ʼನಮ್ಮ ಕರ್ನಾಟಕ ನಮ್ಮ ಮಾದರಿʼ; ಜಾಗೃತ ಕರ್ನಾಟಕದಿಂದ ಚಿಂತನಾ ಸಮಾವೇಶ

Date:

Advertisements
ಇದೇ ಆಗಸ್ಟ್‌ 20, ಭಾನುವಾರ ಬೆಂಗಳೂರಿನ ಪ್ಯಾಲೆಸ್‌ ರಸ್ತೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ 6ರವರೆಗೆ ಚಿಂತನಾ ಸಮಾವೇಶ ಆಯೋಜನೆಗೊಂಡಿದೆ. ವಿವಿಧ ಕ್ಷೇತ್ರಗಳ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. 

ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಂದೋಲನಗಳ ನೆಲೆಯಲ್ಲಿ ಕರ್ನಾಟಕ ಮಾದರಿಯ ಕುರಿತು ಐದು ದಶಕಗಳಿಂದ ಆಗಾಗ ಪ್ರಸ್ತಾಪವಾಗಿದೆ. ಆದರೆ, ಅದರ ಸುತ್ತ ಅಗತ್ಯವಿದ್ದಷ್ಟು ಚರ್ಚೆ, ವಿವಿಧ ವಲಯಗಳಿಂದ ಸಿಗಬೇಕಾದ ಗಮನ ಮತ್ತು ಮುಖ್ಯವಾಗಿ ನಾಡಿನ ಪ್ರಜ್ಞಾವಂತ ಜನತೆ ಆ ಕುರಿತು ತೋರಬೇಕಿದ್ದ ಒತ್ತಾಸೆಗಳ ಕೊರತೆಯೆದ್ದಿದೆ.

ಕರ್ನಾಟಕದಲ್ಲಿ 2023ರ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರಕಾರ ಐದು ಮಹತ್ವಾಕಾಂಕ್ಷಿ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮಾದರಿ ಅಭಿವೃದ್ಧಿ ಪರಿಕಲ್ಪನೆಯ ಸುತ್ತ ಹೊಸ ಚರ್ಚೆಯೊಂದು ಪ್ರಾರಂಭವಾಗಿದೆ. ಈ ಮಾದರಿ ಏನು ಎನ್ನುವುದು ಇನ್ನೂ ಕೂಡಾ ಸ್ಪಷ್ಟಗೊಳ್ಳಬೇಕಿದ್ದರೂ ಕರ್ನಾಟಕ ಮಾದರಿ ಎಂದರೆ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವುದು ಎನ್ನುವುದು ಸಾಮಾನ್ಯ ಅಭಿಪ್ರಾಯ. ಅಭಿವೃದ್ಧಿಯೆಂದರೆ ಆರ್ಥಿಕ ಏಳಿಗೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ಪ್ರಜಾಸತ್ತಾತ್ಮಕವಾದ ಪುರೋಗತಿ ಎನ್ನುವ ವಿಶಾಲ ಅರ್ಥದಲ್ಲಿ ಭಾವಿಸಿದರೆ ಕರ್ನಾಟಕದಲ್ಲಿ ಚಾರಿತ್ರಿಕವಾಗಿ ವಿಕಾಸಗೊಂಡ ಮಾದರಿಗೆ ತನ್ನದೇ ಆದ ವಿಶಿಷ್ಟತೆ ಇದೆ. ಸಾಮಾಜಿಕ ಸಾಮರಸ್ಯತೆ, ಸಾಂಸ್ಕೃತಿಕ ವೈವಿದ್ಯತೆ, ರಾಜಕೀಯ ಅಧಿಕಾರದ ನಿರಂತರ ಪ್ರಜಾಸತ್ತೀಕರಣ ಮತ್ತು ಸಂಪತ್ತಿನ ಸಮಾನ ಮರುಹಂಚಿಕೆಯ ಆಶಯಗಳನ್ನು ಕರ್ನಾಟಕ ಮಾದರಿಯಲ್ಲಿ ಗುರುತಿಸಬಹುದು. ಹಾಗಾಗಿ ಕರ್ನಾಟಕ ಮಾದರಿ ಭಾರತದ ಸಾಂವಿಧಾನಿಕ ಮೌಲ್ಯಗಳ ನೇರ ಪ್ರತಿಫಲನ ಕೂಡಾ ಆಗಿರುತ್ತದೆ.

