ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಸಕಾಲಕ್ಕೆ ಬಾರದಕ್ಕೆ ರೈತರು ಸರ್ಕಾರದ ವಿವಿಧ ಯೋಜನೆಗಳು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸರ್ಕಾರ ವಿವಿಧ ಯೋಜನೆಗಳನ್ನು ರೈತರಿಗೆ ಸಮಪರ್ಕವಾಗಿ ಒದಗಿಸುವ ಉದ್ದೇಶಕ್ಕಾಗಿ ಇರುವ ರೈತ ಸಂಪರ್ಕ ಕೇಂದ್ರ ಅಧಿಕಾರಿ, ಸಿಬ್ಬಂದಿಗಳ ಹೆಚ್ಚಿನ ಗೈರಾದ ಕಾರಣಕ್ಕೆ ಸೊರಗುತ್ತಿದ್ದು, ಇದರಿಂದ ಬಿತ್ತನೆ ಬೀಜ, ತಾಡಪತ್ರಿ, ರಾಸಾಯನಿಕ ಔಷಧಿ ಸೇರಿ ಇತರ ಕೃಷಿ ಸಲಕರಣೆಗಳು ಸಕಾಲಕ್ಕೆ ಸಿಗದೇ ರೈತರು ಕಂಗಾಲಾಗಿ ಕೃಷಿ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಹಾಲಾಪುರ ಗ್ರಾಮದ ರೈತ ಗಂಗಪ್ಪ ತೋಳದಿನ್ನಿ ಈದಿನ.ಕಾಮ್ ಜೊತೆ ಮಾತನಾಡಿ, ʼರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಕಚೇರಿ ಬರುವುದೇ ಅಪರೂಪ, ಒಮ್ಮೊಮ್ಮೆ ಬೆಳಿಗ್ಗೆ 11 ಗಂಟೆಯಾದರೂ ಕಚೇರಿ ತೆರೆಯುವುದಿಲ್ಲ. ಹೀಗಾಗಿ ವಿವಿಧ ಕೆಲಸ ಕಾರ್ಯಗಳಿಗೆ ದೂರದ ಗ್ರಾಮಗಳಿಂದ ಆಗಮಿಸುವ ರೈತರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಸರ್ಕಾರದ ಸೌಲಭ್ಯದ ನಿರೀಕ್ಷೆಯಲ್ಲಿರುವ ರೈತರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಂಚಿತರಾಗುತ್ತಿದ್ದಾರೆ. ಕೇಂದ್ರ ತೆರೆಯದ ಕಾರಣ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ಕೊಟ್ಟು ಬೇಜವ್ದಾರಿ ತೋರುತ್ತಾರೆʼ ಎಂದರು.
ಈ ಸುದ್ದಿ ಓದಿದ್ದೀರಾ? ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ, ಸಂಪೂರ್ಣ ಸಮಿತಿ ವಿಸರ್ಜನೆ
ಈ ಸಂಬಂಧ ಈದಿನ.ಕಾಮ್ ಮಾನ್ವಿ ತಾಲೂಕು ಕೃಷಿ ಅಧಿಕಾರಿ ಎಡಿಎ ಹುಸೇನ್ ಸಾಹೇಬ್ ಅವರನ್ನು ವಿಚಾರಿಸಿದರೆ, ʼಹಾಲಾಪುರ ರೈತ ಸಂಪರ್ಕ ಕೇಂದ್ರ ಬಂದ್ ಆಗಿರುವುದು, ಅಧಿಕಾರಿಗಳು ಗೈರಾಗುವ ಬಗ್ಗೆ ನನ್ನ ಗಮನಕ್ಕೆ ಇಲ್ಲ. ಈ ಕುರಿತು ವಿಚಾರಿಸಿ ಮುಂದಿನ ಕ್ರಮಕೈಗೊಳ್ಳುವೆʼ ಎಂದು ಹೇಳಿದರು .