ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಆಡಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಜಿಲ್ಲಾದ್ಯಂತ ಅಮಿತ್ ಶಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಡಾ.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್‌ನಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಜನಪರ ಸಂಘಟನೆಗಳ ಒಕ್ಕೂಟ, ವಿವಿಧ ದಲಿತ ಪರ ಸಂಘಟನೆಗಳ ನೇತ್ರತ್ವದಲ್ಲಿ ಹುಮನಾಬಾದ್ ಬಂದ್ ಕರೆ ನೀಡಿದ ಹಿನ್ನಲೆ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಚ್ಚಿ ಪ್ರತಿಭಟನೆಗೆ ಬೆಂಬಲಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜನಪರ ಸಂಘಟನೆಗಳ ಒಕ್ಕೂಟದಿಂದ ಹಳೆ ತಹಸೀಲ್ ಕಚೇರಿಯಿಂದ ಛತ್ರಪತಿ ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಬಾಲಾಜಿ ಮಂದಿರ ಸರ್ದಾರ್ ಪಟೇಲ್ ವೃತ್ತದ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದವರೆಗೆ ಕೇಂದ್ರ ಸರ್ಕಾರ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ತೆರಳಿತು. ಬಳಿಕ ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಸಚಿವರಾದ ಬಳಿಕ ಜಿಲ್ಲೆಯಲ್ಲಿ ಹಾಗೂ ಅವರ ತವರು ಕ್ಷೇತ್ರ ಭಾಲ್ಕಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ ಸಚಿವ ಈಶ್ವರ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.
ʼಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಖಂಡನೀಯ. ಇದರಿಂದ ಅಂಬೇಡ್ಕರ್ ಅನುಯಾಯಿಗಳಿಗೆ ನೋವು ತಂದಿದೆ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ದೇಶದ್ರೋಹ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ಈ ಸಂಬಂಧ ರಾಷ್ಟ್ರಪತಿ, ರಾಜ್ಯಪಾಲರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ರಮೇಶ ಡಾಕುಳಗಿ, ರಮೇಶ ಚವ್ಹಾಣ್, ಅಂಕುಶ ಗೋಖಲೆ, ಶೇಕ್ ಮಕ್ಸೂದ್, ಗೌತಮ ಶಿವರಾಜ ಚೀನಕೇರೆ, ರವಿಕುಮಾರ ಹೊಸಳ್ಳಿ, ಗಜೇಂದ್ರ ಕನಕಟಕರ್, ಅನೀಲ ದೊಡ್ಡಿ, ಸುಭಾಷ ಆರ್ಯ, ಶ್ರೀಧರ, ಲಕ್ಷ್ಮೀಪುತ್ರ ಮಾಳಗೆ, ಶಿವಪುತ್ರ ಮಾಳಗೆ, ಪ್ರಭುರಾವ್ ತಾಳಮಡಗಿ, ಗೌತಮ ಸಾಗರ್ ಸೇರಿದಂತೆ ವಿವಿಧ ಸಂಘಟನೆಗಳ ಅನೇಕರು ಪಾಲ್ಗೊಂಡಿದ್ದರು.
ಹುಲಸೂರ : ಅಮಿತ್ ಶಾ ಗಡಿಪಾರಿಗೆ ದಲಿತ್ ಪ್ಯಾಂಥರ್ ಆಗ್ರಹ
ಸಂಸತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ದಲಿತ್ ಫ್ಯಾಂಥರ್ ವತಿಯಿಂದ ಹುಲಸೂರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ದೇಶಕ್ಕೆ ಕೋಟ್ಯಾಂತರ ಜನರ ಪಾಲಿಗೆ ದೇವರ ಸಮಾನರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ರಾಜ್ಯಸಭೆಯಲ್ಲಿ ಅಪಮಾನಿಸಿದ ಅಮಿತ್ ಶಾ ಸಂಪುಟದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಕೂಡಲೇ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಿದರು.
ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ವೈಜಿನಾಥ ಸಿಂಧೆ, ತಾಲ್ಲೂಕಾಧ್ಯಕ್ಷ ಅಶೋಕ ಸಿಂಧೆ ಸೇರಿದಂತೆ ಮನೋಹರ ಮೋರೆ, ಸಿದ್ದಾರ್ಥ ಡಾಂಗೆ, ಲೋಕೇಶ ಕಾಂಬಳೆ, ದತ್ತಾ ಮೋರೆ, ಸತೀಷ ಗಾಯಕವಾಡ, ದೇವಾನಂದ ಟೋಳೆ, ಸಂದೀಪ ಮುಕಿಂದೆ, ನಾಗನಾಥ ಬನ್ಸೂಡೆ, ಅಶೋಕ ಕಾಂಬಳೆ, ಅನೀಲ ಒಡೆಯಾರ್, ರಾಜು ಲಾಟೇ, ರಾವಸಾಬ್ ಸಿಂಧೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಮಲನಗರ : ಸಂಪುಟದಿಂದ ಅಮಿತ್ ಶಾ ವಜಾಕ್ಕೆ ಒತ್ತಾಯ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಖಂಡಿಸಿ ಕಮಲನಗರ ಪಟ್ಟಣದಲ್ಲಿ ಜನಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಮುಖ್ಯ ರಸ್ತೆ ಬಸ್ ನಿಲ್ದಾಣದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅಮಿತ್ ಕುಲಕರ್ಣಿ ಅವರಿಗೆ ಸಲ್ಲಿಸಿದರು.

ರಾಜ್ಯಸಭೆʼ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂಬುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರು ಜಪ ಮಾಡುವ ಬದಲಿಗೆ ದೇವರ ಹೆಸರನ್ನು ಜಪಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಎನ್ನುವ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಅಮಿತ್ ಶಾ ನೀಡಿರುವ ಹೇಳಿಕೆಯಿಂದ ಸಂವಿಧಾನಕ್ಕೂ ಅಪಮಾನಿಸಿದಂತಾಗಿದೆ. ಆದ್ದರಿಂದ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಅಮೂಲ ಸೂರ್ಯವಂಶಿ, ಭಾಗವತ ಭೂತಾಳೆ, ಪ್ರವೀಣ ಕದಮ, ಶಾಲಿವಾನ ಡೊಂಗರೆ, ರಾಜೇನ ಸೂರ್ಯವಂಶಿ, ತುಳಸಿರಾಮ ಜಕಾತೆ, ಪ್ರೇಮಕುಮಾರ ರಣದೀವೆ, ಉಷಾ ವಾಘಮಾರೆ,ಜ್ಞಾನೋಬಾ ಕಾಂಬಳೆ, ಗೋವಿಂದರಾವ್ ತಾಂದಳೆ, ಉತ್ತಮಕುಮಾರ್ ಖ್ಯಾಡ್, ವಿಜಯಕುಮಾರ್ ಸೂರ್ಯವಂಶಿ, ನರಸಿಂಗ್ ನಿರ್ಮಳೆ, ವಿಜಯಾನಂದ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಚಿಟಗುಪ್ಪ : ಅಮಿತ್ ಶಾ ರಾಜೀನಾಮೆಗೆ ಆಗ್ರಹ
ರಾಜ್ಯಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳ್ಳಿಯಲ್ಲಿ ಪ್ರತಿಭಟನೆ ನಡೆಯಿತು.
ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿಯ ಪ್ರಮುಖರರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ದೇಶದ ಜನತೆಗೆ ಸಂವಿಧಾನ ಮೂಲಕ ಸ್ವಾತಂತ್ರ್ಯ ಸಮಾನತೆ ನೀಡಿದ ಬಾಬಾ ಸಾಹೇಬರ ಕುರಿತು ಅಮಿತ್ ಶಾ ಕೀಳಾಗಿ ಮಾತನಾಡಿದ್ದು ಸಹಿಸುವುದಿಲ್ಲ. ಇದರಿಂದ ಅಂಬೇಡ್ಕರ್ ಅನುಯಾಯಿಗಳಿಗೆ ನೋವು ತಂದಿದೆ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ವ್ಯಕ್ತಿ ಸಂಪುಟದಲ್ಲಿ ಮುಂದುವರೆಯಲು ಅರ್ಹವಲ್ಲ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಶಿವಕುಮಾರ್ ಮುತ್ತಂಗಿಕರ್, ಶಿವಕುಮಾರ್ ಮಂಗಲಗಿಕರ್, ಲಕ್ಷ್ಮಣರಾವ ಸಾತನೂರ, ಪ್ರಲ್ಹಾದ್ ಮಾಲೇಕರ್, ಶಾಂತಕುಮಾರ್ ಪಟ್ನೆ, ಕುಪೇಂದ್ರ ಕಾಂಬ್ಳೆ, ರಾಜಕುಮಾರ್ ಅಗಸಿ, ಗೌತಮ ಬಗದಲಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.