ತೀರ್ಥಹಳ್ಳಿಯ ವಿದ್ಯಾರ್ಥಿನಿಯೊಬ್ಬರ ಅಶ್ಲೀಲ ವಿಡಿಯೋವನ್ನು ಬಿಜೆಪಿ ಬೆಂಬಲಿತ ಎಬಿವಿಪಿ ತಾಲೂಕು ಅಧ್ಯಕ್ಷ ಹರಿಬಿಟ್ಟಿದ್ದಾನೆ. ಆತ 30-40 ಹೆಣ್ಣು ಮಕ್ಕಳ ಖಾಸಗಿ ವಿಡಿಯೋವನ್ನು ಇಟ್ಟಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಇದೆ. ಆತನ ದುಷ್ಕೃತ್ಯದ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರೇ ಉತ್ತರಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ಕಳೆದ ವಾದ ವಿದ್ಯಾರ್ಥಿಯ ಖಾಸಗೀ ವಿಡಿಯೋವನ್ನು ಎಬಿವಿಪಿ ತಾಲೂಕು ಅಧ್ಯಕ್ಷ ಪ್ರತಿಗೌಡ ಎಂಬಾತ ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ್, “ಎಬಿವಿಪಿ ಮುಖಂಡ ಎಸಗಿರುವ ಕೃತ್ಯದ ವಿರುದ್ಧ ಜ್ಞಾನೇಂದ್ರ ಪ್ರತಿಭಟನೆ ಮಾಡಬೇಕಿತ್ತು. ಆದರೆ, ಅವರು ಮೌನವಾಗಿದ್ದಾರೆ. ಇಂತಹ ಕೃತ್ಯವನ್ನು ಕಾಂಗ್ರೆಸ್ ಕಾರ್ಯಕರ್ತರೋ ಅಥವಾ ಮುಸ್ಲಿಂ ಸಮುದಾಯದವರೋ ಮಾಡಿದ್ದರೆ, ಕರ್ನಾಟಕ ಬಂದ್ ಮಾಡುತ್ತಿದ್ದರು. ಆದರೆ, ಆರಗ ಜ್ಞಾನೇಂದ್ರ ಈ ಆರೋಪಿಯ ಪರವಾಗಿದ್ದಾರೆ” ಎಂದು ಕಿಡಿಕಾರಿದರು.
“ಆರೋಪಿಗೂ ತಮಗೂ ಸಂಬಂಧವೇ ಇಲ್ಲವೆಂದು ಬಿಜೆಪಿಗರು ಹೇಳುತ್ತಿದ್ದಾರೆ. ಸ್ವತಃ ಆರಗ ಜ್ಞಾನೇಂದ್ರ ಅವರು ಕೇಸರಿ ಶಾಲು ಧರಿಸಿ ಆರೋಪಿ ಪರವಾಗಿ ಕಾಲೇಜುಗಳಲ್ಲಿ ಪ್ರಚಾರ ಮಾಡಿರುವ ವಿಡಿಯೋಗಳನ್ನು ನಾನೇ ತೋರಿಸುತ್ತೇನೆ” ಎಂದು ಅವರು ಹೇಳಿದ್ದಾರೆ.