ವರ್ತಕರ ಶೆಡ್ ತೆರವು ಹಾಗೂ ಮೂಲಭೂತ ಸೌಕರ್ಯ ಗಳ ಕೊರತೆ ವಿರುದ್ಧ ಆದಿ ಉಡುಪಿಯಲ್ಲಿರುವ ಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ವರ್ತಕರು ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಕಳೆದ 15 ದಿನಗಳಿಂದ ಇಲ್ಲಿನ ವರ್ತಕರು ತಮ್ಮ ಮಳಿಗೆಗಳಿಗೆ ಕಪ್ಪು. ಬಾವುಟ ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕಾರಿಗಳು ಸ್ಪಂದಸದ ಹಿನ್ನೆಲೆಯಲ್ಲಿ ವರ್ತಕರು ಕಪ್ಪು ಬಾವುಟವನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿದಿನ ನೂರಾರು ಗ್ರಾಹಕರು ವಾಹನಗಳಲ್ಲಿ ಬರುತ್ತಾರೆ ಮತ್ತು ರೈತರ ತರಕಾರಿ ಹೊತ್ತ ವಾಹನಗಳು ಬರುತ್ತಿರುತ್ತದೆ. ಆದರೆ ಇಲ್ಲಿ ವಾಹನಗಳು ಓಡಾಟ ನಡೆಸಲು ಯೋಗ್ಯವಾದ ರಸ್ತೆ ಇಲ್ಲ. ಇಡೀ ರಸ್ತೆ ಹೊಂಡಮಯವಾಗಿದ್ದು, ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುತ್ತದೆ ಎಂದು ಇಲ್ಲಿಯ ವರ್ತಕರು ಆರೋಪಿಸಿದ್ದಾರೆ.

‘ಪ್ರತಿದಿನ ಇಲ್ಲಿ ಕಸದ ರಾಶಿಯೇ ಸಂಗ್ರಹವಾಗುತ್ತದೆ. ಆದರೆ ವಾರದಲ್ಲಿ ಎರಡು ಮೂರು ದಿನಗಳಿಗೊಮ್ಮೆ ಮಾತ್ರ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಇಡೀ ಪ್ರಾಂಗಣ ಕಸದಿಂದ ತುಂಬಿ ಹೋಗಿದ್ದು, ರೋಗಗಳ ಉಗಮ ಸ್ಥಾನವಾಗಿದೆ. ಅಲ್ಲದೇ ಇಲ್ಲಿರುವ ಶೌಚಾಲಯಕ್ಕೆ ನಿರ್ವಹಣೆಗಾಗಿ ಪ್ರತಿಯೊಬ್ಬರಿಂದ 5 ರೂ. ಸಂಗ್ರಹಿಸಲಾಗುತ್ತದೆ. ಆದರೆ ಈ ಶೌಚಾಲಯದಲ್ಲಿ ನೀರಿನಲ್ಲಿ ವ್ಯವಸ್ಥೆ ಮಾತ್ರವಲ್ಲ ಬಾಗಿಲೇ ಇಲ್ಲ. ಇದರಿಂದ ವರ್ತಕರು ದೂರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗುವಂತಾಗಿದೆ. ಅದೇ ರೀತಿ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ’ ದೂರಿದ್ದಾರೆ.
