ಅಲೆಮಾರಿ-ಜಾಗರಣೆ | ರಾಜ್ಯಕ್ಕೇ ಮಾದರಿಯಾದ ಚಿಕ್ಕನಾಯಕನ ಸೀಮೆಯ ಅಲೆಮಾರಿ ಹಕ್ಕುಗಳ ಹೋರಾಟ!

Date:

Advertisements

ಚಿಕ್ಕನಾಯಕನ ಸೀಮೆಯ ಅಲೆಮಾರಿಗಳು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟ ರಾಜ್ಯದಲ್ಲಿಯೇ ಮಾದರಿಯಾಗಿದ್ದು, ನಿತ್ಯವೂ ಅಲೆಮಾರಿ-ಜಾಗರಣೆ ನಡೆಯುತ್ತಿದೆ.

ಹಂದಿಜೋಗಿ, ದಕ್ಕಲಿಗ, ದೊಂಬಿದಾಸ, ಚನ್ನದಾಸ, ಶಿಳ್ಳೇಕ್ಯಾತ, ಸುಡುಗಾಡು ಸಿದ್ಧ, ಕರಡಿ ಕಲಂದರ್, ಪಿಂಜಾರ, ದರ್ವೇಶ್, ಕೊರಮ, ಜೋಗಿಮಟ್ಟಿ-ಜೋಗ್ಯೇರ, ಕೊರಚ ಮುಂತಾದ ಹತ್ತು-ಹಲವು ಅಲೆಮಾರಿ-ಕಳ್ಳುಬಳ್ಳಿಗಳ ತವರೂರು ಚಿಕ್ಕನಾಯಕನಹಳ್ಳಿ ತಾಲೂಕು.

ಸ್ವಾತಂತ್ರ್ಯಾನಂತರದ ಈ ಎಪ್ಪತ್ತೆಂಟು ವರ್ಷಗಳ ಲಾಗಾಯ್ತಿನಿಂದಲೂ ತಮಗೆ ಕನಿಷ್ಟ ದಕ್ಕದೇಹೋದ ಈ ಅಭಿವೃದ್ಧಿ-ಪ್ರಗತಿ ಮತ್ತು ವಿಕಾಸ ಎಂಬಂತಹ ಪಥಮಾರ್ಗಗಳನ್ನು ಅರಸುತ್ತಲೇ, ಭೂಮ್ಯಾಕಾಶ ಬಯಲಲ್ಲಿ ಡೇರೆ-ಬಿಡಾರದ ಬಾಳನ್ನೇ ಬದುಕಿ ತಾಳಿಹೋದ ಹಲವು ಅಲೆಮಾರಿ-ತಲೆಮಾರುಗಳನ್ನು ಈ ಸೀಮೆ ತನ್ನೊಡಲಲ್ಲಿ ಅಡಗಿಸಿಕೊಂಡಿದೆ. ಹಾಗಾಗೇ, ಇಡೀ ರಾಜ್ಯಕ್ಕೇ ಮಾದರಿ ಮತ್ತು ಸ್ಫೂರ್ತಿದಾಯಕವಾದ ‘ಅಲೆಮಾರಿ ಹಕ್ಕುಗಳ ಹೋರಾಟ’ವನ್ನು ರೂಪಿಸಿಕೊಳ್ಳುವ ಚೈತನ್ಯ ಈ ಸೀಮೆಯದ್ದು.

Advertisements

ಇಲ್ಲಿನ ಅಲೆಮಾರಿಗಳಿಗೆ ಒದಗಿರುವ ನಾಗರಿಕ-ಹಕ್ಕುಗಳ ತಿಳಿವು ಮಿಕ್ಕೆಲ್ಲರಿಗಿಂತ ಹೆಚ್ಚಿನದು. ಈ ಸೀಮೆಯ ಅಲೆಮಾರಿಗಳ ಕಸುಬುದಾರಿಕೆಯ ಕಸುವೂ ವಿಶೇಷ. ಪೊರಕೆ ಹೆಣೆಯುವ, ಮಂಕ್ರಿ ಹೆಣೆಯುವ, ಸಾಣೆ ಹಿಡಿಯುವ, ಲಾಳ ಕಟ್ಟುವ, ಸೂಜಿ-ಪಿನ್ನ ಮಾರಾಟ, ಕೂದಲು ವ್ಯಾಪಾರ, ಮಕ್ಕಳ ಆಟಿಕೆ ಸಾಮಗ್ರಿಗಳ ಮಾರಾಟ, ಕಡೆಗೆ ಏನೂ ಇಲ್ಲದಿದ್ದರೆ ಭಿಕ್ಷಾಟನೆ ಮಾಡಿ ಅನಿವಾರ್ಯ ಬದುಕು ಬದುಕುವ ಅಲೆಮಾರಿ ಅನಿಕೇತನ-ವಿಶೇಷರು. ಇವರಿಗೆ ಸವಲತ್ತು ದಕ್ಕಿದ್ದು ಮಾತ್ರ, ಎಂದಿಗೂ ಸಶೇಷವೇ.

