ಜ.22ರಂದು ಅಯೋಧ್ಯೆಯಲ್ಲಿ ನಡೆಸಲಾಗುತ್ತಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವಿರೋಧಿಸಿ ಅದೇ ದಿನ ಬೆಳಗ್ಗೆ 11.30ಕ್ಕೆ ಕಲಬುರಗಿಯ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಶೂದ್ರ ಸಮುದಾಯದ ಮಹರ್ಷಿ ಶಂಬೂಕ ಮುನಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಡಿ.ಎಸ್.ಎಸ್ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
ಕಲಬುರಗಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ರಾಮ ಮಂದಿರ ನಿರ್ಮಾಣ ಹಾಗೂ ಶ್ರೀರಾಮನ ಹೆಸರಿನಲ್ಲಿ ದೇಶಾದ್ಯಂತ ಬಿಜೆಪಿ ಮತ್ತು ಆರ್.ಎಸ್.ಎಸ್ ನಡೆಸುತ್ತಿರುವ ರಾಜಕಾರಣ ವರ್ಣಾಶ್ರಮ ವ್ಯವಸ್ಥೆ ಗಟ್ಟಿಗೊಳಿಸುವ ಸಂಚಾಗಿದೆ. ರಾಮಾಯಣದಲ್ಲಿ ಶೂದ್ರ ಶಂಬೂಕನ ಹತ್ಯೆಗೈದು ಆತನ ರಕ್ತ ಕುಡಿದು ಸಂಭ್ರಮಿಸಿದ ಘಟನೆಯ ಪ್ರಸ್ತಾಪವಿದೆ. ಈ ವಿದ್ಯಮಾನವು ವರ್ಣಾಶ್ರಮ ವ್ಯವಸ್ಥೆಯಲ್ಲಿ ದಲಿತರು ಸೇರಿದಂತೆ ಶೂದ್ರರಿಗೆ ಬದುಕುವ ಹಕ್ಕಿಲ್ಲ ಎಂಬುದು ಸಾಬೀತುಪಡಿಸುವಂತಿದೆ” ಎಂದರು.
“75 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಪ್ರಖರ ವಿಚಾರವಾದಿ ಪೆರಿಯಾರ್ ಅವರು ರಾಮಾಯಣ ವಿರೋಧಿ ಚಳವಳಿ ನಡೆಸಿದ್ದು ಇಂದಿಗೂ ಪ್ರಸ್ತುತ ಎನಿಸುವಂತಿದೆ. ಪೆರಿಯಾರ್ ಹೋರಾಟವನ್ನು ಮುಂದುವರೆಸುವ ಜವಾಬ್ದಾರಿಯಾಗಿ ಜ.22ರಂದು ಮಹರ್ಷಿ ಶಂಬೂಕರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
“ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆದಿವಾಸಿ ಜನಾಂಗಕ್ಕೆ ಸೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಬಿಜೆಪಿ ತನ್ನ ವರ್ಣಾಶ್ರಮ ವ್ಯವಸ್ಥೆಯ ಮೇಲಿನ ಪ್ರೀತಿ ಸಾಬೀತುಪಡಿಸುತ್ತಿದೆ. ರಾಮ ಮಂದಿರ ನಿರ್ಮಾಣ ಕಾರ್ಯ ಅಪೂರ್ಣವಾಗಿದ್ದರೂ ತುರ್ತಾಗಿ ಮಂದಿರ ಉದ್ಘಾಟಿಸಲಾಗುತ್ತಿದೆ. ಇಂತಹ ಅಪಕೃತ್ಯ ಮಾಡದಂತೆ ದೇಶದ ನಾಲ್ಕು ಶಂಕರಾಚಾರ್ಯರ ಪೀಠಗಳು ಎಚ್ಚರಿಕೆ ನೀಡಿದ್ದೂ ಅಲ್ಲದೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಿರುವುದು ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳಿಗೆ ಕನ್ನಡಿ ಹಿಡಿದಂತಿದೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಅನಂತಕುಮಾರ್ ಹೆಗಡೆ ಹುಚ್ಚ, ವಿಜಯೇಂದ್ರ ಹುಚ್ಚಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಿ: ಸಚಿವ ಶಿವರಾಜ್ ತಂಗಡಗಿ
ಪತ್ರಿಕಾಗೋಷ್ಠಿಯಲ್ಲಿ ಮಹಾಂತೇಶ ಬಡದಾಳ, ಮಹೇಶ್ ಕೋಕಿಲೆ, ಸೂರ್ಯಕಾಂತ ಆಜಾದ್ ಪುರ ಸೇರಿದಂತೆ ಇತರರು ಇದ್ದರು.