ಕರ್ನಾಟಕದಲ್ಲಿ ಇಂತಹದ್ದೊಂದು ಮಾದರಿಯನ್ನು ಕಟ್ಟುವಲ್ಲಿ ಹನ್ನೆರಡನೆಯ ಶತಮಾನದಲ್ಲಿ ಶರಣ ಚಳವಳಿಯನ್ನು ಹುಟ್ಟುಹಾಕಿದ ಬಸವೇಶ್ವರರಿಂದ ಹಿಡಿದು, 20ನೆಯ ಶತಮಾನದಲ್ಲಿ ಮೈಸೂರನ್ನಾಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರವರೆಗೆ, ಸ್ವಾತಂತ್ರ್ಯಾನಂತರದ ಕಾಲಾವಧಿಯಲ್ಲಿ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವರೆಗೆ ಹಲವಾರು ಮಹನೀಯರು ಮಹತ್ವದ ಕೊಡುಗೆ ನೀಡಿದ್ದಾರೆ. ಸಾಂಸ್ಕೃತಿಕ ಚಹರೆಗಳನ್ನು ರೂಪಿಸುವಲ್ಲಿ ಪಂಪನಿಂದ ಕುವೆಂಪುರವರೆಗೆ ಮತ್ತು ಮುಂದುವರೆದು ಇಂದಿನತನಕ ಹಲವು ಚಿಂತನಶೀಲರ ಪ್ರತಿಪಾದನೆಗಳು ಕೆಲಸ ಮಾಡಿವೆ. ಹಾಗೆಯೇ ಸಾಮಾಜಿಕಾರ್ಥಿಕ ರಾಜಕೀಯ ಸ್ವರೂಪವನ್ನು ನಿರ್ಧರಿಸುವಲ್ಲಿ ಕರ್ನಾಟಕದ ಆಂದೋಲನಗಳು ತಮ್ಮ ಒತ್ತಾಸೆಗಳನ್ನು ಮುನ್ನೆಲೆಗೆ ತಂದಿವೆ.

ಖಾಸಗಿ ಬಂಡವಾಳ ಮತ್ತು ವಿವಿಧ ರೀತಿಯ ಮೂಲಭೂತವಾದಗಳು ನಿಜ ಪ್ರಜಾಸತ್ತಾತ್ಮಕ ಸಮಾಜದ ನಿರ್ಮಾಣದ ಕನಸಿಗೆ ಎಲ್ಲೆಡೆ ಸವಾಲೊಡ್ಡುತ್ತಿರುವ ಇಂದಿನ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿ ಮಾದರಿಯು ಭಾರತದಲ್ಲಿ ಮತ್ತು ಜಾಗತಿಕವಾಗಿ ಪ್ರಸ್ತುತತೆಯನ್ನು ಪಡೆಯುತ್ತದೆ. ಹಾಗಾಗಿ ಈ ತನಕದ ಕರ್ನಾಟಕದ ಚರಿತ್ರೆಯಲ್ಲಿ ಕೆಲವೊಮ್ಮೆ ಮುನ್ನೆಲೆಗೆ ಬಂದು, ಕೆಲವೊಮ್ಮೆ ಸುಪ್ತ ಆಶಯವಾಗಿಯೇ ಉಳಿದು, ಇನ್ನು ಕೆಲವೊಮ್ಮೆ ಸಂಪೂರ್ಣವಾಗಿ ಸರಿದುಬಿಡುವ ಕರ್ನಾಟಕದ ಅಭಿವೃದ್ಧಿ ಮಾದರಿ ಏನಿದೆ ಅದನ್ನು ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಜೀವನದ ಅತ್ಯುನ್ನತ ಮೌಲ್ಯ ಎನ್ನುವ ರೀತಿಯಲ್ಲಿ ಗಟ್ಟಿಯಾಗಿ ಪ್ರತಿಷ್ಠಾಪಿಸಬೇಕಿದೆ. ಇದರ ಸುತ್ತ ಕರ್ನಾಟಕದಲ್ಲೊಂದು ಹೊಸ ಕರ್ನಾಟಕ ಪ್ರಜ್ಞೆ ಮತ್ತು ಅಸ್ಮಿತೆಯನ್ನು ಸೃಷ್ಟಿಸಬೇಕಿದೆ; ಮತ್ತು ಸೃಷ್ಟಿಸಲು ಸಾಧ್ಯವಿದೆ. ಹೀಗೆ ಕರ್ನಾಟಕವನ್ನು ಸದೃಢವಾಗಿ ಕಟ್ಟಿದರೆ ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಇನ್ನಷ್ಟೂ ಮಹತ್ವದ ಪಾತ್ರವಹಿಸಲು ಸಾಧ್ಯ.