ಭೂಮ್ಯಾಕಾಶ-ಬಯಲಿನ ಅಲೆಮಾರಿ ಜಾಗರಣೆ,,,,,

ತಾನು ಹುಟ್ಟಿದಂದಿನಿಂದಲೂ ಕಂಡಿದ್ದು ಭೂಮಿ ಮತ್ತು ಆಕಾಶವನ್ನೇ. ಈ ‘ಮಣ್ಣು-ತಿಂದು, ಈ ಭೂಮಿ-ಹಾಸಿ, ಆ ಆಕಾಶವ ಹೊದ್ದು ಬೆಳೆದವರು ನಾವು!’ ಆ ಸೂರ್ಯ ಚಂದ್ರ ಚಿಕ್ಕೆ ತಾರೆ ಹುಣ್ಣಿಮೆಗಳೆಲ್ಲ ಭೌತಜ್ಞಾನಿಗಳಿಗಿಂತ ಹೆಚ್ಚು ನಮಗೇ ಮೊದಲು ಮೀಸಲಾದ ಹಕ್ಕುಪತ್ರಗಳು! ಈ ವಿಶ್ವಕ್ಕೆ ನಾವೇ ಆದಿ-ವಾರಸುದಾರರು ಎಂಬಂತಹ ತ್ರಿಕಾಲ-ಜ್ಞಾನವ ತದೇಕ ನುಡಿದುಬಿಡುವ ಹಂದಿಜೋಗಿ ರಾಜಪ್ಪ, ಅಲೆಮಾರಿ ಹಕ್ಕುಗಳ ಹೋರಾಟದಲ್ಲೇ ತಾರುಣ್ಯ ಕಳಕೊಂಡ ಮಹಾಯುಷಿ.

ಅಲೆಮಾರಿ ಜನಾಂಗದ ಹೋರಾಟ
ಹಂದಿಜೋಗಿ ರಾಜಪ್ಪ ಅಲೆಮಾರಿ ಹಕ್ಕುಗಳ ಅವಿರತ ಹೋರಾಟಗಾರ, ಹುಳಿಯಾರು-ಗೌಡಗೆರೆ

ಸಾಮಾನ್ಯರಿಗೆ ಹಬ್ಬದ-ದಿನವಷ್ಟೇ ಜಾಗರಣೆ ಆದರೆ, ನಮ್ಮ ಅಲೆಮಾರಿಗಳದ್ದು ಆಯುಷ್ಯ-ಪೂರ್ತಿ ಜಾಗರಣೆ. ನಮ್ಮ ಟೆಂಟು, ಡೇರೆ, ಬಿಡಾರ’ಗಳಲ್ಲಿ ಮಕ್ಕಳು-ಮರಿ ಕಟ್ಟಿಕೊಂಡು ಇಕ್ಕಟ್ಟು-ಇರುಕಟ್ಟಿನಲ್ಲಿ ಮುದುರಿಕೊಳ್ಳುವ ನಾವು, ಮಕ್ಕಳು ಮತ್ತು ಮುದುಕರಿಗೆ ಮಲಗಲು ಜಾಗಬಿಟ್ಟು ರಾತ್ರೆಯೆಲ್ಲ ಜಾಗರಣೆ ಮಾಡುತ್ತಲಿರುತ್ತೇವೆ. ಊರ ಹೊರಗಿನ ಪಾಳು-ಬಿದ್ದ ಜಾಗಗಳಲ್ಲಿ ನಾವು ಡೇರೆ ಕಟ್ಟಿ ಬಿಡಾರ ಹೂಡುವ ಅನಿವಾರ್ಯತೆ ಇರುವುದರಿಂದ ಕ್ರೂರಪ್ರಾಣಿ, ಸರಿಸೃಪ ಮತ್ತು ಕಾಮುಕ-ಪ್ರಾಣಿಗಳಿಂದ ರಕ್ಷಣೆಯ ಭೀತಿಯಲ್ಲಿ ಜಾಗರಣೆ ಮಾಡಬೇಕಿದೆ. ನಮ್ಮ ಜಾಗರಣೆ ಶಿವನಷ್ಟೇ ನೈಜ, ಶಿವನಷ್ಟೇ ದಿಟ, ಶಿವನಷ್ಟೇ ಶಾಶ್ವತ ಎಂದು ಅರಿವೇ ಇಲ್ಲದೇ ಅನೈಚ್ಛಿಕವಾಗಿ ‘ಭೂಮಿಸ್ಪರ್ಶ-ಮುದ್ರಾ’ ಮಾಡಿದ ಹಂದಿಜೋಗಿ ರಾಜಪ್ಪ ಚಣಹೊತ್ತು ತಲ್ಲೀನ ಸುಮ್ಮನಾದರು.

