ಬಳ್ಳಾರಿಯು ಕನ್ನಡ ನಾಡಿನ ಏಕೀಕರಣಕ್ಕೆ ಮುನ್ನುಡಿ ಬರೆದ ಜಿಲ್ಲೆಯಾಗಿದೆ. ನಾವು ಇಂದು ಬದುಕುತ್ತಿರುವ ಬದುಕು ಅನೇಕ ಮಹನೀಯರ ಹೋರಾಟ ಮತ್ತು ತ್ಯಾಗ ಪರಿಶ್ರಮಗಳ ಫಲವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎನ್ ಯಶವಂತ್‌ರಾಜ್ ನಾಗಿರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ತು ಆಯೋಜಿಸಿದ್ದ “ಕನ್ನಡ ಅಭಿಮಾನ – ಅಭಿಯಾನ” ಕಾರ್ಯಕ್ರಮ ಉದ್ಘಾಟಿಸಿ, ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಅವರ ಕುರಿತ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಿ ಮಾತನಾಡಿದ ಅವರು, “ಕರ್ನಾಟಕ ಏಕೀಕರಣ ಚಳವಳಿಯು ಸಾವು ಸಂಭವಿಸದ ಹೋರಾಟವಾದರೂ 1953ರ ಸೆಪ್ಟೆಂಬರ್ 30ರಂದು ರಾತ್ರಿ ವಿಜಯೋತ್ಸವದ ಮಂಟಪವನ್ನು ಕಾವಲು ಕಾಯುತ್ತಿದ್ದ ಕನ್ನಡದ ಕಟ್ಟಾಳು ಪೈಲ್ವಾನ್ ರಂಜಾನ್ ಸಾಬ್ ಮೇಲೆ ದುಷ್ಕರ್ಮಿಗಳು ಆಸಿಡ್ ತುಂಬಿದ ಬಲ್ಬ್‌ನ್ನು ಎಸೆದು ಪರಾರಿಯಾದರು. ಈ ಘಟನೆಯಲ್ಲಿ ಹುತಾತ್ಮರಾದ ರಂಜಾನ್ ಸಾಬ್‌ರ ಸಾವು ದುಃಖ ತರಿಸುತ್ತದೆ. ಈ ಕಥನವಿರುವ ಸಿದ್ದರಾಮ ಕಲ್ಮಠರ ಪುಸ್ತಕವು ಓದುಗರ ಮನ ಕರಗಿಸುತ್ತದೆ” ಎಂದರು.
“ಅಂದು ಕರ್ನಾಟಕ ಏಕೀಕರಣ ಸಮಾರಂಭವನ್ನು ಆಚರಿಸಲು ಅಡ್ಡಿ ಇದೆಯೆಂದು ತಿಳಿದ ರಂಜಾನ್ ಸಾಬ್ ಅವರು ಪೆಂಡಾಲಿನ ರಕ್ಷಣೆಗೆ ನಿಂತು ಸಾವಿಗೆ ಮುಖಾಮುಖಿಯಾದರು. ಕನ್ನಡ ಹಾಗೂ ಜೀವ ಎರಡರ ಆಯ್ಕೆಯಲ್ಲಿ ಅವರು ಆರಿಸಿಕೊಂಡಿದ್ದು ಕನ್ನಡ. ಇಂದಿಗೂ ಕನ್ನಡಿಗರಿಗೆ ಇದು ಸ್ಫೂರ್ತಿಯ ವಿಚಾರವಾಗಿದೆ” ಎಂದರು.
