“ಸಂಘಟನೆಯವರು ನಾಲ್ಕೈದು ದಿನ ಬರುತ್ತಾರೆ, ಮಾತನಾಡಿಸುತ್ತಾರೆ. ಆಮೇಲೆ ನಮಗೆ ಯಾರೂ ಇರಲ್ಲ” ಎಂದು ಕೊಲೆಯಾದ ರೌಡಿಶೀಟರ್, ಸಂಘಪರಿವಾರದ ನಾಯಕ ಸುಹಾಸ್ ಶೆಟ್ಟಿ ತಂದೆ ಮಹೇಶ್ ಶೆಟ್ಟಿ ಅವರು ಹೇಳಿದ್ದಾರೆ.
ನಿನ್ನೆ ಸುಹಾಸ್ ಶೆಟ್ಟಿ ಅಂತ್ಯ ಸಂಸ್ಕಾರ ನಡೆಯಿತು. ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುಹಾಸ್ ಶೆಟ್ಟಿ ತಂದೆ, “ಯುವಕರು ಹಿಂದೂ ಹಿಂದೂ ಎಂದುಕೊಂಡು ಹಿಂದುತ್ವದ ಹಿಂದೆ ಹೋಗುತ್ತಾರೆ. ಆದರೆ ಇಂತಹ ಘಟನೆ ನಡೆದಾಗ ಯಾರೂ ಇರುವುದಿಲ್ಲ” ಎಂದರು.
ಇದನ್ನು ಓದಿದ್ದೀರಾ? ಮಂಗಳೂರು | ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ: 5ಕ್ಕೂ ಹೆಚ್ಚು ಆರೋಪಿಗಳು ಪೊಲೀಸ್ ವಶಕ್ಕೆ?
“ನಮ್ಮ ಮಗನಿಗೆ ಈಗ 31 ವರ್ಷ. ಅವನೇ ನಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ಈಗ ಆತನ ಕೊಲೆಯ ಬಳಿಕ ನಾವು ಜೀವನ ಪೂರ್ತಿ ಕೊರಗಬೇಕು” ಎಂದು ಅಳಲು ತೋಡಿಕೊಂಡರು.
“ಕೆಲವು ಹಿಂದುತ್ವ ಸಂಘಟನೆಯ ಮುಖಂಡರುಗಳು ನಾಲ್ಕೈದು ದಿನ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿಕೊಂಡು ಬರುತ್ತಾರೆ. ಆದರೆ ಎಲ್ಲ ಆದ ಮೇಲೆ ಅವರೂ ಇರಲ್ಲ, ಬೇರೆ ಯಾರೂ ಇರಲ್ಲ” ಎಂದು ಹೇಳಿದರು.
ಹಾಗೆಯೇ “ನನ್ನ ಮಗನ ಸಾವಿಗೆ ನ್ಯಾಯ ಬೇಕು. ಸದ್ಯ ಇರುವ ಕಾಂಗ್ರೆಸ್ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ” ಎಂದರು.
ಇನ್ನು ಮಂಗಳೂರು ನಗರದ ಬಜಪೆಯಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳ ಗುಂಪಿನಿಂದ ಕೊಲೆಗೀಡಾದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು 5ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹಿಂದೂಗಳು ಕೂಡ ಭಾಗಿಯಾಗಿರುವುದಾಗಿ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