ತನ್ನ ಕುಲ-ಮೂಲ ಮತ್ತು ನೆಲ-ಮೂಲ ಬಗೆದು ಸೋಸಿಕೊಂಡ ಒಬ್ಬ ‘ಕುಲಶಾಸ್ತ್ರೀಯ ಮೀಮಾಂಸಕ’ನಂತೆ ಪರಂಪರೆಗಳ-ಬಾಳ್ಮೆಯನ್ನು ಕ್ಷಣಭಂಗುರತೆಯ ಸಲೀಸಲ್ಲಿ ಸುಲಲಿತ ಒಗಾಯಿಸಿ ದಂಗುಬಡಿಸಬಲ್ಲ ಗರೂಡ-ಪ್ರತಿಭೆಯ ಹಂದಿಜೋಗಿ ರಾಜಪ್ಪ, ಅಲೆಮಾರಿ ಸಮುದಾಯಗಳಿಗೆ ಅಕಸ್ಮಾತ್ ದಕ್ಕಿಬಿಟ್ಟಿರುವ ಆಧುನಿಕ-ದಾರ್ಶನಿಕ ದೃಷ್ಟಿ’ಯಾಗಿ ಆಕಾರವೆತ್ತಿರಬಹುದು ಎಂದೆನಿಸುತ್ತದೆ!

ಅಲೆಮಾರಿ-ಜಾಗರಣೆ
ಹುಳಿಯಾರು ಪಟ್ಟಣದ ಶಂಕರಪುರ ಬಡಾವಣೆಯ ಕೆರೆದಂಡೆ ವಸತಿ ಪ್ರದೇಶಕ್ಕೆ’ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ
ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ

ಅಲಕ್ಷಿತ, ಹಕ್ಕು-ವಂಚಿತ ಅಲೆಮಾರಿಗಳು,,,,

ಇಂತಹ ರಾಜಪ್ಪ, ತನ್ನಿಡೀ ಜೀವಮಾನದ ಅಲೆಮಾರಿ-ಹಕ್ಕುಗಳ ಹೋರಾಟದಲ್ಲಿ ಸಹಯೋಗಿಗಳಾಗಿ ಬಂದ ರಂಗನಾಥ್, ವೆಂಕಟೇಶಯ್ಯ, ಶಾಂತರಾಜು, ಹನ್ಮಂತ್ಪುರ-ರಾಜಣ್ಣ ಮತ್ತಿತರ ಗೆಳೆಯರನ್ನು ನೆನೆಯುತ್ತ, ಹಕ್ಕುಗಳ ಹೋರಾಟಕ್ಕಾಗಿ ನಿರ್ದಿಷ್ಟ ಸ್ವರೂಪಗಳನ್ನು ರೂಪಿಸಿಕೊಟ್ಟ ಚಿಂತಕ ಮತ್ತು ಅಲೆಮಾರಿ ಸಂಗಾತಿ ರಘುಪತಿಯವರನ್ನು ಮನಸಾರೆ ನೆನೆಯುತ್ತಾರೆ.

