ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಲಕ್ಷ್ಮೀಬಾಯಿ ಮಹಾಪುರೆ ಎಂಬ 110 ವರ್ಷದ ಅಜ್ಜಿಗೆ ಕೊನೆಗೂ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಪಿಂಚಣಿ ಯೋಜನೆಯಡಿ ಮಾಸಿಕ ಪಿಂಚಣಿ ಮಂಜೂರಾಗಿದೆ.
ಲಕ್ಷ್ಮೀಬಾಯಿ ಅಜ್ಜಿಗೆ ಸುಮಾರು 10 ವರ್ಷಗಳಿಂದ ವೃದ್ದಾಪ್ಯ ವೇತನ ಸ್ಥಗಿತವಾಗಿತ್ತು. ಆಧಾರ್ ಕಾರ್ಡ್ ದೇಶದಲ್ಲಿ ಜಾರಿಗೆ ಬರುವುದಕ್ಕೂ ಮುಂಚೆಯಿಂದ ವೃದ್ದಾಪ್ಯ ವೇತನ ಪಡೆಯುತ್ತಿದ್ದ ಅಜ್ಜಿಗೆ, ನೂರು ವರ್ಷ ಪೂರೈಸಿದ ನಂತರ ಅಧಿಕಾರಿಗಳು ವೇತನಕ್ಕೆ ಕತ್ತರಿ ಹಾಕಿದ್ದರು.
ಅಜ್ಜಿಗೆ 110 ವರ್ಷ ವಯಸ್ಸಾದರೂ ಅವರ ಹೆಸರಿಗೆ ಚುನಾವಣೆ ಮತದಾರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಬದುಕಿಗೆ ಯಾವುದೇ ದಾಖಲೆಗಳಿಲ್ಲದೇ, ಸಂಕಷ್ಟದಿಂದ ದಿನ ದೂಡುತ್ತಿದ್ದರು.
ಈ ಬಗ್ಗೆ ಮಾಹಿತಿ ಅರಿತುಕೊಂಡ ʼಈ ದಿನ. ಕಾಮ್ʼ ನಲ್ಲಿ 2024ರ ಜನವರಿ 5ರಂದು ʼಶತಾಯುಷಿ ಅಜ್ಜಿಗೆ ಶಾಪವಾಯ್ತು ವಯಸ್ಸು?; ವೃದ್ದಾಪ್ಯ ವೇತನಕ್ಕೆ ಅಧಿಕಾರಿಗಳ ಕತ್ತರಿʼ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟವಾಗಿತ್ತು. ಅಲ್ಲದೇ, ವಿಡಿಯೋ ವರದಿ ಕೂಡ ಯೂಟ್ಯೂಬ್‌ನಲ್ಲಿ ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ಭಾಲ್ಕಿ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಮರುದಿನವೇ (ಜ.6) ರಂದು ಕಪಲಾಪುರ ಗ್ರಾಮದ ಇಳಿವಯಸ್ಸಿನ ಲಕ್ಷ್ಮೀಬಾಯಿ ಅವರ ಮನೆಗೆ ದೌಡಾಯಿಸಿ, ಅಜ್ಜಿಯ ಬದುಕಿಗೆ ಯಾವುದೇ ದಾಖಲೆ ಇಲ್ಲ ಎಂಬುದು ಪರಿಶೀಲನೆ ಮೂಲಕ ಖಚಿತಪಡಿಸಿಕೊಂಡು ಹೊಸ ದಾಖಲೆ ಮಾಡಿಕೊಡಲು ನೋಂದಾಯಿಸಿಕೊಂಡಿದ್ದರು. ಆನಂತರ ಆಧಾರ್, ಮತದಾರರ ಚೀಟಿ, ಬ್ಯಾಂಕ್ ಪಾಸ್ ಬುಕ್ ಮಾಡಿಸಲು ಕುಟುಂಬಸ್ಥರಿಗೆ ಅಧಿಕಾರಿಗಳು ಸಹಕರಿಸಿ ಕೊನೆಗೆ ಫೆ.26 ರಂದು ವೃದ್ದಾಪ್ಯ ವೇತನ ಮಂಜೂರು ಮಾಡಿದರು.

