ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರ ಪ್ರಯತ್ನದಿಂದಾಗಿ ಜಿಲ್ಲೆಯ ಬಸವಕಲ್ಯಾಣ ನಗರಕ್ಕೆ ನೂತನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದೆ.
ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಎಜಾಸ್ ಪಾಷ ಬುಧವಾರ ಆದೇಶ ಹೊರಡಿಸಿದ್ದು, ರಾಜ್ಯದ 20 ಜಿಲ್ಲೆಗಳಲ್ಲಿ 2025-26ನೇ ಸಾಲಿನಲ್ಲಿ 50 ಸಂಖ್ಯೆಬಲವುಳ್ಳ 20 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರದ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲು ವಿಜಯಸಿಂಗ್ ಅವರು ಅಲ್ಪಸಂಖ್ಯಾತರ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಅಧಿಕ ಇದೆ. ಹೀಗಾಗಿ ವಸತಿ ಶಾಲೆ ಮಂಜೂರು ಮಾಡಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದರು. ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಬಸವಕಲ್ಯಾಣದಲ್ಲಿ ವಸತಿ ಶಾಲೆ ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
ಸರ್ಕಾರ, ವಸತಿ ಶಾಲೆ ಮಂಜೂರು ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ವಿಜಯಸಿಂಗ್ ಅವರು ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಶಾಲೆಯ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ | ನಿರಂತರ ಮಳೆಗೆ ಬಾಯ್ತರೆದ ಗುಂಡಿಗಳು : ಸಂಚಾರಕ್ಕೆ ಸಂಕಷ್ಟ
ಬಸವಕಲ್ಯಾಣ ತಾಲೂಕಿಗೆ ಹೊಸದಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭ ಕುರಿತಾದ ಮನವಿಗೆ ಸ್ಪಂದಿಸಿ ತಾಲೂಕಿಗೆ ಹೊಸದಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆ ಪ್ರಾರಂಭಿಸಲು ಸರ್ಕಾರದ ಅಡಳಿತಾತ್ಮಕ ಮಂಜೂರಾತಿ ನೀಡಿದ ಪ್ರಯುಕ್ತ ಅಲ್ಪಸಂಖ್ಯಾತ ಕಲ್ಯಾಣ ಸಚಿವರು ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಮಾಜಿ ಎಂಎಲ್ಸಿ ವಿಜಯ್ ಸಿಂಗ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.