ರಸ್ತೆ ನಿರ್ಮಾಣದ ಹೆಸರಿನಲ್ಲಿ ನೈಸ್ ಸಂಸ್ಥೆ ರೈತರ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳುತ್ತಿದೆ. ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಭೂಸ್ವಾಧೀನದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ರೈತ ಸಂಘ ಆರೋಪಿಸಿದೆ. ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ನೈಸ್ ಸಂಸ್ಥೆಯ ವಿರುದ್ಧ ಜೂನ್ 28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುವುದಾಗಿ ಹೇಳಿದೆ.
ಧರಣಿ ನಡೆಸುವ ಬಗ್ಗೆ ರೈತ ಸಂಘ ಪತ್ರಿಕಾ ಪ್ರಕಟಣೆ ಹೊರಡಿಸಿದೆ. “ನೈಸ್ ಸಂಸ್ಥೆಯ ವಿರುದ್ಧ ಹಗರಣಗಳ ಸರಮಾಲೆಯ ಆರೋಪಗಳಿವೆ. ಆ ಸಂಸ್ಥೆಗೆ ನೀಡಲಾಗಿರುವ ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ)ಯನ್ನು ರದ್ದುಪಡಿಸಬೇಕು. ನೈಸ್ ಸಂಸ್ಥೆಯ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು. ರೈತರ ಅನುಮತಿ ಪಡೆಯದೇ ಭೂಸ್ವಾಧೀನ ಮಾಡಿಕೊಂಡಿರುವ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತೇವೆ” ಎಂದು ತಿಳಿಸಿದೆ.
“ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನೈಸ್ ಸಂಸ್ಥೆಯು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿದೆ. ರಸ್ತೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಈ ಹಿಂದೆ ಮಾಡಿಕೊಳ್ಳಲಾಗಿದ್ದ ಒಪ್ಪಂದದಂತೆ ಸಂತ್ರಸ್ತ ರೈತರಿಗೆ ನಿವೇಶನ ಮತ್ತು ಪರಿಹಾರ ನೀಡಬೇಕು” ಎಂದು ರೈತ ಸಂಘ ಆಗ್ರಹಿಸಿದೆ.
“ಬಿಎಂಐಸಿಪಿ ಯೋಜನೆಗಾಗಿ ರೈತರ ಭೂಮಿ ಸ್ವಾಧೀನ ಮಾಡಿಕೊಂಡು 27 ವರ್ಷಗಳು ಕಳೆದಿವೆ. ಆದರೂ, ಕಾಮಗಾರಿ ಆರಂಭವಾಗಿಲ್ಲ. ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್ ಸಂಸ್ಥೆ ನಡೆದುಕೊಂಡಿದೆ. ಅದಕ್ಕೆ ನೀಡಲಾಗಿರುವ ಬಿಎಂಐಸಿಪಿಯನ್ನು ರದ್ದುಗೊಳಿಸಬೇಕು. ಸ್ವಾಧೀನಪಡಿಕೊಂಡಿರುವ ಭೂಮಿಯ ಪಹಣಿಯು ನೈಸ್ ಸಂಸ್ಥೆಯ ಹೆಸರಿನಲ್ಲಿದ್ದು, ಅದನ್ನು ತೆಗೆಯಬೇಕು” ಎಂದು ಒತ್ತಾಯಿಸಿದೆ.