ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ, ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 12ರಂದು ಬೆಳಿಗ್ಗೆ 10.30ಕ್ಕೆ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಸಿದ್ದಾಪುರ ತಾಲ್ಲೂಕಿನ ಕೋಡ್ಕಣಿ ಹೋಬಳಿಯ ಹಲಗೇರಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಟಿ. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇದೇ ವೇಳೆ ಕುಮಟಾ ತಾಲ್ಲೂಕಿನ ಗೋಕರ್ಣ ಹೋಬಳಿಯ ತೊರ್ಕೆ ಗ್ರಾಮದ ನಾಡವರ ಸಭಾಭವನದಲ್ಲಿ ಕುಮಟಾ-ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಹೊನ್ನಾವರ ತಾಲ್ಲೂಕಿನ ಮಂಕಿ ಹೋಬಳಿಯ ಕುಂಬಾರಕೇರಿಯ ಶ್ರೀ ಕೊಕ್ಕೇಶ್ವರ ಶಂಭುಲಿಂಗ ದೇವಸ್ಥಾನದ ಸಭಾಭವನದಲ್ಲಿ ವಿಧಾನಸಭೆಯ ಉಪಾಧ್ಯಕ್ಷರು ಹಾಗೂ ಭಟ್ಕಳ-ಹೊನ್ನಾವರ ಶಾಸಕ ಮಂಕಾಳ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ಜರುಗಲಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿಜೆ ಬಳಕೆಗೆ ಸಂಪೂರ್ಣ ನಿಷೇಧ: ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ
ಕಾರವಾರ ತಾಲ್ಲೂಕಿನ ಘಾಡಸಾಯಿ ಹೋಬಳಿಯ ಮಲ್ಲಾಪುರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ಮಾರ್ಕೆಟಿಂಗ್, ಕಮ್ಯೂನಿಕೇಶನ್ ಮತ್ತು ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷರು ಹಾಗೂ ಕಾರವಾರ-ಅಂಕೋಲಾ ಶಾಸಕ ಸತೀಶ್ ಕೃಷ್ಣ ಸೈಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಮುಂಡಗೋಡ ತಾಲ್ಲೂಕಿನ ಪಾಳಾ ಹೋಬಳಿಯ ಅಂಬೇಡ್ಕರ್ ಭವನದಲ್ಲಿ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜೋಯಿಡಾ ತಾಲ್ಲೂಕಿನ ಕುಂಬಾರವಾಡಾ ಹೋಬಳಿಯ ಕಾತೇಲಿ ಗ್ರಾಮದ ಕ್ಷೇತ್ರಪಾಲ ಸಭಾಭವನದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಳಿಯಾಳ-ದಾಂಡೇಲಿ-ಜೋಯಿಡಾ ಶಾಸಕ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಸಭೆಗಳು ನಡೆಯಲಿವೆ.
ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವುದು ‘ಪ್ರಜಾಸೇವೆ ಆಂದೋಲನ’ದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸುವ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ.






