೀಘ್ರದಲ್ಲಿ ಅನುದಾನ ಒದಗಿಸಲಾಗುವುದು. ಹತ್ತು ಹಲವಾರು ಬೇಡಿಕೆಗಳು ಇವೆ. ಮೂಲಸೌಕರ್ಯಗಳು ಒದಗಿಸಲಾಗುವುದುʼ ಎಂದರು.

ʼಬೀದರ್ ವಿಶ್ವವಿದ್ಯಾಲಯಕ್ಕೆ ಈಗಾಗಲೇ 29 ಉಪನ್ಯಾಸಕರ ಹುದ್ದೆಗಳು ಮಂಜೂರು ಆಗಿದ್ದು, ಮೆರಿಟ್ ಹಾಗೂ ರೋಸ್ಟರ್ ಆಧಾರ ಮೇಲೆ ಯಾವುದೇ ದೂರು ಬಾರದಂತೆ ನೇಮಕಾತಿ ಮಾಡಿಕೊಳ್ಳಬೇಕು. 109 ಬೋಧಕೇತರ ಸಿಬ್ಬಂದಿ, ಇದೇ ಮಾನದಂಡದ ಪ್ರಕಾರ 371(ಜೆ) ಅಡಿ ನೇಮಕಾತಿ ಮಾಡಿಕೊಳ್ಳಬೇಕು. ಯಾರದು ಹಸ್ತಕ್ಷೇಪ ಇರುವುದಿಲ್ಲ. ಪ್ರತಿಭಾವಂತ ಪ್ರಾಧ್ಯಾಪಕರು, ಶಿಕ್ಷಕರು ಸಿಗಲಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆʼ ಎಂದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಮಾತನಾಡಿ, ʼಬೀದರ ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ನಾನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಕೂಡಿ ಕೆಕೆಆರ್‌ಡಿಬಿಯಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡುತ್ತೇವೆʼ ಎಂದರು.
ಬೀದರ ಜಿಲ್ಲೆಗೆ 500 ವರ್ಷಗಳ ಇತಿಹಾಸ ಹೊಂದಿದೆ. ಈ ಹಿಂದೆ ಮಹಮ್ಮದ್ ಗವಾನ್ ವಿಶ್ವವಿದ್ಯಾಲಯ ಮೂಲಕ ವಿವಿಧ ದೇಶಗಳಿಂದ ಬಂದು ನಮ್ಮಲ್ಲಿ ಶಿಕ್ಷಣ ಪಡೆದಿದ್ದಾರೆ ಎಂಬುವುದು ಹೆಮ್ಮೆಯ ವಿಷಯʼ ಎಂದರು.
ಬೀದರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಏ.16ರಂದು ಸಿಎಂ ಸಿದ್ದರಾಮಯ್ಯ ಬೀದರ್ ಜಿಲ್ಲೆ ಪ್ರವಾಸ
ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ, ಬಿದರ ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಬ್ಯಾಲಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಅಶೋಕ ಮೋತಿರಾಮ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಮುಡೆಪ್ಪಾ ಕಮಠಾಣಿ, ಬಿಸಿ. ಶಾಂತಲಿಂಗ ಸಾವಳಗಿ, ಶಿವನಾಥ ಎಂ.ಪಾಟೀಲ, ಸಚಿನ ಶಿವರಾಜ, ವಿಠಲದಾಸ ಪ್ಯಾಗೆ, ಅರ್ಜುನ ಮರೆಪ್ಪಾ ಕನಕ, ಡಾ.ಮಲ್ಲಿಕಾರ್ಜುನ ಕನಕಟ್ಟೆ, ಅಬ್ದುಲ್ ಸತ್ತಾರ ಚಾಂದಸಾಬ್, ವೈಷ್ಣವಿ ಪಾಟೀಲ, ಬೀದರ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯಕ, ಶಿಕ್ಷಣ ನಿಕಾಯ ಡೀನರು, ನಿವೃತ್ತ ಪ್ರಾಧ್ಯಾಪಕರು, ಬೋಧಕ-ಬೋಧಕೇತರು ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.