ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ನೃತ್ಯ ಮಾಡಿದ್ದ ವಿಡಿಯೋವನ್ನು ಅಶ್ಲೀಲವಾಗಿ ತಿರುಚಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತೆ ಆಯೇಷಾ ಸನದಿ ಎಂಬವರು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಆಯೇಷಾ ಅವರು ನೃತ್ಯ ಮಾಡಿದ್ದರು. ಸರ್ಕಾರಿ ಬಸ್‌ನಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಅವರ ನೃತ್ಯ ವ್ಯಾಪಕ ಮೆಚ್ಚುಗೆ ಗಳಿಸಿತ್ತು. ಆ ವಿಡಿಯೋವನ್ನು ದುಷ್ಕರ್ಮಿಗಳು ಅಶ್ಲೀಲವಾಗಿ ತಿರುಚಿ, ಕನ್ನಡ ಸಿನಿಮಾದ ದೃಶ್ಯವನ್ನು ಸೇರಿಸಿ, ಹರಿಬಿಟ್ಟಿದ್ದಾರೆ.
ವಿಡಿಯೋ ಬೆಳಕಿಗೆ ಬಂದ ಕೂಡಲೇ ಆಯೇಷಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.