ತುಮಕೂರು ಜಿಲ್ಲೆಗೆ ನೀರು ಒಗಿಸುತ್ತಿರುವ ಹೇಮಾವತಿ ಎಡದಂಡೆ ನಾಲೆಗೆ ಲಿಂಕ್ ಕೆನಾಲ್ ನಿರ್ಮಿಸಿ ಮಾಗಡಿಗೆ ನೀರು ಹರಿಸುವ ಯೋಜನೆಗೆ ತುಮಕೂರು ಜಿಲ್ಲೆಯ ಜನರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ, ಜೂನ್ 25ರಂದು ತುಮಕೂರು ಜಿಲ್ಲೆ ಬಂದ್‌ಗೆ ಕರೆಕೊಡಲಾಗಿದ್ದು, ಹಲವಾರು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಪಕ್ಷಾತೀತವಾಗಿ ಎಲ್ಲ ಪಕ್ಷ, ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಜೂನ್ 25 ರಂದು ಬೆಳಿಗ್ಗೆ 7ರಿಂದ ಸಂಜೆ 7 ರವರೆಗೆ ಸಂಪೂರ್ಣ ಬಂದ್ ಇರಲಿದ್ದು, ಬಂದ್‌ನ ಯಶಸ್ವಿಗಾಗಿ ಪ್ರಚಾರ, ಜನಾಭಿಪ್ರಾಯ, ಪಂಚಾಯತಿ ಮಟ್ಟದಿಂದ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆಗಳನ್ನು ನಡೆಸಬೇಕು ಎಂದು ತೀರ್ಮಾನಿಸಿದ್ದಾರೆ.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, “ರಾಜಕೀಯ ಹಿನ್ನಲೆ ಇಲ್ಲದ ಈ ಹೋರಾಟ ನೀರಿಗಾಗಿ ನಮ್ಮ ಹಕ್ಕು ಪಡೆಯುವುದಾಗಿದೆ. ಅಕ್ರಮವಾಗಿ ನಮ್ಮ ಹೇಮಾವತಿ ನೀರು ಮಾಗಡಿಯತ್ತ ಹರಿಸುವ ಲಿಂಕ್ ಕೆನಾಲ್ ಯೋಜನೆ ವಿರುದ್ಧ ನಿರಂತರ ಹೋರಾಟ ಅನಿವಾರ್ಯ. ಕಾಂಗ್ರೆಸ್ ಮುಖಂಡರಿಗೆ ಈ ಯೋಜನೆ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಗುಬ್ಬಿ ಶಾಸಕರು ನಮ್ಮ ಹೋರಾಟ ಹೋರಾಟವೇ ಅಲ್ಲ. ನಾನೇ ಬೇರೆ ಹೋರಾಟ ಮಾಡುತ್ತೇನೆ ಎಂದಿದ್ದರು. ಹೋರಾಟಕ್ಕೆ ಮುಂದಾದ ಶಾಸಕರನ್ನು ಮೊದಲಿಸಿದ್ದರು. ಈಗ ಯಾವುದೇ ಮಾತಿಲ್ಲ. ಹೇಮಾವತಿ ಉಳಿಸುವ ಚಿಂತನೆ ಮಾಡಿಲ್ಲ” ಎಂದು ಟೀಕಿಸಿದರು.
ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, “ಗುಬ್ಬಿ ತಾಲೂಕಿಗೆ ಅತೀ ಹೆಚ್ಚು ನಷ್ಟ ಉಂಟಾಗುವ ಈ ಲಿಂಕ್ ಕೆನಾಲ್ ಯೋಜನೆ ನಮ್ಮ ನೀರು ಪೂರ್ತಿ ತೆಗೆದುಕೊಂಡು ಹೋಗುವ ಹುನ್ನಾರವಾಗಿದೆ. ಪೈಪ್ ಅಳವಡಿಸುವಲ್ಲಿ ಆರಂಭದಲ್ಲಿ ಎರಡು ಅಡಿ ಆಳದಲ್ಲಿ ಆರಂಭಿಸಿ ಅಂತಿಮವಾಗಿ ಹದಿನೈದು ಅಡಿ ಹಳ್ಳದಲ್ಲಿ ನೀರು ಹರಿಸುತ್ತಾರೆ. 