ಲೇಖಕ ಸಿದ್ದರಾಮ ಕಲ್ಮಠ ಮಾತನಾಡಿ, “ಅನೇಕ ಹೋರಾಟಗಾರರ ಮುಂದಾಳತ್ವದಲ್ಲಿ ಏಕೀಕರಣ ಚಳವಳಿ ರೂಪುಗೊಂಡು ಭಾಷೆಯೆಂಬ ಜ್ಯೋತಿಗೆ ಅನೇಕ ಮಹನೀಯರು ತೈಲವಾಗಿ ಉರಿದು ಕನ್ನಡ ಭಾಷೆ ಬೆಳಗಿಸಿದರು. ಭಾಷೆಗೂ ಸಂಸ್ಕೃತಿಗೂ ಹೊಕ್ಕುಳ ಬಳ್ಳಿಯ ಸಂಬಂಧವಿದೆ. ಕನ್ನಡ ಸಂಸ್ಕೃತಿಯ ಜೀವಂತಿಕೆಯನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಜವಾಬ್ದಾರಿ ಪ್ರತಿ ಕನ್ನಡಿಗರಿಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯವಾಗಿ ಕನ್ನಡ ಪರ ಹೋರಾಟಕ್ಕೆ ಶಕ್ತಿ ತುಂಬಿದರು. ಸಂದಿಗ್ಧ ಕಾಲದಲ್ಲಿ ನಾಡ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟು ಹುತಾತ್ಮರಾದ ರಂಜಾನ್ ಸಾಬ್‌ರನ್ನು ಕನ್ನಡಿಗರು ಸದಾ ಸ್ಮರಿಸಬೇಕು” ಎಂದರು.
ಇದನ್ನೂ ಓದಿ: ಬಳ್ಳಾರಿ | ಜೂ.25ರೊಳಗೆ ತುಂಗಭದ್ರಾ ಜಲಾಶಯದ ಮೂರೂ ಕಾಲುವೆಗಳಿಗೆ ನೀರು ಬಿಡಿ: ಕರೂರ್ ಮಾಧವ ರೆಡ್ಡಿ
ಜೆಕೆ ಪೌಂಡೇಶನ್ ಅಧ್ಯಕ್ಷ, ವಕೀಲ ಜೋಳದರಾಶಿ ತಿಮ್ಮಪ್ಪ ಮಾತನಾಡಿ, “ಯುವ ತಲೆಮಾರು ನಮ್ಮ ನಾಡು ನುಡಿಯ ಬಗ್ಗೆ ಹೆಚ್ಚು ತಿಳಿಯಬೇಕು. ಹಿಂದಿನ ಕನ್ನಡಿಗರ ಸಾಹಸ ಶೌರ್ಯದ ಚರಿತ್ರೆಯನ್ನು ಅರಿತುಕೊಂಡು ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇಂದು ಪಾಲಕರು ತಮ್ಮ ಮಕ್ಕಳ ಮೇಲೆ ಇಂಗ್ಲೀಷ್ ಭಾಷೆಯನ್ನು ಹೇರುವ ಮೂಲಕ ಮಕ್ಕಳ ಮನಸ್ಸಿನಿಂದ ಕನ್ನಡತನವನ್ನು ಕ್ರಮೇಣ ದೂರ ಮಾಡುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಸಭಾನಾಯಕ ಪಿ ಗಾದೆಪ್ಪ ಮಾತನಾಡಿ, “ಒಳ್ಳೆಯ ಪುಸ್ತಕಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇಂತಹ ನಮ್ಮ ಭಾಷೆಯ ಮೇಲೆ ಪ್ರೀತಿ ಹೆಚ್ಚಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲ, ಚಿಂತಕ ಬಾದಾಮಿ ಶಿವಲಿಂಗ ನಾಯಕ, ಕಾಲೇಜಿನ ಪ್ರಾಂಶುಪಾಲ ಡಾ.ಅಶ್ವ ರಾಮು, ಸಾಹಿತಿ ವೀರೇಂದ್ರ ರಾವಿಹಾಳ್, ನಟ ಬಸವರಾಜ್ ಜೋಳದರಾಶಿ, ಐ ಎಂ ಮಹೇಶ್, ಪ್ರಶಿಕ್ಷಣಾರ್ಥಿ ಶಾರದಾ, ಸುಷ್ಮಾ, ಅಧ್ಯಾಪಕ ಆಲಂ ಭಾಷಾ ಹಾಗೂ ಇತರರು ಉಪಸ್ಥಿತರಿದ್ದರು.