ಬೀದರ್ | ಮಂಜುರಾದರೂ ಅಲೆಮಾರಿಗಳಿಗೆ ದಕ್ಕದ ನಿವೇಶನ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ

Date:

Advertisements

“ನಲ್ವತ್ತು ವರ್ಷ ಆಯ್ತು, ಇಲ್ಲೇ ಜಿಂದಗಿ ಮಾಡ್ತಾ ಇದ್ದೀನಿ, ಸಣ್ಣಪುಟ್ಟ ಮಕ್ಕಳೊಂದಿಗೆ ಇದೇ ಜೋಡಿಯಲ್ಲಿ ಸಂಸಾರ ನಡಸ್ತಾ ಇದ್ದೀನಿ, ನಮ್ಗ್ ಭಾಳ್ ವನವಾಸ್ ಅದಾ ನೋಡ್ರಿ, ಯಾರೂ ನೋಡಲ್ಲ, ಯಾರಿಗೂ ನಮ್ ಕಷ್ಟ ಅರ್ಥ ಆಗಲ್ಲ, ಎಲ್ಲರಿಗೂ ಓಟ್ ಹಾಕ್ತೇವ್, ಹತ್ತು ವರ್ಷದಿಂದ ನಿಮ್ಗೆ ಮನೆ ಕೊಡ್ತೀವಿ, ಜಾಗ ಕೊಡ್ತೀವಿ ಅಂತ ಹೇಳ್ತಾನೇ ಇದ್ದಾರೆ. ಆದರೆ ಇಲ್ಲಿತನಕ ಕುಡಿಯಲು ನೀರು ಸಹ ಕೊಟ್ಟಿಲ್ಲ. ದಿನಾಲೂ ನಮ್ಗ ಖರೀದಿ ನೀರೇ ಗತಿ, ಮಳೆ ಬಂದ್ರೆ ಸಾಕು, ಗುಡಿಸಿ ತುಂಬಾ ನೀರು, ಸುತ್ತಲೂ ಕೆಸರೇ ಕೆಸರು, ಇಂಥ ಸ್ಥಿತಿಯಲ್ಲಿ ನಾವ್ ಹ್ಯಾಂಗ್ ಬದುಕಬೇಕು ನೀವೇ ಹೇಳಿ?” ಅಂತ ತನ್ನ ಬದುಕಿನ ಸಂಕಟವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ ಅಲೆಮಾರಿ ಸಮುದಾಯದ ಹಿರಿಯ ಮಹಿಳೆ ಪೆಂಟಮ್ಮ.

ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಬಿಇಒ ಕಚೇರಿ ಪಕ್ಕ, ಎಪಿಎಂಸಿ ಆವರಣ‌ ಸೇರಿದಂತೆ ಇತರೆ ಹಲವು ಕಡೆ ಮೂರು ದಶಕಗಳಿಂದ ವಾಸಿಸುತ್ತಿರುವ ಸುಮಾರು 150ಕ್ಕೂ ಅಧಿಕ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ, ವಾಸಕ್ಕೆ ನಿವೇಶನ ಇಲ್ಲ, ಸ್ವಂತಕ್ಕೆ ಸೂರಿಲ್ಲ. ಬೀದಿ ಬದಿಯಲ್ಲಿ ಹಳೆ ಸಿರೆಗಳಿಂದ ತಯ್ಯಾರಿಸಿಕೊಂಡ ‘ಜೋಪಡಿಗಳೇ’ ಇವರ ಬದುಕಿಗೆ ಆಸರೆ. ನಾಯಿ, ಹಂದಿಗಳು ವಾಸಿಸುವ ಸ್ಥಳದಲ್ಲೇ ಇವರೂ ಜೀವಿಸುವ ಪರಿಸ್ಥಿತಿ ಕಂಡರೆ ಬಹುಶಃ ಎಲ್ಲರಿಗೂ ಕಣ್ಣಲ್ಲಿ ನೀರು ಬರದೇ ಇರದು. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಧಾರುಣ ಪರಿಸ್ಥಿತಿ, ಆದರೂ ಕಂಡು ಕಂಡರಿಯದಂತೆ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳು ನಿವೇಶನ ಮಂಜೂರಾತಿ ಆಶ್ವಾಸನೆ ನೀಡುತ್ತಾ ವರ್ಷಗಳು ದೂಡುತ್ತಿದ್ದಾರೆ.

ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ಗೊಂದಳಿ, ಜೋಷಿ, ಬುಡಬುಡಕೆ, ವಾಸುದೇವ, ಘಿಸಾಡಿ, ದರ್ವೇಸಿ, ಗೋಸಾಯಿ ಸೇರಿದಂತೆ ಇತರೆ 150 ಕ್ಕೂ ಅಲೆಮಾರಿ ಸಮುದಾಯದ ವಸತಿ ವಂಚಿತ ಕುಟುಂಬಗಳಿವೆ, ಪಟ್ಟಣದ ಖಾಲಿ ಇರುವ ಸ್ಥಳದಲ್ಲಿ ಜೋಪಡಿ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವು ಕುಟುಂಬಗಳು ಬಾಡಿಗೆ ಜಾಗದಲ್ಲಿದ್ದಾರೆ.‌ ದಿನಗೂಲಿ, ಆಟಿಕೆ ಸಾಮಾನು‌ ಮಾರಾಟ, ಸಾಂಪ್ರದಾಯಿಕ ವೃತ್ತಿ, ಬಿಕ್ಷೆ ಬೇಡಿ ಮಕ್ಕಳನ್ನು ಸಲುಹುತ್ತಿದ್ದಾರೆ.

Advertisements

ಮಂಜೂರಾದರೂ ಹಂಚಿಕೆ ಆಗದ ನಿವೇಶನ

ಅಲೆಮಾರಿ ಜನಾಂಗವು 2017ರಿಂದ ವಸತಿಗಾಗಿ ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಮಾಡಿದರು. ಇದರ ಫಲವಾಗಿ ಅಂದಿನ ಬೀದರ್ ಜಿಲ್ಲಾಧಿಕಾರಿ ಹೆಚ್.ಆರ್‌ ಮಹಾದೇವ ಅವರು 21-12-2019ರಂದು ಔರಾದ ಪಟ್ಟಣದ ಸರ್ಕಾರಿ ಗಾಯರಾಣ ಜಮೀನು ಸರ್ವೇ ನಂ 183ರಲ್ಲಿ 2 ಎಕರೆ ಜಮೀನನ್ನು ಔರಾದ ಪಟ್ಟಣದ ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ನಿವೇಶನಕ್ಕಾಗಿ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಆದೇಶಿಸಿದರು. ಆದರೆ ಸರ್ವೇ ನಂ. 183ನಲ್ಲಿ ಮಂಜೂರಾದ ನಿವೇಶನಕ್ಕೆ ಸ್ಥಳೀಯ ಜನಪ್ರತಿನಿಧಿಗಳ ತಕರಾರು ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಹಸೀಲ್ದಾರ್ ಅವರು ಅಲೆಮಾರಿಗಳಿಗೆ ನಿವೇಶನ ಹಂಚಿಕೆ ಮಾಡದಿರುವ ಕಾರಣ ಅದು ಹಾಗೇ ನೆನೆಗುದಿಗೆ ಬಿದ್ದಿತ್ತು.

