ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಇಂದ್ರಾಳಿಯ ರೈಲು ನಿಲ್ದಾಣದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು, ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿ ಮೃತಪಟ್ಟಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ಮೃತ ವ್ಯಕ್ತಿಯ ಬಳಿ, ಯಾವೊಂದೂ ಗುರುತು ಚೀಟಿ ಪತ್ತೆಯಾಗದೆ ಇರುವುದರಿಂದ, ಹೆಸರು ವಿಳಾಸ ತಿಳಿದುಬಂದಿಲ್ಲ. ವಾರಸುದಾರರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯ ನಾಗರೀಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ರೈಲು ಸಂಖ್ಯೆ 02198 ಜಬ್ಲಾಪುರದಿಂದ ಕೊಯಮತ್ತೂರಿಗೆ ತೆರಳುವ ವಿಶೇಷ ರೈಲು ಗಾಡಿಯ ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಉಡುಪಿ ನಿಲ್ದಾಣ ಸಮೀಪಿಸುತ್ತಿದ್ದಂತೇ ಮೂರ್ಛೆ ಬಂದಿದೆ. ತಕ್ಷಣ ಸಹಪ್ರಯಾಣಿಕರು ಪ್ರಯಾಣಚೀಟಿ ತಪಾಸಣಾಧಿಕಾರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಅಧಿಕಾರಿಯವರು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕನನ್ನು ಆಸ್ಪತ್ರೆಗೆ ಸಾಗಿಸಲು ಇಳಿಸಿದ್ದು, ರೈಲ್ವೆ ಇನ್ಸ್ಪೆಕ್ಟರ್ ಮಧುಸೂದನ್ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವು ಪಡೆದಿದ್ದರು.