ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಶನಿವಾರ ಸಂಭವಿಸಿದೆ. ಕಾರ್‌ನ ಮೇಲೆ ಕಂಟೇನರ್ ಲಾರಿ ಬಿದ್ದಿದ್ದರಿಂದ ಕಾರ್‌ನಲ್ಲಿದ್ದ 6 ಮಂದಿ ಸಂಪೂರ್ಣವಾಗಿ ಅಪ್ಪಚ್ಚಿಯಾಗಿ ದಾರುಣ ಸಾವು ಕಂಡಿದ್ದಾರೆ.
ಘಟನೆಯಲ್ಲಿ ಕಾರಿನಲ್ಲಿದ್ದ ಮಕ್ಕಳು ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ಕ್ಯಾಂಟರ್ ಬಿದ್ದು ಸಾವಿಗೀಡಾದವರು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದವರು ಎಂದು ತಿಳಿದುಬಂದಿದೆ. ಮೃತಪಟ್ಟವರನ್ನು ಉದ್ಯಮಿ ಚಂದ್ರ ಯಾವಪ್ಪವೋಳ, 16 ವರ್ಷದ ಜಾನ್, 12 ವರ್ಷದ ದೀಕ್ಷಾ, 36 ವರ್ಷದ ವಿಜಯ ಲಕ್ಷ್ಮಿ, 42 ವರ್ಷದ ಗೌರಬಾಯಿ ಎಂದು ಗುರುತಿಸಲಾಗಿದೆ.
ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ನಡೆದಿದೆ. ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಘಟನೆ ನಡೆದಿದೆ. ಅಪಘಾತದಿಂದಾಗಿ ತುಮಕೂರು ಬೆಂಗಳೂರು ರಸ್ತೆಯಲ್ಲಿ ಬಾರಿ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಆಗಮಿಸಿದ್ದು, ಕಂಟೇನರ್ ಲಾರಿ ಬಿದ್ದ ಪರಿಣಾಮವಾಗಿ ಕಾರಿನಲ್ಲಿ ಅಪ್ಪಚ್ಚಿಯಾಗಿರುವ ಮೃತದೇಹಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಕಂಟೇನರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಅದರಲ್ಲಿದ್ದರ ದೇಹಗಳು ಕೂಡ ಛಿದ್ರವಾಗಿದೆ.
ಚಂದ್ರಶೇಖರ ಏಗಪ್ಪಗೋಳ ಕುಟುಂಬ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದರು. ಐಎಎಸ್‌ಟಿ ಸಾಫ್ಟ್‌ವೇರ್ ಕಂಪನಿ ಮಾಲೀಕರಾಗಿದ್ದರು. ತಂದೆಗೆ ಹುಷಾರಿಲ್ಲ ಎಂಬ ಕಾರಣಕ್ಕೆ ನೋಡಲು ಕುಟುಂಬ ಸಮೇತ ವಿಜಯಪುರ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದ ಮೊರಬಗಿ ಗ್ರಾಮಕ್ಕೆ ಹೊರಟ್ಟಿದ್ದರು.
ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಸಿಇಒ ಆಗಿದ್ದ ಚಂದ್ರಶೇಖರ ಅವರು 2018ರಲ್ಲಿ ಸ್ವಂತ ಕಂಪನಿ ಆರಂಭಿಸಿದ್ದರು. ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶೀಘ್ರದಲ್ಲೇ ಹೊಸ ಕಚೇರಿ ಆರಂಭಿಸಲು ಸಿದ್ಧತೆ ನಡೆಸಿದ್ದರು. ಎರಡು ತಿಂಗಳ ಹಿಂದೆ ₹1.5 ಕೋಟಿ ಮೊತ್ತದ ವೋಲ್ವೆ ಕಾರು ಖರೀದಿಸಿದ್ದರು.
