.ಭಿಕ್ಷಾಟನೆ ನಿರತ ವೃದ್ಧೆಯನ್ನು ರಕ್ಷಿಸಿ, ಸಮಾಜದ ಮುಖ್ಯವಾಹಿನಿಗೆ ಸೇರಿಸುವಲ್ಲಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಯಶಸ್ವಿಯಾಗಿದೆ. ವೃದ್ಧೆಯ ವಿಳಾಸ ಪತ್ತೆಗೊಳಿಸಿ, ವಾರಸುದಾರರಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಹೊಸಬದುಕು ಆಶ್ರಮದ ಮೇಲ್ವಿಚಾರಕರಾದ ವಿನಯಚಂದ್ರ, ರಾಜಶ್ರೀ ಭಾಗಿಯಾಗಿದ್ದರು.
ನಾಗರೀಕ ಸಮಿತಿಯ ಕಾರ್ಯಕರ್ತರು ಭಿಕ್ಷಾಟನೆ ನಿರತ ವೃದ್ಧೆಯನ್ನು ಕಳೆದ ನಲವತ್ತು ದಿನಗಳ ಹಿಂದೆ ರಕ್ಷಿಸಿದ್ದರು. ಜಿಲ್ಲೆಯಲ್ಲಿ ಭಿಕ್ಷುಕರ ಪುರ್ನವಸತಿ ಕೇಂದ್ರ ಇಲ್ಲದಿರುವುದರಿಂದ ಉಡುಪಿ ಕೊರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ಜೀವನ ನಿರ್ವಹಣೆಗೆ ಅಸಹಾಯಕತೆ ಎದುರಾಗಿರುವುದರಿಂದ, ಭಿಕ್ಷಾಟನೆ ಮಾಡುತ್ತಿರುವುದಾಗಿ, ಅಂದು ವೃದ್ಧೆ ಹೇಳಿಕೊಂಡಿದ್ದರು. ಚಿಕ್ಕಮಗಳೂರು ನಗರದ ಹೊರ ವಲಯದ ಗ್ರಾಮದಿಂದ ವಲಸೆ ಬಂದಿರುವ ವೃದ್ಧೆಯು ಉಡುಪಿ ನಗರದ ಧಾರ್ಮಿಕ ಕೇಂದ್ರ, ಪ್ರಾರ್ಥನ ಮಂದಿರದ ಮುಂಬಾಗ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದರು. ಸರಿಯಾದ ಆಹಾರ ಸೇವನೆಯಿಲ್ಲದೆ ನಿತ್ರಾಣ ಸ್ಥಿತಿಯಲ್ಲಿದ್ದ ವೃದ್ಧೆಗೆ, ಆಶ್ರಮ ಸೇವಾಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರು. ಹಾಗೆಯೇ ಆಶ್ರಮದಲ್ಲಿ ಪೌಷ್ಟಿಕ ಆಹಾರ ನೀಡಿ ಅಕ್ಕರೆಯಿಂದ ಉಪಚರಿಸಿದ್ದರು. ಭಿಕ್ಷಾಟನೆ ಕಾನೂನಿನಂತೆ ಅಪರಾಧ ಎಂದು ಮನವೊಲಿಸಿದ್ದರು.
