ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಬಿಸಿಎಂ ವಸತಿನಿಲಯಕ್ಕೆ ಉಪತಹಶೀಲ್ದಾರ್ ಎನ್ ಬಿ ದೊರೆ, ಕಂದಾಯ ನಿರೀಕ್ಷ ವಿ ವಿ ಅಂಬಿಗೇರ ಭೇಟಿ ನೀಡಿ ನಿಲಯದ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ದಿಢೀರ್ ಭೇಟಿ ನೀಡಿದ ಅಧಿಕಾರಿಗಳು ಕಿಟ್, ತಿಂಡಿ, ಊಟ ಸ್ವಚ್ಛತೆ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡರು. ಅಡುಗೆಯವರೊಂದಿಗೆ ಚರ್ಚಿಸಿದ ಅವರು, “ನಿಲಯದ ಮಕ್ಕಳ ಸುರಕ್ಷತೆ, ಮೆನು ಪಾಲನೆ ಮಾಡಿ ಊಟ, ತಿಂಡಿ ಒದಗಿಸಬೇಕು. ಮಕ್ಕಳನ್ನು ಯಾವುದೇ ಕಾರಣಕ್ಕೂ ನಿಲಯದಿಂದ ಅನಧಿಕೃತವಾಗಿ ಹೊರಗಡೆ ಬಿಡಬೇಡಿ. ಸ್ವಚ್ಛತೆಗೆ ಆದ್ಯತೆ ನೀಡಿ” ಎಂದು ಸೂಚಿಸಿದರು.
ದೂರು ನೀಡಿದ ಮಕ್ಕಳು: “ಆವರಣದಲ್ಲಿ ನಡೆದಾಡಲೂ ಬರದಂತ ಮಳೆಗಾಲದಲ್ಲಿ ನೀರು ನುಗ್ಗುತ್ತದೆ. ಕೆಸರು ಗದ್ದೆಯಲ್ಲೇ ಅಲೆಯಬೇಕಿದೆ. ಚರಂಡಿ ಶುಚಿಗೊಳಿಸಲು ಮುಂದಾಗುತ್ತಿಲ್ಲ” ಎಂದು ಮಕ್ಕಳು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು, “ಶೀಘ್ರ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದು ಶುಚಿಗೊಳಿಸಲು ತಿಳಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ-ಬಬಲೇಶ್ವರ ಆ.27ರಿಂದ ಎರಡು ಬಸ್ಸುಗಳ ಸೇವೆ ಪ್ರಾರಂಭ
ದಲಿತ ಮುಖಂಡ ಗುಂಡಪ್ಪ ಚಲವಾದಿ ಮಾತನಾಡಿ, “ವಸತಿ ನಿಲಯದ ವಿದ್ಯಾರ್ಥಿಗಳು ತಂದೆ ತಾಯಿಯನ್ನು ಬಿಟ್ಟು, ಓದಲು ಬಂದಿರುತ್ತಾರೆ. ಆದರೆ ವಸತಿ ನಿಲಯದಲ್ಲಿ ಅವರ ಮೂಲಭೂತ ಸಮಸ್ಯೆಗಳ ಆಗರವಾಗಿರುವುದರಿಂದ ಎಷ್ಟೋ ವಿದ್ಯಾರ್ಥಿಗಳು ವಸತಿನಿಲಯ ಬಿಟ್ಟು ಹೋಗಿದ್ದಾರೆ” ಎಂದು ಅಧಿಕಾರಿಗಳ ಗಮನ ಸೆಳೆದರು.
ಈ ವೇಳೆ ವಸತಿನಿಲಯದ ಸಿಬ್ಬಂದಿಗಳಾದ ಶರಣಮ್ಮ ಹುಗ್ಗಿ, ಲಕ್ಕಣ್ಣ ಬಿರಾದಾರ ಹಾಗೂ ಶಿವಪ್ಪ ದೊಡಮನಿ ಇದ್ದರು.