ಬೀದರ್ ನಗರದ ನಯಾಕಮಾನ್ ಬಳಿ ಮೇ 4ರಂದು ಅಪಹರಣಕ್ಕೊಳಗಾದ ಒಂದೂವರೆ ವರ್ಷದ ಮಗುವನ್ನು ಬೀದರ್ ಪೊಲೀಸರು ಮೂರು ದಿನದಲ್ಲಿಯೇ ಪತ್ತೆ ಹಚ್ಚುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ನಗರದ ಓಲ್ಡ್ ಸಿಟಿಯ ನಯಾಕಮಾನ್ ಬಳಿ ಉತ್ತರ ಪ್ರದೇಶ ಮೂಲದ ದಂಪತಿ ಕೆಲಸದ ಮಾಡುವ ಸ್ಥಳದ ಸಮೀಪ ಮಗು ಆಟವಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಅಪಹರಿಸಿದ್ದರು. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಕುರಿತು ಬೀದರ್ ನಗರ ಪೊಲೀಸ್ ಠಾಣೆಯಲ್ಲಿ ಮೇ 4ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್.ಪಿ. ಚನ್ನಬಸವಣ್ಣ ಎಸ್.ಎಲ್, ಡಿವೈಎಸ್ಪಿ ನೇತ್ರತ್ವದ ತಂಡ ಮಗುವಿನ ಪತ್ತೆಗಾಗಿ 30 ಜನರ ಪೋಲೀಸ್ ತಂಡ ರಚಿಸಿದ್ದರು.
ಸತತ ತನಿಖೆ ನಡೆಸಿದ ಪೊಲೀಸರು ಮಹಿಳೆ ಹಾಗೂ ಮಗುವನ್ನು ಹೈದರಾಬಾದ್ ಸಮೀಪದ ಪಟನಚೂರ್ ಬಳಿ ಪತ್ತೆ ಹಚ್ಚಿದ್ದಾರೆ. ಹೈದರಾಬಾದ್ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಹಿಳೆಯನ್ನು ಬೀದರ್‌ಗೆ ಕರೆ ತರಲಾಗಿದೆ, ಮಗು ಅಪಹರಣದ ಹಿಂದಿನ ಉದ್ದೇಶ ಬಗ್ಗೆ ತನಿಖೆ ಮುಂದುವರೆಯುತ್ತದೆ ಎಂದು ಎಸ್.ಪಿ. ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ಅಂಬೇಡ್ಕರ್ ಹೆಸರಿನಲ್ಲಿ ಚುನಾವಣಾ ವ್ಯಾಪಾರ ಮಾಡುತ್ತಿದ್ದಾರಾ ಮೋದಿ?
ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಅಪಹರಣಕ್ಕೊಳಗಾದ ಒಂದೂವರೆ ವರ್ಷ ವಯಸ್ಸಿನ ಅರವಿಂದ ಎಂಬ ಮಗುವನ್ನು ಸುರಕ್ಷಿತವಾಗಿ ತಾಯಿ ಮಡಿಲಿಗೆ ಹಸ್ತಾಂತರಿಸಿದ್ದರು.