ಬೀದರ್, ಭಾಲ್ಕಿ ತಾಲೂಕು ಸೇರಿದಂತೆ ರಾಜ್ಯಾದ್ಯಂತ ವಿದ್ಯಾರ್ಥಿ ಮತ್ತು ಯುವ ಸಮುದಾಯದ ಬದುಕು ಹಾಳು ಮಾಡುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟ (ರಮ್ಮಿ) ಗೇಮ್‌ಗಳನ್ನು ನಿಷೇಧಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ನೇತೃತ್ವದಲ್ಲಿ ಸೇನೆಯ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್, ಜೂಜಾಟ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳು, ಯುವಕರು ದಾರಿ ತಪ್ಪುತ್ತಿದ್ದಾರೆ. ಆನಲೈನ್ ಗೇಮ್ ಚಟಕ್ಕೆ ಯುವಕರು ತಮ್ಮ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಪಾಲಕರು ಕೂಡಿಟ್ಟ ಹಣವನ್ನು ಆನ್ ಲೈನ್ ಗೇಮ್‌ನಲ್ಲಿ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ’ ಎಂದರು.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಮಾತನಾಡಿ, ʼರಾಜ್ಯದಲ್ಲಿ ಆನ್‌ಲೈನ್ ಗೇಮ್ ರದ್ದುಪಡಿಸಲು ಸರಕಾರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಎಂ.ಬಸವರಾಜ ಪಡಕೋಟೆ ನೇತೃತ್ವದಲ್ಲಿ ಹೋರಾಟ ನಡೆಸಿ ಸರಕಾರದ ಗಮನ ಸೆಳೆಯುತ್ತಿವೆ. ಸಿಕ್ಕಿಂ, ಮೇಘಾಲಯ ಮಾದರಿಯಂತೆ ರಾಜ್ಯದಲ್ಲಿ ಕೂಡ ಆನ್‌ಲೈನ್ ಆಪ್ ಹಾಗೂ ಆನ್‌ಲೈನ್ ಗೇಮ್ಸ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಪತ್ರಕರ್ತ ಡಿ.ಉಮಾಪತಿ ಅವರಿಗೆ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಬಸವರಾಜ ಕಾರಬಾರಿ, ಪ್ರಮುಖರಾದ ಕಾಶಿನಾಥ ಚಳಕಾಪೂರೆ, ದತ್ತಾತ್ರಿ ಜಗತಾಪ, ದೀಪಕ ಠಮಕೆ, ಲೋಕೇಶ ಪಾಟೀಲ್, ಭದ್ರೇಶ ಸ್ವಾಮಿ, ವೀರೇಶ ಬಿರಾದಾರ್, ರಾಜಕುಮಾರ ಕುಂಬಾರ, ಜಗದೀಶ ಪಾಟೀಲ್, ಮಹೇಶ ರಾಚೋಟೆ, ಲೋಕೇಶಕುಮಾರ ಚಿಂಚೋಳೆ, ಶೈಲೇಶ ಕರಂಜೆ, ಸಾಗರ ಸ್ವಾಮಿ, ಆನಂದ ಸಾಗರ, ಓಂ ಪಾಟೀಲ್ ಸೇರಿದಂತೆ ಹಲವರು ಇದ್ದರು.