ಲಕ್ಷ್ಮೀಬಾಯಿ ಅಜ್ಜಿಗೆ ಚುನಾವಣೆ ಚೀಟಿ ಇಲ್ಲದ ಕಾರಣ ಕಳೆದ 10-15 ವರ್ಷಗಳಿಂದ ಮತದಾನವೇ ಮಾಡಿರಲಿಲ್ಲ. ʼಈ ದಿನ.ಕಾಮ್ʼ ವರದಿಯ ಪರಿಣಾಮ ಹೊಸ ಮತದಾರರ ಗುರುತಿನ ಚೀಟಿ ಬಂದಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಜ್ಜಿ ಗ್ರಾಮದ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಇದೀಗ ಜುಲೈ 12ರಂದು ಅಂಚೆ ಕಚೇರಿಯಲ್ಲಿರುವ ಲಕ್ಷ್ಮಿಬಾಯಿ ಅವರ ಖಾತೆಗೆ ವೃದ್ದಾಪ್ಯ ವೇತನದ ಒಂದು ತಿಂಗಳ ಹಣ ವರ್ಗಾವಣೆ ಆಗಿದೆ.
ʼನಮ್ಮ ಅಜ್ಜಿಗೆ ನೂರು ವಯಸ್ಸು ದಾಟಿದೆ, ಆದರೆ ಯಾವುದೇ ದಾಖಲೆ ಇಲ್ಲ, ವೃದ್ದಾಪ್ಯ ವೇತನ ಕೂಡ ಬಂದ್ ಆಗಿರುವ ಬಗ್ಗೆ ಈ ದಿನ.ಕಾಮ್ ಬೀದರ್ ಜಿಲ್ಲಾ ವರದಿಗಾರ ಬಾಲಾಜಿ ಕುಂಬಾರ್ ಅವರಿಗೆ ಕರೆ ಮೂಲಕ ಮಾಹಿತಿ ನೀಡಿದ್ದೆ. ಅವರು ಖುದ್ದು ಮನೆಗೆ ಭೇಟಿ ವಿಶೇಷ ಸುದ್ದಿ ಪ್ರಕಟಿಸಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರುʼ ಎಂದು ಅಜ್ಜಿಯ ಮೊಮ್ಮಗ ಅಂಬಾದಾಸ ಮಹಾಪುರೆ ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಶತಾಯುಷಿ ಅಜ್ಜಿಗೆ ಶಾಪವಾಯ್ತ ವಯಸ್ಸು?; ವೃದ್ದಾಪ್ಯ ವೇತನಕ್ಕೆ ಅಧಿಕಾರಿಗಳ ಕತ್ತರಿ
ಸುದ್ದಿ ಪ್ರಕಟವಾದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಎಲ್ಲ ದಾಖಲೆ ಮಾಡಿಸಿ ವೃದ್ದಾಪ್ಯ ವೇತನ ಮತ್ತೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಅಜ್ಜಿಗೆ ಮೊದಲ ಕಂತಿನ ಹಣ ಬಂದಿದೆ. ಇದರಿಂದ ಅಜ್ಜಿ ಹಾಗೂ ನಮಗೂ ತುಂಬಾ ಖುಷಿಯಾಗಿದೆ. ಇದಕ್ಕೆ ನಿರಂತರವಾಗಿ ನಮ್ಮೊಂದಿಗೆ ಸ್ಪಂದಿಸಿ ಈ ದಿನ.ಕಾಮ್ ಮಾಧ್ಯಮ ತಂಡ ಹಾಗೂ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ತುಂಬಾ ಖುಷಿ ಕೊಡುವ ವಿಡಿಯೊ.ಅಜ್ಜಿಯ ಗಟ್ಟಿಗತನ ಹಾಗು ಬೀದರ್ ನುಡಿಯ ಸೌಂಧರ್ಯ ಬಹಳ ಖುಷಿ ಕೊಟ್ಟಿತ್ತು.ಅಜ್ಜಿ ೧೫೦ ವರ್ಷ ದಾಟುವವರೆಗೆ ಬದುಕಲಿ.