ಬಹುಶಃ ಅರೆ-ಅಲೆಮಾರಿ ಕೆಟಗರಿಯನ್ನು ಹೊರತುಪಡಿಸಿ ನೋಡಿದರೆ, ಇಡೀ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಅಲೆಮಾರಿ ಹೋರಾಟದ ಮೂವರು ಮುಂಚೂಣಿ-ಕಾರ್ಯಕರ್ತರಿಗೆ ‘ರಾಜ್ಯೋತ್ಸವ ಗೌರವ-ಸನ್ಮಾನ’ ನೆರವೇರಿಸಿದ್ದರಲ್ಲಿ ತುಮಕೂರೇ ಪ್ರಥಮ ಎಂದೆನಿಸುತ್ತದೆ! ಮತ್ತದು, ‘ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಧ್ಯೇಯಘೋಷದ ಕರ್ನಾಟಕ-50’ರ ಸಂಭ್ರಮಕ್ಕೂ ಶೋಭಾಯಮಾನ.

ಇಷ್ಟೆಲ್ಲಾ ಪರಿಣಾಮಕಾರಿ ಹೋರಾಟಗಳನ್ನು ನಡೆಸಿಯೂ, ‘ರಾಜ್ಯೋತ್ಸವ ಗೌರವ ಸನ್ಮಾನ’ಕ್ಕೆ ಪಾತ್ರರಾಗಿಯೂ ಕೂಡ, ಅಲೆಮಾರಿಗಳ ಮೂಲಭೂತ ಹಕ್ಕು-ಸೌಕರ್ಯಗಳಿಗೆ ಮತ್ತೆ ದಿನಂಪ್ರತಿ ಗೋಗರೆಯುವ ಪರಿಸ್ಥಿತಿ ಒದಗಿರುವುದು ಶೋಚನೀಯವೆಂದು ಹಂದಿಜೋಗಿ ರಾಜಪ್ಪ ಕೊರಗುತ್ತಾರೆ.

ಹುಳಿಯಾರು ಪಟ್ಟಣದ ಶಂಕರಪುರ ಬಡಾವಣೆಯ ಕೆರೆದಂಡೆ ವಸತಿ ಪ್ರದೇಶಕ್ಕೆ'ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ
ಹುಳಿಯಾರು ಪಟ್ಟಣದ ಶಂಕರಪುರ ಬಡಾವಣೆಯ ಕೆರೆದಂಡೆ ವಸತಿ ಪ್ರದೇಶದ ಅಲೆಮಾರಿ ಸಮುದಾಯ

ದಕ್ಕಲಿಗರ ಗಾಂಧಿನಗರಕ್ಕೆ ಶೌಚಾಲಯ,,,,

“ದಶಕಗಳ ಹಿಂದಿನ ಆಕ್ರೋಶ-ಆಕ್ರಂದನಗಳ ಪರಿಣಾಮವಾಗಿ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದಲ್ಲಿ ದಕ್ಕಲಿಗ ಸಮಯದಾಯದ ನಿರಾಶ್ರಿತರಿಗಾಗಿ ನಿವೇಶನ ಕಲ್ಪಿಸಿ ಒಂದು ಕಾಲೊನಿ ಮಾಡಿಕೊಟ್ಟು ಅದಕ್ಕೆ ಗಾಂಧಿನಗರ ಎಂದು ಹೆಸರಿಡಲಾಗಿದೆ. ಸದರಿ ಗಾಂಧಿನಗರದಲ್ಲಿ ಸ್ವಚ್ಛತೆ ಎಂಬುದೇ ಮರೀಚಿಕೆಯಾಗಿದೆ. ನಿವಾಸಿಗಳ ಬೇಜವಾಬ್ದಾರಿತನ, ಪುರಸಭೆಯ ನಿರ್ಲಕ್ಷ್ಯ ಹಾಗೂ ಇಲ್ಲಿರುವ ಕಟ್ಟಕಡೆಯ ಜನರ ಮೂಲಭೂತ ಹಕ್ಕುಗಳಿಗೆ ಹೊಣೆ ಯಾರು’ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ ಮಕ್ಕಳ-ಶಿಕ್ಷಣ, ಆಧಾರ್ ಕಾರ್ಡ್, ಪಂಚಗ್ಯಾರಂಟಿ ಯೋಜನೆ ಅನುಷ್ಠಾನ, ಆರೋಗ್ಯ ವ್ಯವಸ್ಥೆ, ನೈರ್ಮಲ್ಯ ವ್ಯವಸ್ಥೆ ಹಾಗೂ ಇಲ್ಲಿನ ಹೆಣ್ಣುಮಕ್ಕಳ ಶೌಚಾಲಯದ ಸಮಸ್ಯೆಗೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ’ಯವರೇ ಸ್ವತಃ ಇಲ್ಲಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿ, ತಹಶೀಲ್ದಾರ್ ಕೆ ಪುರಂದರ್ ಅವರಿಗೆ ಹಾಗೂ ಸಂಬಂಧಿಸಿದ ಇತರೇ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿಹೋಗಿದ್ದರು. ಅವರು ಇಲ್ಲಿಗೆ ಭೇಟಿಕೊಟ್ಟು ಅದಾಗಲೇ ಆರು ತಿಂಗಳು ಕಳೆಯುತ್ತ ಬಂತು. ಪ್ರಗತಿ, ಅಭಿವೃದ್ಧಿ, ವಿಕಾಸ, ಸೌಲಭ್ಯ ಇತ್ಯಾದಿ ಬೋರ್ಡುಗಳು ಇನ್ನೂ ನೇತಾಡುತ್ತಲೇ ಇವೆ” ಎಂದು ದಕ್ಕಲಿಗರ ಮುಖಂಡ ಶಾಂತರಾಜು ಬೇಸರ ವ್ಯಕ್ತಪಡಿಸಿದರು.

