ಸ್ವಾಮಿನಿಷ್ಠೆ ಮತ್ತು ತ್ಯಾಗದ ಪ್ರತೀಕವೇ ಒನಕೆ ಓಬವ್ವ. ಚಿತ್ರದುರ್ಗ ಕೋಟೆಯನ್ನು ಶತ್ರು ಸೈನ್ಯದಿಂದ ಸಂರಕ್ಷಣೆ ಮಾಡುವ ಮೂಲಕ ಧೈರ್ಯ, ಶೌರ್ಯ ಮೆರೆದಿದ್ದಾರೆ. ಒನಕೆ ಓಬವ್ವ ಎಲ್ಲರಿಗೂ ಆದರ್ಶ ಎಂದು ಬಾಗೇಪಲ್ಲಿ ತಹಶೀಲ್ದಾರ್ ಮನೀಶಾ ಮಹೇಶ್ ಪತ್ರಿ ಹೇಳಿದರು.
ಬಾಗೇಪಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ ತನ್ನ ಮನೆಯಲ್ಲಿ ಆಹಾರ ತಯಾರಿಗೆ ಬಳಸುವಂತಹ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚೆಂಡಾಡಿ, ಕೋಟೆಯನ್ನು ರಕ್ಷಿಸಿದ ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಎಂದರು.
ಛಲವಾದಿ ಸಮುದಾಯದ ಮುಖಂಡ ಟಿ.ರಾಮಪ್ಪ ಮಾತನಾಡಿ, ಸಮಾಜದಲ್ಲಿ ಛಲವಾದಿ ಸಮುದಾಯಕ್ಕೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿನ ಛಲವಾದಿ ಸಮುದಾಯ ಒಗ್ಗೂಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ, ಬಿಇಓ ಎನ್.ವೆಂಕಟೇಶಪ್ಪ, ಪುರಸಭೆ ಮುಖ್ಯಾಧಿಕಾರಿಗಳಾದ ಶ್ರೀನಿವಾಸ್, ಬಿಳ್ಳೂರು ನಾಗರಾಜು, ಸಾಕ್ಷರತೆ ಇಲಾಖೆ ಶಿವಪ್ಪ, ಛಲವಾದಿ ಸಮುದಾಯದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.