ರದ್ದಾದ ಹಳೆ ನಿವೇಶನ; ಹೊಸ ಜಮೀನು ಆದೇಶ

2022ರ ಜುಲೈ 1 ರಂದು ಔರಾದ ತಹಸೀಲ್ದಾರ್ ಕಛೇರಿ ಮುಂದೆ ಮತ್ತೆ ಧರಣಿ ಸತ್ಯಾಗ್ರಹ ನಡೆಸಿದ ಅಲೆಮಾರಿ ಸಮಾಜ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಂದಿನ ತಹಸೀಲ್ದಾರ್ ಅರುಣಕುಮಾರ್ ಕುಲಕರ್ಣಿ ಒಂದು ವಾರದೊಳಗೆ ನಿವೇಶನ ಹಂಚಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವೆ ಎಂದು ಭರವಸೆ ನೀಡಿದ್ದರು. ನಂತರ 2022 ರ ಜುಲೈ 22 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕರೆಯಲಾದ ಸಭೆಯಲ್ಲಿ ಔರಾದ ಪಟ್ಟಣದಲ್ಲಿ ವಾಸಿಸುವ ಅಲೆಮಾರಿ ಜನಾಂಗದ ವಸತಿ ಹಾಗೂ ನಿವೇಶನ ರಹಿತ 73 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಆದೇಶಿಸಿದ್ದರು.

ಅಲೆಮಾರಿ 1

2022ರ ಡಿಸೆಂಬರ್ 27ರಂದು ನಡೆದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಔರಾದ ಪಟ್ಟಣದ ಸರ್ಕಾರಿ ಗಾಯರಾಣ ಜಮೀನು ಸರ್ವೇ ನಂ. 205 ರಲ್ಲಿ ಒಟ್ಟು 50 ಎಕರೆ 11 ಗುಂಟೆ ಜಮೀನು ಪೈಕಿ 2 ಎಕರೆ ಜಮೀನನ್ನು ಔರಾದ ಪಟ್ಟಣದ ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ವಸತಿ ರಹಿತ ಕುಟುಂಬಗಳ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಆದೇಶಿಸಿದರು. ಆದರೆ ಆದೇಶಿಸಿ 6 ತಿಂಗಳ ಕಳೆದರೂ ಇನ್ನೂ ಯಾವುದೇ ಪ್ರಕ್ರಿಯೆ ನಡೆಯಲೇ ಇಲ್ಲ ಎಂಬುದು ವಿಪರ್ಯಾಸ.

ಅಲೆಮಾರಿ ಜನಾಂಗಕ್ಕೆ ಸೂರು ಕಲ್ಪಿಸುವ ಬಗ್ಗೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ಎಲ್ಲರ ಗಮನಕ್ಕೆ ತರಲಾಗಿದೆ. 2019ರಲ್ಲಿ ಸರ್ಕಾರದಿಂದ ನಿವೇಶನ ಮಂಜೂರಾಗಿತ್ತು. ಆದರೆ ತಾಲೂಕಾಡಳಿತ ಹಂಚಿಕೆ ಮಾಡದೆ ತಾರತಮ್ಯ ಮಾಡಿತ್ತು. ನಂತರ ಕರೆದ ಸಭೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು. ಆದರೆ ಸದರಿ ಜಾಗ ತಕಾರಾರಿನಲ್ಲಿದೆ ಎಂದು ಕಾರಣವೊಡ್ಡಿ ಮತ್ತೆ ಸರ್ವೇ ನಂ.205ರಲ್ಲಿ ನೀಡುವಂತೆ ಹೇಳಿದ್ದಾರೆ. ಮಂಜುರಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಸತಿ ವಂಚಿತರು ಜೋಪಡಿಗಳಲ್ಲಿ ವಾಸಿಸುವಂತಾಗಿದೆ. ಪ್ರಾಣಿಗಿಂತಲೂ ಕಡೆಯಾದ ಇವರ ಪರಿಸ್ಥಿತಿ ಕಂಡು ಮಾನವೀಯತೆ ದೃಷ್ಟಿಯಿಂದಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ನಿವೇಶನ ಹಂಚಿಕೆ ಮಾಡಬೇಕೆಂದು ಭಟ್ಕೆ ಸಮಾಜ ಸುಧಾರಣಾ ಸಮಿತಿ ಜಿಲ್ಲಾಧ್ಯಕ್ಷ ನಾಗನಾಥ ವಾಕೂಟೆ ‘ಈದಿನ’ ಜತೆಗೆ ಮಾತನಾಡಿ ಒತ್ತಾಯಿಸಿದ್ದಾರೆ.