ಅಲೆಮಾರಿ ಜನಾಂಗ
ರಾಷ್ಟ್ರ-ಲಾಂಛನವ ದಿಟ್ಟಿಸುತ್ತಾ ನಿಂತ ವಸತಿ-ವಂಚಿತ ಅಲೆಮಾರಿ ವನಿತೆಯರು

ಅಲೆಮಾರಿ ಕುಂದು-ಕೊರತೆ ಸಭೆ,,,,

“ಅಲೆಮಾರಿ ಹಕ್ಕುಗಳ ಹೋರಾಟಗಾರರು ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾದ ಸದಸ್ಯ-ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ, ಅಲೆಮಾರಿಗಳ ಸಮಸ್ಯೆಗಳಿಗೆ ನಿರ್ದಿಷ್ಟವಾಗಿ ಪ್ರತಿತಿಂಗಳು ‘ಅಲೆಮಾರಿ ಕುಂದು-ಕೊರತೆ ಸಭೆ’ ನಡೆಸಬೇಕು ಎಂದು ಒತ್ತಾಯಿಸಿದ್ದರು. ಸಭೆ ನಡೆಯುತ್ತಿರಬಹುದು. ಆದರೆ, ಅದರಿಂದಾದ ಪರಿಣಾಮಗಳೇನು ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ ಎನ್ನುತ್ತಾರೆ ಅಲೆಮಾರಿ ಬುಡಕಟ್ಟು ಮಹಸಭಾ ತಾಲೂಕು ಅಧ್ಯಕ್ಷ ರಂಗನಾಥ್.

ಮನೆ-ನಿರ್ಮಾಣಕ್ಕೆ ಧನಸಹಾಯ,,,,

“ಅಲೆಮಾರಿಗಳಿಗೆ ಚಿಕ್ಕನಾಯಕನಹಳ್ಳಿ ತಾಲೂಕು ಕಸಬಾ ಹೋಬಳಿಯ ದಬ್ಬೇಘಟ್ಟಲಿ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರ ಒದಗಿಸಿಕೊಟ್ಟು ವರ್ಷಗಳೇ ಕಳೆದುವು!. ಹುಳಿಯಾರು ಹೋಬಳಿ ಕೆಂಕೆರೆ-ಗೌಡಗೆರೆ ಬಳಿ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ಒದಗಿಸಿ ವರ್ಷಗಳೇ ಕಳೆದುವು. ಆದರೆ, ಹಂಚಿಕೆಯಾದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಧನ-ಸಹಾಯ ಮಾತ್ರ ಬಿಡುಗಡೆಯಾಗುತ್ತಿಲ್ಲ. ಒತ್ತಾಯ-ಒತ್ತಡಗಳ ಪರಿಣಾಮದಿಂದ ಈಗ ಬಿಡುಗಡೆ ಮಾಡಲಾಗುತ್ತಿದೆಯಾದರೂ ಆ ಹಣ(1ಲಕ್ಷ 70 ಸಾವಿರ) ಬೇಸ್‌ಮೆಂಟ್ ಖರ್ಚಿಗೂ ಸಾಕಾಗುವುದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.

