“ಅವೈದಿಕ ದರ್ಶನಗಳು ಸಾಧುವಾದವು. ಉಚಿತವಾದವು. ಅವು ವೈದಿಕಕ್ಕೆ ವಿರುದ್ಧವಲ್ಲ. ಅವೈದಿಕವನ್ನು ಪಾಲಿಸುವವರು ಶ್ರಮಾಧಾರಿಗಳು. ಈ ಎಲ್ಲ ಶ್ರಮಾಧಾರಿಗಳು ಗುರು ಮಾರ್ಗಿಗಳು. ದೈವಗಳ ಬಗ್ಗೆ ಅವೈದಿಕ ದರ್ಶನಗಳು ಏನನ್ನೂ ಹೇಳಲಿಲ್ಲ. ದೈವ ಮಾರ್ಗದ ಬಗ್ಗೆ ಕೆಲವು ಗುರು ಮಾರ್ಗಿಗಳು ಮಾತನಾಡಿದ್ದಾರೆ. ಅವರು ವೀರ್ಯ ಶುಲ್ಕ ಮಾರ್ಗವನ್ನು ಅನುಸರಿಸಿದ್ದರು. ಅವರು ದೇವರ ಬಗ್ಗೆ ಒಂದೆರಡು ಮಾತುಗಳನ್ನಾಡಿ, ದೇವರನ್ನು ಆಚೆಗಾಗುವ ಯತ್ನ ಮಾಡಿದ್ದರು” ಎಂದು ಉಪನ್ಯಾಸಕ ನಟರಾಜ ಬೂದಾಳು ಹೇಳಿದರು.
ಬೆಂಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ತ್ರಿಮೂರ್ತಿ ಅವರ ನೆನಪಿನಲ್ಲಿ ಜನ ಚಿಂತನ ಕೇಂದ್ರ ಟ್ರಸ್ಟ್ ಅಯೋಜಿಸಿದ್ದ ‘ಅವೈದಿಕ ದರ್ಶನಗಳ ತಾತ್ವಿಕತೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಾನು ಅಪರಿಚಿತ ಭಾರತದ ಬಗ್ಗೆ ಮಾತನಾಡುತ್ತಿದ್ದೇನೆ. ಇದು ಎಲ್ಲರಿಗೂ ಅಪರಿಚಿತವಲ್ಲ. ಕೆಲವರು ಆ ಬಗ್ಗೆ ತಿಳಿದಿದ್ದಾರೆ. ಒಂದು ಚಿತ್ರ ನಮ್ಮ ಕಣ್ಣೆದುರು ಬರುತ್ತದೆ. ಅದು ಭಾರತದ ಪೋಟ್ರೈಟ್ ಚಿತ್ರ. ಕೈಮುಗಿದು ಕುಳಿತಿರುವ ಚಕ್ರವರ್ತಿ, ಆತನನ್ನು ಮೇಲಿನಿಂದ ತುಳಿತಿರೋ ಒಬ್ಬ ದಾರಿಹೋಕನ ಚಿತ್ರವದು. ಅದು ಭಾರತದ ಭಾವಚಿತ್ರ. ನಿಲ್ಲಲು ಇಷ್ಟು ಜಾಗ ಕೇಳಿ, ಕೊಟ್ಟವನ ಮೇಲೆಯೇ ಕಾಲಿಟ್ಟು ಸಂಭ್ರಮಿಸುವ ದಾರಿಹೋಕ ಮತ್ತು ತುಳಿಸಿಕೊಳ್ಳುವವನ ಸಂಭ್ರಮ ಆ ಚಿತ್ರದಲ್ಲಿದೆ. ಅದು ನಮಗೂ ಅನ್ಮಯಿಸುತ್ತದೆ. ನಾವು ಕೈಮುಗಿದು ಕೆಳಗೆ ಕುಳಿತಿದ್ದೇವೆ. ನಮ್ಮನ್ನು ಕೆಲವರು ತುಳಿಯುತ್ತಿದ್ದಾರೆ” ಎಂದು ಹೇಳಿದರು.