12 ಅಡಿ ವ್ಯಾಸದ ಪೈಪ್ ನಲ್ಲಿ ಮೂರು ತಿಂಗಳಲ್ಲಿ 11 ಟಿಎಂಸಿ ನೀರು ಹರಿಯುತ್ತದೆ ಎಂದ ಅವರು ಕೃಷಿ ತೊರೆದು ಗುಳೆ ಹೋಗುವ ಕಾಲ ಸನ್ನಿಹಿತವಾಗಿದೆ. ಈಗಲೇ ಎಚ್ಚೆತ್ತು ಹೋರಾಟಕ್ಕೆ ಕೈ ಜೋಡಿಸಿ, 25 ರಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ಬಂದ್ ಮಾಡಿ ಗುಬ್ಬಿಗೆ ಬನ್ನಿ” ಎಂದು ಕರೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, “ಸರ್ಕಾರಕ್ಕೆ ಚುರುಕು ಮುಟ್ಟಿಸುವ ಹಂತಕ್ಕೆ ಹೋರಾಟ ತಲುಪಬೇಕು. ಪಕ್ಷಾತೀತ ಹೋರಾಟವಾಗಿಸಿ ನೀರಿಗಾಗಿ ಬಂದ್ ಯಶಸ್ವಿ ಮಾಡಬೇಕು. ಈಗಾಗಲೇ ಅಂತರ್ಜಲ ಕ್ಷೀಣಿಸುತ್ತಿದೆ. ಇರುವ ಹೇಮಾವತಿ ಕಳೆದುಕೊಂಡರೆ ರೈತರ ಬದುಕು ಬೀದಿಗೆ ಬೀಳುತ್ತದೆ. ಈ ನಿಟ್ಟಿನಲ್ಲಿ ಈಗಲೇ ಬೀದಿಗಿಳಿದು ಹೋರಾಟ ನಡೆಸಬೇಕು” ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ, “ಸಾಮೂಹಿಕ ನಾಯಕತ್ವದಲ್ಲಿ ನಡೆಯುವ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಲಿದೆ. ಈ ಹೋರಾಟ ಮೊದಲು ನಿರೀಕ್ಷೆ ಮೀರಿ ನಡೆದಿತ್ತು. ಎರಡನೇ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಆದರೂ ತಾಲ್ಲೂಕು ಕೇಂದ್ರದಲ್ಲಿ ತಂಡೋಪತಂಡ ಧರಣಿ ನಡೆಸಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಜಿಲ್ಲಾಡಳಿತ ತಾತ್ಕಾಲಿಕ ತಡೆ ನೀಡಿದೆ. ಆದರೆ ಮತ್ತೇ ಕೆಲಸ ಆರಂಭಿಸುವ ಮುನ್ನ ಸರ್ಕಾರಕ್ಕೆ ಬಂದ್ ಮೂಲಕ ಚಾಟಿ ಬೀಸಬೇಕಿದೆ” ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ, “ಪೊಲೀಸರನ್ನು ಛೂ ಬಿಟ್ಟು ಹೋರಾಟ ಹತ್ತಿಕ್ಕುವ ಸರ್ಕಾರದ ಧೋರಣೆ ಸರಿಯಿಲ್ಲ. ಸುಮ್ಮನೆ ಇರದೇ ಇರುವೆ ಬಿಟ್ಟು ಕೊಂಡ ಕೆಲಸ ಮಾಡಿದ ಸರ್ಕಾರಕ್ಕೆ ಬಂದ್ ಮೂಲಕ ಬಿಸಿ ಮುಟ್ಟಿಸೋಣ. ತುರ್ತು ಸೇವೆ ಹೊರತು ಎಲ್ಲಾ ಸೇವೆ ಬಂದ್ ಮಾಡುವ ಹೋರಾಟ 25 ರಂದು ನಡೆಯಲಿದೆ. ನಮ್ಮ ರೈತ ಸಂಘ ಸಂಪೂರ್ಣ ಬೆಂಬಲವಿದೆ” ಎಂದರು.
ಸಭೆಯಲ್ಲಿ ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಯೋಗಾನಂದಕುಮಾರ್, ಜಿ.ಆರ್.ಶಿವಕುಮಾರ್, ಜಿ.ಸಿ.ಕೃಷ್ಣಮೂರ್ತಿ, ನಂಜೇಗೌಡ, ಸಿ.ಆರ್.ಶಂಕರ್ ಕುಮಾರ್, ಜಿ.ಆರ್.ರಮೇಶ್, ಬಿ.ಲೋಕೇಶ್, ದಯಾನಂದಮೂರ್ತಿ, ಕಾಂತರಾಜ್, ಚಂದ್ರಶೇಖರ್, ಚಿಕ್ಕವೀರಯ್ಯ, ಜಿ.ಡಿ.ಸುರೇಶ್ ಗೌಡ, ಹಿತೇಶ್, ಹಾರನಹಳ್ಳಿ ಪ್ರಭಣ್ಣ, ಯಲ್ಲಪ್ಪ, ಗಂಗಾರಾಂ ಸೇರಿದಂತೆ ರೈತ ಸಂಘ, ವರ್ತಕರ ಸಂಘ, ಧಾನ್ಯ ಮಾರಾಟಗಾರರ ಸಂಘ, ನಿವೃತ್ತ ಸೈನಿಕರ ಸಂಘ, ಚಿನ್ನಬೆಳ್ಳೆ ಮಾರಾಟಗಾರರ ಸಂಘ, ಪ್ರಾಂತ ರೈತ ಸಂಘ, ದಲಿತ ಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದವು.