ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿರುವ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಬೇಕಿರುವ ಕೌಶಲ್ಯ ಹಾಗೂ ತಾಂತ್ರಿಕ ಶಿಕ್ಷಣ ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳಿಗೂ ಹೋಲಿಕೆಯೇ ಇಲ್ಲದಂತಾಗಿದೆ. ಇದು ಕೈಗಾರಿಕೆಗಳ ಬೆಳವಣಿಗೆ ಹಿನ್ನಡೆಯಾಗಲು ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯೋಧ್ಯಮ ಮಹಾಸಂಘ, ಜಿಲ್ಲಾ ವಾಣಿಜ್ಯೋಧ್ಯಮ ಸಂಘ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯ ಒಗ್ಗೂಡಿ ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕೈಗಾರಿಕಾ ಸಮ್ಮೇಳನದಲ್ಲಿ ಅವರು ಮಾತನಾಡಿದರು. “ಕೈಗಾರಿಕೆಗಳ ಬೆಳವಣಿಗೆಗೆ ಮೂಲಭೂತ ಸೌಕರ್ಯ ಅವಶ್ಯಕತೆಯಿದೆ. ಅವುಗಳನ್ನು ಒದಗಿಸಲು ಸರ್ಕಾರ ಬದ್ದವಾಗಿದೆ” ಎಂದು ತಿಳಿಸಿದರು.
“ಕೈಗಾರಿಕೆಗಳಿಗೆ ಬೇಕಿರುವ ಕೌಶಲ್ಯಾಭಿವೃದ್ದಿಯ ಬೇಡಿಕೆಗಳನ್ನು ವಾಣಿಜ್ಯೋದ್ಯಮ ಸಂಘ ನೀಡಿದರೆ ಬೇಕಾಗುವ ಕೋರ್ಸಗಳನ್ನು ಐಟಿಐ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುತ್ತದೆ. ಉದ್ಯೋಗಾಧಾರಿತ ಕೋರ್ಸಗಳ ಅವಶ್ಯಕತೆಗೆ ಪೂರ್ವಾಲೋಚನೆ ಅವಶ್ಯಕತೆಯಿದೆ. ರಾಯಚೂರು, ಕೊಪ್ಲಳ, ಕಲ್ಬುರ್ಗಿ, ಯಾದಗಿರಿ, ಬಳಾರಿ ಜಿಲ್ಲೆಗಳಲ್ಲಿ ಸಂಪನ್ಮೂಲ ಲಭ್ಯತೆಯಿದೆ” ಎಂದು ಹೇಳಿದರು.
“ನಿರುದ್ಯೋಗ ಕಡಿಮೆ ಮಾಡಲು ಕೈಗಾರಿಕೆಗಳ ಸ್ಥಾಪನೆ ಅವಶ್ಯಕತೆಯಿದೆ. 5 ಲಕ್ಷ ಜನ ನಿರುದ್ಯೋಗಿಗಳು ಪ್ರತಿವರ್ಷಕ್ಕೆ ಹೊರಬರುತ್ತಿದ್ದಾರೆ. ಯುವನಿಧಿ ಮೂಲಕ 1,500 ರೂ. ನಿರುದ್ಯೋಗ ಭತ್ಯೆ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪಿಸಿ ಉದ್ಯೋಗ ನೀಡಲು ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ನೆರವು ಸರ್ಕಾರ ನೀಡಲು ಸಿದ್ದವಿದೆ” ಎಂದರು.