“12ನೇ ಶತಮಾನದ ಕಡೆದ ದಿನಗಳ ಬಗ್ಗೆ ನಮಗೆ ಗೊತ್ತಿಲ್ಲ. ಆ ದಿನಗಳಲ್ಲಿ ಹಲವಾರು ಶರಣರನ್ನು ಕೊಲ್ಲಲಾಯಿತು. ತಲೆ ಬಗ್ಗಿಸಿ ಕುಳಿತಿದ್ದವರು. ತಲೆ ಎತ್ತಿ ನಡೆದ ಕಾರಣದಿಂದ ಅವರನ್ನು ಕೊಲ್ಲಲಾಯಿತು. ಈಗ ನಾವೆಲ್ಲ ತಲೆ ಬಗ್ಗಿಸಿ ಕುಳಿತಿದ್ದೇವೆ. ತಲೆ ಎತ್ತಬೇಕು. ಆಗ ಮತ್ತದೆ 12ನೇ ಶತಮಾನದ ಕಡೆಯ ದಿನಗಳು ಎದುರಾಗಬಹುದು ಎಂದರು.
“ವೇದ, ಉಪನಿಷತ್ತುಗಳೊಂದಿಗೆ ಒಂದು ವೈದಿಕ ಧರ್ಮ ಸುತ್ತವರೆದಿದೆ. ಇದರ ವಿರುದ್ಧವಾಗಿ ವಚನ, ಪಂಥಗಳಂತಹ ಧಾರೆಗಳು ಇವೆ. ತತ್ವಪದಗಳು ಮತ್ತು ತತ್ವಪದಕಾರರ ಧಾರಗಳೂ ಇವೆ. ಇವೆಲ್ಲವನ್ನು ಅವೈದಿಕ ಧಾರೆ ಎಂದು ಕರೆಯಲಾಗುತ್ತದೆ. ಇವುಗಳ ನಡುವೆ ಸ್ಪಷ್ಟವಾದ ಕಂದಕವಿದೆ. ಇವೆರಡರ ನಡುವೆ ತೀಕ್ಷ್ಣವಾದ ತಿಕ್ಕಾಟ ನಡೆಯುತ್ತಲೇ ಇದೆ” ಎಂದು ಹೇಳಿದರು.
“ಎಲ್ಲ ಅವೈದಿಕ ಧಾರೆಗಳು ಪ್ರಮಾಣವನ್ನು ಮಾರ್ಗ ಮಾಡುವುದಿಲ್ಲ. ವೇದ ಪ್ರಮಾಣಗಳನ್ನು ಕೆಲವು ಧಾರೆಗಳು ನಿರಾಕರಿಸಿವೆ. ಇಂದ್ರಿಯಗಳ ಮೂಲಕ ಎದುರಾಗುವ, ಅರಿವಾಗುವ ಸಂಗತಿಗಳನ್ನು ಪ್ರಮಾಣ ಎನ್ನುತ್ತೇವೆ. ಅದರಲ್ಲಿ ಪ್ರತ್ಯಕ್ಷ ಪ್ರಮಾಣ, ತರ್ಕ ಪ್ರಮಾಣ ಹಾಗೂ ಶಬ್ದ ಪ್ರಮಾಣ. ನಮ್ಮನ್ನು ಪ್ರಶ್ನಿಸದೆ ಒಪ್ಪಿಕೊ ಎನ್ನುವ ಮಾತು, ಗ್ರಂಥಗಳ ಮೂಲಕ ನಿಯಂತ್ರಿಸುವ ಹೇರಿಕೆಯನ್ನು ಶಬ್ದ ಪ್ರಮಾಣ ಎನ್ನಲಾಗುತ್ತದೆ. ನಮ್ಮನ್ನು ಈ ಶಬ್ದ ಪ್ರಮಾಣ ನಿಯಂತ್ರಿಸುತ್ತಿದೆ. ಅದೇ ರೀತಿಯಲ್ಲಿ, ಮೂರ್ನಾಲ್ಕು ಪುಸ್ತಕಗಳು ಇಂದಿಂಗೂ ಜಗತ್ತನ್ನು ನಿಯಂತ್ರಿಸುತ್ತಿವೆ. ಅಂತೆಯೇ ಭಾರತೀಯ ಜೀವನವನ್ನೂ ಎರಡು ಪುಸ್ತಕಗಳು ನಿಯಂತ್ರಿಸುತ್ತಿವೆ. ಒಂದು ಗುಡಿ ಇಡೀ ದೇಶವನ್ನೇ ನಿಯಂತ್ರಿಸುತ್ತದೆ. ಈ ಎಲ್ಲ ಪ್ರಮಾಣವನ್ನು ಬುದ್ಧ ಸೇರಿದಂತೆ ಎಲ್ಲ ಅವೈದಿಕ ಧಾರೆಗಳು ವಿರೋಧಿಸುವೆ” ಎಂದರು.
“ನಮ್ಮ ಬಹುತ್ವವನ್ನು ಯಾರು ನಿರಾಕರಿಸುತ್ತಿದ್ದಾರೆಯೋ ಅವರ ವಿಚಾರದಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು. ಬಹುತ್ವ ನಿರಾಕರಿಸುವವರು ಯಜ್ಞ, ಪೂಜೆಗಳನ್ನು ಮುಂದಿಡುತ್ತಾರೆ. ಅವೈದಿಕ ದರ್ಶನಗಳು ಬಹುತ್ವವನ್ನು ಮುಂದಿಡುತ್ತವೆ. ಶ್ರಮ, ಕಸುಬು, ಕೌಶಲದ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುತ್ತವೆ. ನಾನು ಕಾಯಕವನ್ನು ಜ್ಞಾನದ ಮಾರ್ಗವಾಗಿ ಅವೈದಿಕ ದರ್ಶನಗಳು ಮುಂದಿಡುತ್ತವೆ. ನೀನು ಏನನ್ನು ಮಾಡುತ್ತಿರುವೆಯೋ ಅದರಲ್ಲಿಯೇ ಜ್ಞಾನವಿದೆ ಎಂಬುದನ್ನು ಸೂಚಿಸುತ್ತವೆ. ಅಡುಗೆಯಲ್ಲಿ ಸಾಂಬಾರು ಮಾಡುವುದರಲ್ಲಿಯೂ ಜ್ಞಾನವಿದೆ” ಎಂದು ಹೇಳಿದರು.
“ಊಟ ಪ್ರರಬ್ರಹ್ಮನನ್ನು ಮುಟ್ಟಬೇಕು ಎಂದು ವೈದಿಕರು ಹೇಳಿದರು. ವಚನಕಾರರು ಹಸಿವನ್ನ ನೀಗಿಸಲಿಕ್ಕೆ ಉಣ್ಣಬೇಕು ಎಂದರು. ನಮಗೆ ಹಸಿವು ನೀಗಿಸುವುದು ಮುಖ್ಯವೇ ಹೊರತು, ಬ್ರಹ್ಮವನ್ನು ಮೆಚ್ಚಿಸುವುದಲ್ಲ. ನಾವು ಇಲ್ಲಿಯೇ ಬಾಳಬೇಕು. ಎಲ್ಲವೂ ಇಲ್ಲಿಯೇ ಸಂಭವಿಸಬೇಕು. ಲೋಕದಲ್ಲಿ ಯಾವುದೂ ಆಗಿ ಇರುವುದಿಲ್ಲ. ಎಲ್ಲವೂ ಆಗುತ್ತಲೇ ಇರುತ್ತವೆ ಎಂಬ ನಿಲುವನ್ನ ಅವೈದಿಕ ದರ್ಶನಗಳು ಮುಂದಿಡುತ್ತವೆ” ಎಂದು ತಿಳಿಸಿದರು.