ಈ ಹಂತದಲ್ಲಿ ಕೆಲವು ವಿಷಯಗಳನ್ನು ಗಮನಿಸಬೇಕಿದೆ.
ಮೊದಲನೆಯದಾಗಿ ಕರ್ನಾಟಕ ಮಾದರಿ ಬಗ್ಗೆ ಕರ್ನಾಟಕದಲ್ಲೇ ದೊಡ್ಡ ಮಟ್ಟದ ಅರಿವಿನ ಕೊರತೆ ಇದೆ. ನಾವು ದೊಡ್ಡ ಪರಂಪರೆಯೊಂದರ ಈ ಕಾಲದ ವಾರಸುದಾರರು ಮತ್ತು ಇದನ್ನು ಸೂಕ್ತವಾಗಿ ಮುನ್ನಡೆಸುವ ಜವಾಬ್ದಾರಿ ನಮಗಿರಬೇಕು ಎನ್ನುವ ಪ್ರಜ್ಞೆ ಹೊಸ ತಲೆಮಾರಿನಲ್ಲಿ ಮೂಡುವುದು ಸಹಾ ತುಂಬಾ ಅವಶ್ಯಕ. ಕರ್ನಾಟಕ ಮಾದರಿಯನ್ನು ಇನ್ನಷ್ಟು ನಿಖರಗೊಳಿಸಲು ಮತ್ತು ಬೆಳೆಸಲು ಅದರ ಬಗ್ಗೆ ವ್ಯಾಪಕವಾದ ಅರಿವನ್ನು ಮೂಡಿಸುವ ಕೆಲಸ ಆಗಬೇಕಿದೆ.

ಎರಡನೆಯದಾಗಿ ದಕ್ಷಿಣದ ಇತರ ರಾಜ್ಯಗಳೂ ತಮ್ಮದೇ ಆದ ಅಭಿವೃದ್ಧಿ ಮಾದರಿಗಳಿಗಾಗಿ ಹೆಸರುವಾಸಿಯಾಗಿವೆ. ವಿಶೇಷವಾಗಿ ಹಿಂದೆ ಕೇರಳ, ಇತ್ತೀಚಿಗೆ ತಮಿಳುನಾಡು ರಾಜ್ಯಗಳು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿವೆ. ಕರ್ನಾಟಕದ ಮಾದರಿ ಕೇರಳ ಮತ್ತು ತಮಿಳುನಾಡಿನ ಮಾದರಿಯಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದದ್ದು ಕಡಿಮೆ. ಹಾಗಾಗಿ ಕರ್ನಾಟಕ ಮಾದರಿಯನ್ನು ದೇಶಕ್ಕೆ ಮತ್ತು ಜಗತ್ತಿಗೆ ಸ್ಪಷ್ಟವಾಗಿ ಪರಿಚಯಿಸುವ ಅಗತ್ಯವಿದೆ.

Advertisements

ಮೂರನೆಯದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕದ ಅಂತಸ್ಸತ್ವವನ್ನು ಮತ್ತು ಆತ್ಮಾಭಿಮಾನವನ್ನು ಪ್ರತಿನಿಧಿಸುವ ಈ ಕರ್ನಾಟಕ ಮಾದರಿಯ ಮೇಲೆ ವಿವಿಧ ರೀತಿಯ ಅತಿಕ್ರಮಣಗಳು ನಡೆಯುತ್ತಿವೆ. ಪ್ರಾದೇಶಿಕ ಸ್ವಂತಿಕೆಯ ಪ್ರತಿಫಲವಾಗಿ ರೂಪುಗೊಂಡಿರುವ ಕರ್ನಾಟಕ ಮಾದರಿಯು, ರಾಷ್ಟ್ರೀಯತೆಯ ಹೆಸರಿನಲ್ಲಿ ಎಲ್ಲವನ್ನೂ ಏಕರೂಪಗೊಳಿಸಲು ಹೊರಟಿರುವ ರಾಜಕೀಯಕ್ಕೆ ಬಲಿಯಾಗುತ್ತಿದೆ. ಆದ ಕಾರಣ ಶತಮಾನಗಳಿಂದ ವಿವಿಧ ಮಹನೀಯರು ಬೆಳೆಸಿದ ಈ ಮಾದರಿಯನ್ನು ಉಳಿಸಿಕೊಳ್ಳಲು ವಿಶೇಷವಾಗಿ ಈಗ ಶ್ರಮಿಸಬೇಕಿದೆ.

ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ‘ಜಾಗೃತ ಕರ್ನಾಟಕ’ವು ಆಗಸ್ಟ್ 20, 2023 ರಂದು ಕರ್ನಾಟಕ ಅಭಿವೃದ್ಧಿ ಮಾದರಿ ಎಂಬ ವಿಷಯದ ಬಗ್ಗೆ ಒಂದು ದಿನದ ಚಿಂತನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಆಗಸ್ಟ್ 20 ದಿವಂಗತ ದೇವರಾಜ ಅರಸು ಅವರ ಜನ್ಮದಿನಾಂಕ. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಕೇಂದ್ರಿತ ಅಭಿವೃದ್ಧಿಗೆ ಹೊಸ ಭಾಷ್ಯವನ್ನು ಬರೆದ ಆಧುನಿಕ ಕರ್ನಾಟಕದ ರೂವಾರಿಗಳಾದ ಅರಸು ಅವರ ಜನ್ಮದಿನ ಕರ್ನಾಟಕ ಮಾದರಿಯ ಬಗ್ಗೆ ಚರ್ಚಿಸಲು ಸೂಕ್ತ ಸಂದರ್ಭ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿದ್ವಾಂಸರು, ಚಿಂತಕರ ಜತೆಗೆ ಬೇರುಮಟ್ಟದ ಕಾರ್ಯಕರ್ತರು ಮತ್ತು ಪ್ರಾಯೋಗಿಕವಾಗಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ತೊಡಗಿರುವ ವೃತ್ತಿಪರರು ಭಾಗವಹಿಸಲಿರುವ ಈ ವಿಚಾರ ಸಂಕಿರಣದಲ್ಲಿ ಕರ್ನಾಟಕವನ್ನು ವಿಶೇಷವಾಗಿ ಅಧ್ಯಯನ ಮಾಡಿರುವ ಮತ್ತು ದೇವರಾಜ ಅರಸು ಅವರ ನಿಕಟವರ್ತಿಯಾಗಿದ್ದ London ವಿಶ್ವವಿದ್ಯಾನಿಲಯದ ಹಿರಿಯ ವಿದ್ವಾಂಸ ಪ್ರೊಫೆಸರ್ ಜೇಮ್ಸ್ ಮ್ಯಾನರ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

Professor James Manor
ಪ್ರೊಫೆಸರ್ ಜೇಮ್ಸ್ ಮ್ಯಾನರ್

ಪ್ರಮುಖ ಗೋಷ್ಠಿಗಳು

ಉದ್ಘಾಟನಾ ಗೋಷ್ಠಿ : ಕರ್ನಾಟಕ ಮಾದರಿಯಿಂದ ಕರ್ನಾಟಕ ಅಸ್ಮಿತೆಯೆಡೆಗೆ– ಉದ್ಘಾಟನೆ ದೇವರಾಜು ಅರಸು ಅವರ ನಿಕಟವರ್ತಿಯಾಗಿದ್ದ ಲಂಡನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ ಜೇಮ್ಸ್‌ ಮ್ಯಾನರ್‌ (ಆನ್‌ ಲೈನ್‌).
ದೇವರಾಜ ಅರಸು ಮತ್ತು ನಮ್ಮ ಕರ್ನಾಟಕ ಮಾದರಿ
ದಿಕ್ಸೂಚಿ ಮಾತು- ಡಾ. ಎ ನಾರಾಯಣ, ಅಜೀಂ ಪ್ರೇಂಜಿ ವಿವಿ ಪ್ರಾಧ್ಯಾಪಕ
ಮುಖ್ಯ ಅತಿಥಿ- ಕರೆಮ್ಮ ಜಿ ನಾಯಕ, ದೇವದುರ್ಗ ಶಾಸಕಿ
ಅಧ್ಯಕ್ಷತೆ – ಡಾ ಸಬೀಹಾ ಭೂಮಿಗೌಡ, ವಿಶ್ರಾಂತ ಕುಲಪತಿ
ಸಮನ್ವಯ- ಆಂಜನೇಯ ರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

ಮೊದಲ ಗೋಷ್ಠಿ: ಕರ್ನಾಟಕ ಮಾದರಿ, ಪರಂಪರೆಯ ಕಸುವು
ಕಲ್ಯಾಣ ಕಾರ್ಯಕ್ರಮಗಳ ಆರ್ಥಿಕತೆ- ಡಾ ಬಿ ಸಿ ಬಸವರಾಜು, ರಾಜಕೀಯ ವಿಶ್ಲೇಷಕ
ಕರ್ನಾಟಕ ಮಾದರಿಯಲ್ಲಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆ- ಡಾ. ಸ್ವಾತಿ ಶಿವಾನಂದ್‌, ಸಹಾಯಕ ಪ್ರಾಧ್ಯಾಪಕಿ
ತನ್ನಂತೆ ಪರರ ಬಗೆವ ನಾಡು-ನಿವೃತ್ತ ಪ್ರಾಧ್ಯಾಪಕ ಪ್ರೊ. ರಹಮತ್‌ ತರೀಕೆರೆ
ಸಮನ್ವಯ- ಬಸವರಾಜ್‌ ಎಂ ಬಿರಾದಾರ್, ಸೃಷ್ಟಿ ಮಣಿಪಾಲ್‌ ಸಹಾಯಕ ಪ್ರಾಧ್ಯಾಪಕ