“ನಮ್ಮ ಕಷ್ಟ ಯಾರಿಗೂ ಕಾಣುತ್ತಿಲ್ಲ. ಬರೀ ಓಟ್ ಹಾಕಿಸಿಕೊಳ್ಳಲು ಮಾತ್ರ ಬರ್ತಾರೆ, ಒಂದು ರೇಷನ್ ಕಾರ್ಡ್, ಆಧಾರ್ ಕಾರ್ಡ್ ನೋಂದಣಿಗೆ 5 ಸಾವಿರ ರೂಪಾಯಿ ಕೇಳ್ತಾರೆ, ಎಲ್ಲಿಂದ ತರ್ಬೇಕು ನಾವು, ಮನೆ ಮನೆಗೆ ಬಿಕ್ಷೆ ಬೇಡುವ ಪುಟ್ಟ ಮಕ್ಕಳಿಗೆ ಅಕ್ಷರ ಕಲಿಸಲು ಆಗಲ್ಲ, ಖಾಸಗಿ ಜಾಗದಲ್ಲಿ ವಾಸಿಸುವ ನಮಗೆ ಕುಡಿಯಲು ನೀರಿಲ್ಲ, ಕರೆಂಟ್ ಇಲ್ಲ, ಇದೇ ಕಗ್ಗತ್ತಲ ಜೋಪಡಿಗಳಲ್ಲಿ ಇಡೀ ಬದುಕೇ ಕಳೆಯುತ್ತಿದೆ. ಇಲ್ಲಿ ಬದುಕುವುದು ಸಾಯುವುದು ಒಂದೇ ಇದೆ. ವಿಷ ಕೊಟ್ಟು ಸಾಯ್ಸಿಬಿಡಲಿ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಅಲೆಮಾರಿ ಸಮುದಾಯ ಹಣಮಂತ ಎನ್ನುವರು.

“ಅಲೆಮಾರಿ ಜನಾಂಗದ ನಿವೇಶನದ ಬಗ್ಗೆ ನನ್ನ ಗಮನಕ್ಕೆ ಇಲ್ಲ, ನಾನು ಹೊಸದಾಗಿ ವರ್ಗಾವಣೆಯಾಗಿ ಬಂದಿರುವೆ. ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುವೆ” ಎಂದು ಔರಾದ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಈದಿನ.ಕಾಮ್‌ಗೆ ತಿಳಿಸಿದ್ದಾರೆ.

“ನಾನು ಹೊಸದಾಗಿ ಬಂದಿರುವೆ, ಕಳೆದ ಸಭೆಯಲ್ಲಿ ಸರ್ವೇ ನಂ.205ರಲ್ಲಿ ನಿವೇಶನ ಮಂಜೂರು ಮಾಡಿದ ಬಗ್ಗೆ ಗಮನಕ್ಕೆ ಬಂದಿದೆ. ಆದರೆ ತಹಸೀಲ್ದಾರ್ ಕಚೇರಿಯಿಂದ ನಮ್ಮ ಇಲಾಖೆಗೆ ಹಸ್ತಾಂತರ ಆಗಿಲ್ಲ” ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ರವೀಂದ್ರ ಮೇತ್ರೆ ಈದಿನ.ಕಾಮ್‌ಗೆ ತಿಳಿಸಿದ್ದಾರೆ.

ಅಲೆಮಾರಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನಿವೇಶನ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಆದರೆ ಔರಾದ ಪಟ್ಟಣದಲ್ಲಿ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ವಾಸಿಸುವ ಕುಟುಂಬಗಳಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಅಲ್ಲದೇ ಮತ್ತೇನಲ್ಲ ಎಂದು ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ ಕಿಡಿಕಾರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X