ಅಲೆಮಾರಿ ಸಮುದಾಯದವರು
– ಚಿಕ್ಕನಾಯಕನ ಸೀಮೆ ಸುತ್ತಲಿನ ಬಹುಜನ-ಅಲೆಮಾರಿಗಳು

“ಗಣಿಬಾಧಿತ ಪ್ರದೇಶದ ಪುನಶ್ಚೇತನ ಯೋಜನೆಯ ವ್ಯಾಪ್ತಿಯಲ್ಲಿ ‘ಅಲೆಮಾರಿ ಸಮುದಾಯಗಳ ವಸತಿ ಪ್ರದೇಶ’ ಬರುತ್ತದಾದರೆ, ಆ ಯೋಜನೆಯ ಹಣದಿಂದಲಾದರೂ ಬಡ ಅಲೆಮಾರಿಗಳಿಗೆ ಹೆಚ್ಚಿನ ಧನ-ಸಹಾಯ ಒದಗಿಸಿಕೊಡಬಹುದು. ಆದರೆ, ಇದಕ್ಕೆ ಯಾರೂ ಸಕಾರಾತ್ಮವಾಗಿ ಸ್ಪಂದಿಸುತ್ತಿಲ್ಲ. ಇದೆಂತಹ ಶೋಚನೀಯ ಸ್ಥಿತಿ ನಮ್ಮದು. ಕೈಯ್ಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಸ್ಥಿತಿ ನಮ್ಮದು” ಎಂದು ಅಲೆಮಾರಿ ಹೆಣ್ಣುಮಕ್ಕಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಹುಳಿಯಾರು ಕೆರೆ-ದಂಡೆ ಅಲೆಮಾರಿಗಳು,,,,

ಹುಳಿಯಾರು ಪಟ್ಟಣದ ಕೆರೆ-ದಂಡೆ ಅಂಚಿನಲ್ಲಿ ವಾಸವಾಗಿರುವ ವಸತಿ-ವಂಚಿತ ಅಲೆಮಾರಿಗಳು ಹಾಗೂ ಬಡ ನಿರಾಶ್ರಿತರ ಪ್ರದೇಶಕ್ಕೆ ‘ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ’ರಾದ ಡಾ ನಾಗಲಕ್ಷ್ಮಿ ಚೌಧರಿ’ಯವರು ಸ್ವತಃ ಭೇಟಿಕೊಟ್ಟು, ಅಲ್ಲಿನ ದುಃಸ್ಥಿತಿಯನ್ನು ಪರಿಶೀಲಿಸಿ ತಹಸೀಲ್ದಾರ್ ಕೆ ಪುರಂದರ್ ಹಾಗೂ ಉಪ-ವಿಭಾಗಾಧಿಕಾರಿ ಸಪ್ತಶ್ರೀ’ರವರಿಗೆ, ಅಲ್ಲಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಸ್ಪಷ್ಟವಾದ ಸೂಚನೆಗಳನ್ನು ನೀಡಿದ್ದರು. ಅವರು ಇಲ್ಲಿಗೆ ಬಂದುಹೋಗಿ ಆರು ತಿಂಗಳು ಕಳೆಯುತ್ತ ಬಂತು. ಆದರೂ ಕೆಲಸ ಮಾತ್ರ ಪ್ರಗತಿಯಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ಸುದ್ದಿ ಓದಿದ್ದೀರಾ? ಸುರತ್ಕಲ್‌ | ಎನ್ಐಟಿಕೆ-ಕ್ರೆಸ್ಟ್ 2025 ಮೊದಲ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ನಿತ್ಯ ಜಾಗರಣೆಯ ಕರ್ನಾಟಕದ ಈ ಅಲೆಮಾರಿಗಳು, ಮಾನವೀಯವಾಗಿ ಕನಿಷ್ಟ ಜಾಗೃತಗೊಳ್ಳಬೇಕಾದ ಕರ್ನಾಟಕವನ್ನು ಎದುರು ನೋಡುತ್ತಿದ್ದಾರೆ. ಕರ್ನಾಟಕದ ಜಾಗೃತರು ಕೆಲವರಾದರೂ ಇತ್ತ ಕಣ್ಣು ಹಾಯಿಸಬೇಕಲ್ಲವೇ?

ವರದಿ : ಸಂಚಲನ, ಚಿಕ್ಕನಾಯಕನ ಸೀಮೆಯಿಂದ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಮಾಧ್ಯಮದ ನೈಜ ಸಾಮಾಜಿಕ ಹೊಣೆಗಾರಿಕೆಗೆ ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X