ಎರಡನೇ ಗೋಷ್ಠಿ: ಕರ್ನಾಟಕ ಮಾದರಿ- ವರ್ತಮಾನದ ಸಾಧ್ಯತೆ
ನಗರ-ಗ್ರಾಮೀಣ ಸಮತೋಲಿತ ಅಭಿವೃದ್ಧಿ- ಪ್ರಿಯಾಂಕ್‌ ಖರ್ಗೆ, ಸಚಿವ
ಅಭಿವೃದ್ಧಿಯಲ್ಲಿ ರೈತ ಚಳವಳಿಯ ಭಾಗೀದಾರಿಕೆ- ದರ್ಶನ್‌ ಪುಟ್ಟಣ್ಣಯ್ಯ, ಶಾಸಕ
ಬದಲಾಗಬೇಕಿರುವ ಮಾಧ್ಯಮ ಮಾದರಿ- ಕೃಷ್ಣಪ್ರಸಾದ್‌, ʼOut lookʼ ಮಾಜಿ ಸಂಪಾದಕ
ಶೋಷಿತ ಸಮುದಾಯಗಳ ಹೋರಾಟಗಳು ಮತ್ತು ಕರ್ನಾಟಕ ಮಾದರಿ- ಕೊಟ್ಟ ಶಂಕರ್‌, ಸಾಮಾಜಿಕ ಕಾರ್ಯಕರ್ತ
ಈ ಕಾಲದ ಸಾಂಸ್ಕೃತಿಕ ಪರ್ಯಾಯಗಳು- ಕೆ ಪಿ ಲಕ್ಷ್ಮಣ್‌, ರಂಗಕರ್ಮಿ
ಸಮನ್ವಯ- ಡಾ. ನಾಗೇಗೌಡ ಕೆ ಎಸ್‌, ರಾಜಕೀಯ ವಿಶ್ಲೇಷಕ

ಸಮಾರೋಪ ಗೋಷ್ಠಿ: ಹೊಸ ಮಾದರಿಗೆ ಜಾಗತಿಕ ಹುಡುಕಾಟ
ಅಭಿವೃದ್ಧಿಯ ಜಾಗತಿಕ ಹುಡುಕಾಟಕ್ಕೆ ಕರ್ನಾಟಕವೇನು ಕೊಡಬಲ್ಲುದು?- ಡಾ ಅಮಿತ್‌ ಬಾಸೊಲೆ, ಅರ್ಥಶಾಸ್ತ್ರಜ್ಞ
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಮಾದರಿಗಿರುವ ಸವಾಲುಗಳು- ಕೃಷ್ಣ ಭೈರೇಗೌಡ, ಕಂದಾಯ ಸಚಿವರು
ಮಹಿಳಾ ಪ್ರಾತಿನಿಧ್ಯ ಮತ್ತು ಸಬಲೀಕರಣ-ಜಾಗತಿಕ ಅನುಸಂದಾನ- ಯು ಟಿ ಫರ್ಜಾನಾ, ಸಾಮಾಜಿಕ ಕಾರ್ಯಕರ್ತೆ
ಭಾರತ ರಾಷ್ಟ್ರೀಯತೆ ಮತ್ತು ಭಾರತದೊಳಗಿನ ರಾಷ್ಟ್ರೀಯತೆಗಳು- ಪ್ರೊ ಯೋಗೇಂದ್ರ ಯಾದವ್‌, ರಾಜಕೀಯ ವಿಶ್ಲೇಷಕ
ಸಮನ್ವಯ: ಡಾ. ಹಿಮಾಂಶು, ಜಾಗತಿಕ ಆರೋಗ್ಯ ಸಂಶೋಧಕರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಚಪಾತಿ ರೊಟ್ಟಿ ಕಾಯಿಸಿದಂತೆ ಎಫ್‌ಐಆರ್ ಮಾಡ್ತಿದ್ದಾರೆ: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

Download Eedina App Android / iOS

X