ನಿಪ್ಪಾಣಿಯ ಕಾರ್ಖಾನೆಯಲ್ಲಿ ಏಪ್ರಿಲ್ 4ರಿಂದ ಐದು ದಿನಗಳವರೆಗೆ ಕೃಷಿ ಉತ್ಸವವನ್ನು ಜೊಲ್ಲೆ ಗ್ರುಪ್, ಎಕ್ಸಂಬಾದ ಬೀರೇಶ್ವರ ಕೋ ಆಪ್. ಕ್ರೆಡಿಟ್ ಸೊಸೈಟಿ ಮತ್ತು ಹಾಲಸಿದ್ದನಾಥ ಸಹಕಾರ ಸಕ್ಕರೆ ಕಾರ್ಖಾನೆ ಆಶ್ರಯದಲ್ಲಿ ಉತ್ಸವ ಆಯೋಜಿಸಲಾಗಿದೆ ಎಂದು ಜೊಲ್ಲೆ ಗ್ರುಪ್’ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 10 ರಿಂದ ರಾತ್ರಿ 10 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಕಬ್ಬು, ಕೃಷಿ ಬೇಸಾಯ, ಉತ್ಪಾದನೆ, ಪಶುಪಾಲನೆ, ಹಾಲು ಉತ್ಪಾದನೆ, ಕೋಳಿ ಸಾಕಣೆ, ಸಾವಯವ ಕೃಷಿ ಕುರಿತ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ವಿವಿಧ ಸ್ಪರ್ಧೆ, ವಿಚಾರ ಸಂಕಿರಣ, ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ಸಂಗೀತ, ಹಾಸ್ಯ, ಜಾನಪದ ಸಂಗೀತ ಮತ್ತು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿಜಯ ರಾವುತ ಮಾತನಾಡಿ, 10 ಎಕರೆ ಭೂಮಿಯಲ್ಲಿ ಕೃಷಿ, ಆಹಾರ, ಆಟೊಮೊಬೈಲ್ ಮತ್ತು ಕೃಷಿ ಪರಿಕರಕ್ಕೆ ಸಂಬಂಧಿಸಿದ ಸುಮಾರು 250 ಮಳಿಗೆಗಳು ಇರಲಿವೆ. ಸುಮಾರು 1.50 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ವಿಚಾರ ಸಂಕಿರಣಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತಜ್ಞರು ಪಾಲ್ಗೊಳ್ಳುವರು ಎಂದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಹಕಾರ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ಸಮಿತ ಸಾಸನೆ, ಪ್ರಕಾಶ ಶಿಂಧೆ, ಜಯವಂತ ಭಾಟಲೆ, ರಾಜು ಗುಂಡೇಶ, ರಮೇಶ ಪಾಟೀಲ, ಶ್ರೀಕಾಂತ ಬನ್ನೆ, ಜಯಕುಮಾರ ಖೋತ, ರಾವಸಾಹೇಬ್ ಫರಾಳೆ ಇದ್ದರು.