ನೀಟ್ ಪರೀಕ್ಷೆಯ ಫಲಿತಾಂಶ ವಿವಾದಗಳಿಂದ ಕೂಡಿದ್ದು ಭಾರೀ ಅಕ್ರಮ ನಡೆದಿರುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರ ನೀಟ್ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಆಗ್ರಹಿಸಿದೆ.
ಶುಕ್ರವಾರ ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎನ್‌ಎಸ್‌ಯುಐ ಜಿಲ್ಲಾ ಘಟಕ ಅಧ್ಯಕ್ಷ ಸಚಿನ್ ಮಲ್ಕಾಪುರೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣದಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ. ನೀಟ್ ಫಲಿತಾಂಶ ವಿವಾದವಾದಕ್ಕೆ ಅನೇಕ ಅಂಶಗಳು ಕಾರಣವಾಗಿದ್ದು, ಒಟ್ಟು 67 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಬಂದಿರುವುದು ಹಾಗೂ ಒಂದೇ ಪರೀಕ್ಷಾ ಕೇಂದ್ರದ 8 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಪಡೆದಿರುವುದು ನೀಟ್ ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಂತಿದೆ” ಎಂದು ಪ್ರತಿಭಟನಾಕಾರರು ದೂರಿದರು.
“ನೀಟ್‌ನಲ್ಲಿ ರ‍್ಯಾಂಕ್ ಗಳಿಸಿದ ಆರು ವಿದ್ಯಾರ್ಥಿಗಳು ಒಂದೇ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾಗಿದ್ದು ಇನ್ನಷ್ಟು ಅನುಮಾನಗಳನ್ನು ಹುಟ್ಟಿಹಾಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಒಂದೇ ತರಬೇತಿ ಕೇಂದ್ರ ಇವೆಲ್ಲವೂ ನೀಟ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂಬುದು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಆರೋಪವಾಗಿದೆ” ಎಂದರು.
“ಕೇಂದ್ರ ಬಿಜೆಪಿ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದು, ಈ ಅಕ್ರಮಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದೆ. ಕೂಡಲೇ ಅಕ್ರಮ ವೆಸಗಿದವರ ಮೇಲೆ ಕ್ರಮ ಜರುಗಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಮಿತಿಯಿಂದ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ ತಾಲೂಕಿನ ಅರ್ಧದಷ್ಟು ಸರ್ಕಾರಿ ಪ್ರೌಢ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರಿಲ್ಲ
ಪ್ರತಿಭಟನೆಯಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಮಿತಿಯ ಪ್ರಮುಖರಾದ ಭೀಮರಾವ ಮಾಲಗತ್ತಿ, ಸುಭಾಷ ಕಲ್ಲೂರ, ಪವನ, ಕೃಷ್ಣಾ ಮೇತ್ರೆ, ಚಂದು ಡಿ.ಕೆ, ಸಿದ್ದಾರ್ಥ, ಲೋಕೇಶ ಡುಮ್ಮೆ, ದೀಪಕ ಭಂಗೆ, ನಿತೀಶ ಶಿಂಧೆ, ಸೈಯದ್ ದಸ್ತಾಗಿರ್, ಇಮ್ರಾನ್ ಖಾನ್, ಅಮರ ಹರಪಳ್ಳೆ, ಅಕ್ಷಯ, ಸುನೀಲ ಬಸಕಲ್ಯಾಣ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.