ಸಣ್ಣ ಕೈಗಾರಿಕೆ ಸಚಿವ ಶರಣಬಸ್ಸಪ್ಪ ದರ್ಶನಾಪುರು ಮಾತನಾಡಿ, “ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳಿವೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ದೊಡ್ಡ ಕೈಗಾರಿಕೆಗಳು ಈ ಭಾಗದಲ್ಲಿ ಸ್ಥಾಪನೆಯಾಗಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರವೇ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಬೆಂಬಲಿಸಬೇಕು. ಅದಕ್ಕಾಗಿ, ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಕೈಗಾರಿಕೆಗಳ ವಿಸ್ತರಣೆ ಮಾಡುವ ಕುರಿತು ಈಗಾಗಲೇ ಚರ್ಚಿಸಲಾಗಿದೆ” ಎಂದು ತಿಳಿಸಿದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಮಾತನಾಡಿ, “ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಉತ್ತೇಜಿಸಲು ಕೈಗಾರಿಕಾ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ದವಾಗಿದೆ. ಭತ್ತ, ಅಕ್ಕಿ,ತೊಗರಿ, ಹತ್ತಿ ಬೆಳೆಯನ್ನು ಯಥೇಚ್ಚವಾಗಿ ಬೆಳೆಯಲಾಗುತ್ತಿದೆ. ಪೂರಕವಾದ ಕೈಗಾರಿಕೆಗಳು ಸ್ಥಾಪಿಸಬೇಕಿದೆ. ಕೈಗಾರಿಕೆಗಳಿಗೆ ಮೂಲಭೂತವಾಗಿ ಬೇಕಾಗಿರುವ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ಐದು ಮಂದಿ ಅಲ್ಲ, ಕ್ಷೇತ್ರದ ಪ್ರತಿಯೊಬ್ಬರೂ ಶಾಸಕರೇ; ಕೆಆರ್‌ಪಿಪಿಗೆ ಕಾಂಗ್ರೆಸ್ ಮುಖಂಡ ತಿರುಗೇಟು
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, “ರಾಜ್ಯದಲ್ಲಿ ಕೈಗಾರಿಕೆಗಳು ಬೆಂಗಳೂರಿಗೆ ಸೀಮಿತವಾಗಿವೆ. ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ,ಕಲ್ಯಾಣ ಕರ್ನಾಟಕವೆಂದರೆ ಕಲ್ಬುರ್ಗಿ ಎಂದು ಭಾವಿಸಲಾಗಿದೆ. ರಾಯಚೂರು, ಯಾದಗರಿ,ಕೊಪ್ಪಳ ಜಿಲ್ಲೆಗಳು ಕೈಗಾರಿಕಾ ಅಭಿವೃದ್ದಿಯಿಂದ ದೂರು ಉಳಿಯುವಂತಾಗಿದೆ. ರಾಯಚೂರಿನಲ್ಲಿ ವಿಶ್ವದಲ್ಲಿ ಹತ್ತಿ ಮಾರುಕಟ್ಟೆ ಹೆಸರುವಾಸಿಯಾಗಿದೆ.ಕೂಡಲೇ ಟೈಕ್ಸ್ಟೈಲ್ ಪಾರ್ಕ ಸ್ಥಾಪನೆ ಅವಶ್ಯಕವಿದೆ. 500 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ನೀರು ಮತ್ತು ಉಚಿತ ವಿದ್ಯುತ್ ನೀಡಿವಿಶೇಷ ಜೋನ್ ಎಂದು ಸರ್ಕಾರ ಘೋಷಿಸಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಹಂಪನಗೌಡ ಬಾದರ್ಲಿ, ಹಂಪಯ್ಯನಾಯಕ, ಶರಣಗೌಡ ಬಯ್ಯಾಪುರು, ಬಸನಗೌಡ ದದ್ದಲ್, ಎಫ್‌ಕೆಸಿಸಿಐ ರಾಜ್ಯಾಧ್ಯಕ್ಷ ಬಿ.ವಿ.ಗೋವಿಂದರೆಡ್ಡಿ, ರಮೇಶ, ಬಾಲಕೃಷ್ಣ, ವಿಶ್ವವಿದ್ಯಾಲಯ ಕುಲಪತಿ ಡಾ.ಹನುಮಂತಪ್ಪ, ಸುಧಾಕರ ಶೆಟ್ಟಿ, ಐ.ಎಸ್ ಪ್ರಸಾದ, ಸತೀಶ, ವಿ ಲಕ್ಷ್ಮಿ ರೆಡ್ಡಿ,ತ್ರಿವಿಕ್ರಮ ಜೋಷಿ, ಎಸ್.ಕಮಲಕುಮಾರ ಜೈನ್ ,ದೊಡ್ಡಬಸವರಾಜ ಸೇರಿದಂತೆ ರಾಜ್ಯಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳಿದ್ದರು.