ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದಂತಹ ಅಗ್ನಿ ಅವಘಡದಿಂದ ಬುಧವಾರದ ಮಧ್ಯಾಹ್ನದವರೆಗೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಸುಮಾರು 6 ಅಗ್ನಿಶಾಮಕ ವಾಹನಗಳು ಹಾಗೂ 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳ ನಿರಂತರ ಪ್ರಯತ್ನದಿಂದ ಇದೀಗ ಒಬ್ಬ ಕಾರ್ಮಿಕನ ಶವ ಸಂಪೂರ್ಣ ಸುಟ್ಟು ಕರಕಲಾದ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೂರು ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಮಾರು 400 ಜನ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದ, ಕಾರ್ಖಾನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವದರಿಂದ 400 ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ.

ಈ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ( 20) ಅವರ ದೇಹದ ಅಂಗಾಂಗಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು.
ಮಾನವೀಯತೆ ಮರೆತ ಬೆಳಗಾವಿಯ ಅಧಿಕಾರಿಗಳು ಪ್ಲಾಸ್ಟಿಕ್ ಚೇಲದಲ್ಲಿ ಮೃತದೇಹದ ಭಾಗಗಳನ್ನು ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದ್ದಾರೆ. ಈ ದೃಶ್ಯವನ್ನು ನೋಡಿದವರ ಕರುಳು ಕಿತ್ತು ಬರುವಂತಾಗಿದೆ.

ದಾರಿಯುದ್ದಕ್ಕೂ ತಂದೆ ತನ್ನ ಕೈಯಲ್ಲಿ ಮಗನ ಸುಟ್ಟ ದೇಹದ ಅಂಗಾಂಗಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಗೆ ಮರಗುವಂತಾಗಿದೆ. ಜಿಲ್ಲಾಡಳಿತದ ಈ ಅಮಾನವೀಯ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
4 ತಿಂಗಳ ಹಿಂದೆಯಷ್ಟೇ ಯುವಕ ಫ್ಯಾಕ್ಟರಿಯಲ್ಲಿ ಹೆಲ್ಪರ್ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ಭೀಕರ ಬೆಂಕಿ ಅವಘಡ ಸಂಭವಿಸಿದೆ.
ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಓಡೋಡಿ ಬಂದ ಯಲ್ಲಪ್ಪನ ಮನೆಯವರಿಗೆ ಇಂದು ಬೆಳಿಗ್ಗೆ ಫ್ಯಾಕ್ಟರಿಯ ಲಿಫ್ಟಿನಲ್ಲಿ ಯಲ್ಲಪ್ಪ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಹೋಗಿದ್ದ ಯಲ್ಲಪ್ಪನ ಅಸ್ತಿಪಂಜರ ಮಾತ್ರ ಸಿಕ್ಕಿತು. ಮಗನ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.