2014 ರಿಂದ ಈವರೆಗೆ ಕೇಂದ್ರ ಸರಕಾರ ಬಿಸಿಯೂಟ ನೌಕರರ ಗೌರವಧನ ಹೆಚ್ಚಳ ಮಾಡಿಲ್ಲ. ಕೇಂದ್ರ ಸರಕಾರ 26 ಸಾವಿರಕ್ಕೆ ಗೌರವಧನ ಹೆಚ್ಚಿಸಬೇಕು. ಅಲ್ಲಿಯವರೆಗೆ ರಾಜ್ಯ ಸರಕಾರವೇ ಪಾಂಡಿಚೆರಿ ಹರಿಯಾಣ, ತಮಿಳುನಾಡು ಮಾದರಿಯಲ್ಲಿ 7 ರಿಂದ 12 ಸಾವಿರ ವೇತನ ಕೊಡಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಸಿಐಟಿಯು ನೇತೃತ್ವದಲ್ಲಿ ಗುರುವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ನೌಕರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳ, ಮಧ್ಯಾನದ ಬಿಸಿಯೂಟ ಯೋಜನೆ ಪ್ರಾರಂಭವಾಗಿ 24 ವರ್ಷಗಳು ಕಳೆಯುತ್ತಿವೆ. ಲಕ್ಷಾಂತರ ಮಕ್ಕಳಿಗೆ ಹಾಲು ನೀಡಿ, ಶಾಲೆಯನ್ನು ಸ್ವಚ್ಛಗೊಳಿಸಿ, ಬಿಸಿ ಬಿಸಿ ಆಹಾರ ನೀಡಿ, ಶಾಲೆಯಲ್ಲಿ ನೀಡುವ ದಿನನಿತ್ಯದ ಎಲ್ಲಾ ಕೆಲಸ ಮಾಡಿ, ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ತಾಯ್ತತನದ ಪ್ರೀತಿ ನೀಡುವ ಪರಿಶ್ರಮ ಕೆಲಸವಾಗಿದೆ. ಇಂತಹ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನವನ್ನೂ ನೀಡದೆ ಶೋಷಣೆ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಮೇಲ್ನೋಟಕ್ಕೆ ಸರ್ಕಾರದ ಸುತ್ತೋಲೆಯಲ್ಲಿ 4 ಗಂಟೆ ಕೆಲಸವೆಂದು ನಿಗದಿಯಾಗಿದೆ. ಆದರೆ, ಪ್ರತಿ ಶಾಲೆಯಲ್ಲಿ ದಿನಕ್ಕೆ 6 ಗಂಟೆ ಕೆಲಸ ಮಾಡುತ್ತೇವೆ. ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ನೀಡುತ್ತಿರುವ ಕೋಳಿ ಮೊಟ್ಟೆ ಬೇಯಿಸಿ ಸುಲಿದು ಮಕ್ಕಳಿಗೆ ಕೊಡುವುದು, ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸುವುದು, ಕೆಲವೆಡೆ ನೂರಾರು ಮಕ್ಕಳಿಗೆ ಚಪಾತಿ ಮಾಡಿಕೊಡುವುದು ಶ್ರಮದಾಯಕ ಕೆಲಸವಾಗಿದೆ. ಬರಗಾಲ ಬೇಸಿಗೆ ಕಾಲದಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಕನಿಷ್ಠ ವೇತನ 6 ಸಾವಿರ ನೀಡಲೇಬೇಕು ಎಂದು ಒತ್ತಾಯಿಸಿದರು.
ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು. ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು ಎಂದರು.

ಶಾಲೆಗಳಲ್ಲಿ ಗ್ರೂಪ್ “ಡಿ” ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಚತೆ, ಕೈತೊಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು. ಶಾಲಾ ಅವಧಿಯ ನಂತರ ನರೆಗಾ ಯೋಜನೆ ಅಡಿ ಶಾಲಾ ಕೈತೊಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಅಂಬೇಡ್ಕರ್ ವಿವಾದ | ಶಾ ಹೇಳಿಕೆಗೆ ಚಿಕ್ಕಬಳ್ಳಾಪುರ ದಲಿತ ಮುಖಂಡರ ವ್ಯಾಪಕ ಖಂಡನೆ
ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಎರಡು ಜನ ಅಡುಗೆಯವರು ಇರಲೇಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 18ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುನಿಕೃಷ್ಣಪ್ಪ, ಸಿದ್ದಗಂಗಪ್ಪ, ದೇವರಾಜು, ಶ್ರೀನಿವಾಸ್, ರಾಜಮ್ಮ, ಕಾಂತಪ್ಪ ಸೇರಿದಂತೆ ನೂರಾರು ಮಂದಿ ಅಕ್ಷರ ದಾಸೋಹ ನೌಕರರು ಭಾಗವಹಿಸಿದ್ದರು.