“ವೈದಿಕ ದರ್ಶನ ದ್ವೈತ, ಅದ್ವೈತಗಳ ಮೂಲಕ ಜಗತ್ತನ್ನು ವಿವರಿಸಿದೆ. ಬಯಲು, ಶೂನ್ಯತೆ, ಲೋಕ ಸಮಸ್ತವು ಅನೇಕ ಅವಸ್ಥೆಗಳಿಂದ ಆಗಿರುವ ಸಂಯೋಜನೆ ಅಂತ ವೈದಿಕ ದರ್ಶನಗಳು ಹೇಳಿವೆ. ಬೌದ್ಧ, ವಚನ ಹಾಗೂ ತತ್ವಗಳು – ಮೂರು ಅವೈದಿಕ ದರ್ಶನಗಳು ಮುಖ್ಯವಾದವು. ಜ್ಞಾನ ಸದಾ ಬದಲಾಗುತ್ತಿರುತ್ತದೆ. ಆ ಬದಲಾವಣೆಯ ಚಲನೆಗೆ ಗುರು ಬೇಕು. ಆ ಗುರು ಕೂಡ ಚಲನಾಶೀಲನಾಗಿರಬೇಕು. ಬುದ್ಧ ಹೇಳಿದ ಪ್ರಮುಖ ಅಂಶ, ಅಕಾಲ್ಪನಿಕತೆ. ಬುದ್ಧನನ್ನು ನಾವು ಧರ್ಮ ಸಂಸ್ಥಾಪಕನ ರೀತಿ ನೋಡಿದ್ದೇವೆ. ಆತನನ್ನು ನಾವು ವಿಜ್ಞಾನಿಯಾಗಿ ನೋಡಲೇ ಇಲ್ಲ. ಆತ ಹಲವಾರು ವಿಚಾರಗಳನ್ನು ವಿವರಿಸಿ ತಿಳಿಸಿದ ವಿಜ್ಞಾನಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಕನ್ನಡದಲ್ಲಿ ಬರೆದ ಕಾರಣಕ್ಕೆ ಕುವೆಂಪುಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ: ಎಲ್ ಹನುಮಂತಯ್ಯ
“ಕಾಲ್ಪನಿಕ ಸಂಗತಿಗಳು ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿವೆ. ಜಾತಿವಾದ, ಧರ್ಮವಾದ, ದೈವವಾದಗಳು ಕಾಲ್ಪನಿಕ ಸಂಗತಿಗಳು. ಇವು ಎಂದೂ ನಮ್ಮ ಅನುಭವಕ್ಕೆ ಬರದಿರುವ ಸಂಗತಿಗಳು. ಈ ಕಾಲ್ಪನಿಕ ಸಂಗತಿಗಳೇ ನಮ್ಮನ್ನು ನಿಯಂತ್ರಿಸುತ್ತಿವೆ. ಅವುಗಳನ್ನು ಬುದ್ಧ ನಿರಾಕರಿಸಿದ. ದೇವರು ಇದ್ದಾನೋ ಇಲ್ಲವೋ ಎಂಬ ಸಂಗತಿಗೆ ಬುದ್ಧ ಪ್ರತಿಕ್ರಿಯಿಸಲಿಲ್ಲ. ನಿರಾಕರಿಸಿ ಮುಂದೆ ನಡೆದ. ಕಾಲ್ಪನಿಕ ಸಂಗತಿಗಳನ್ನು ಸಾವಿರಾರು ವರ್ಷಗಳಿಂದ ನಂಬಿಬಂದಿದ್ದೇವೆ ಎಂಬ ಕಾರಣಕ್ಕೆ ಅದನ್ನು ನಂಬಲೇಬೇಕು. ಪಾಲಿಸಲೇಬೇಕು ಎಂದಿಲ್ಲ. ಆ ಕಾಲ್ಪನಿಕ ಸಂಗತಿಗಳನ್ನು ಸರಿಸಿ, ವೈಚಾರಿಕವಾಗಿ ನೋಡಿದರೆ ವಿಜ್ಞಾನ ಅರಿವಿಗೆ ಬರುತ್ತದೆ” ಎಂದರು.
“ಪ್ರಮಾಣ ನಿರಾಕರಣೆಯು ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡ ಎಂದು ಹೇಳುತ್ತದೆ. ‘ಕಾಲ್ಪನಿಕ ಸಂಗತಿಗಳನ್ನು ಪ್ರಶ್ನಿಸಲೂ ಬಾರದು. ಒಪ್ಪಲೂಬಾರದು. ಅವುಗಳನ್ನು ನಿರಾಕರಿಸಬೇಕು’ ಎಂದು ಬುದ್ಧ ಹೇಳಿದ್ದ. ಅನಿತ್ಯ, ಅನಾತ್ಮ ಮತ್ತು ದುಖಃ ಎಂಬ ಮೂರು ಅಂಶಗಳ ಮೂಲಕ ಬುದ್ಧ ಜಗತ್ತನ್ನು ಅರ್ಥೈಸಿದ್ದಾನೆ. ಬದಲಾಗದ ಲೋಕ ಸಂಗತಿ ಎಂಬುದು ಯಾವುದೂ ಇಲ್ಲ. ಎಲ್ಲವೂ ಬದಲಾಗುತ್ತಲೇ ಇರುತ್ತದೆ ಎಂಬುದನ್ನು ಆಗಲೇ ಬುದ್ಧ ತನ್ನದೇ ಕ್ರಮದಲ್ಲಿ ಹೇಳಿದ್ದ. ಆಸೆಯೇ ದುಖಃಕ್ಕೆ ಮೂಲ ಎಂದು ಬುದ್ಧ ಹೇಳಿದ್ದ ಎಂಬುದು ದೊಡ್ಡ ಸುಳ್ಳು. ಬುದ್ಧ ಹೇಳಿದ್ದು ‘ಇದೇ ಬೇಕು. ಇದು ಬೇಡವೇ ಬೇಡ’ ಎಂಬುದು ಸರಿಯಲ್ಲ. ಈ ಲೋಕದ ಸಮಸ್ಥವವೂ ಬದಾಲಾಗುತ್ತದೆ. ಈ ತಲ್ಲಣವನ್ನು ಒಪ್ಪಿಕೊಳ್ಳದೇ ಇರುವುದೇ ದುಖಃವೆಂದು ಬುದ್ಧ ಹೇಳಿದ್ದ” ಎಂದು ತಿಳಿಸಿದರು.
“ತತ್ವಪದಗಳು ಭಾರತ ಮತ್ತು ಕನ್ನಡ ಸಾಹಿತ್ಯದ ವಿಸ್ತಾರವಾದ ಭಾಗ. ತತ್ವಪಗಳು ಈಗಲೂ ನಮ್ಮೊಳಗೆ ಅವರಿಸಿವೆ. ಆದರೆ, ಈ ಕಾವ್ಯಗಳನ್ನು ಹೊರಗಿಟ್ಟು ಬದುಕುತ್ತಿದ್ದೇವೆ. ತತ್ವಪದಗಳು ನಿನ್ನನ್ನ ನೀನು ಮೊದಲು ನೋಡಿಕೋ ಎನ್ನುತ್ತವೆ. ನಾವು ಮೊದಲು ನಮ್ಮ ಅಂತರಾಳವನ್ನು ನೋಡಿಕೊಳ್ಳಬೇಕು. ನಾವು ಎಲ್ಲರೊಂದಿಗೂ ಮಾತನಾಡುತ್ತೇವೆ. ಎಲ್ಲರ ಬಗ್ಗೆಯೂ ಮಾತನಾಡುತ್ತೇವೆ. ನಾವು ನಮ್ಮೊಂದಿಗೆ ಮಾತನಾಡಿಕೊಳ್ಳಬೇಕು. ನಮ್ಮ ಬಗ್ಗೆ ಮಾತನಾಡಬೇಕು. ನಮ್ಮನ್ನು ನಾವು ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಅರ್ಥೈಸಿಕೊಂಡರೆ, ಎದುರಿನವರು ಅರ್ಥವಾಗುತ್ತಾರೆ” ಎಂದರು.