ಅಂಗನವಾಡಿ ಮಕ್ಕಳು ಮನೆ ಆವರಣದಲ್ಲಿದ್ದ ಗಿಡಗಳಲ್ಲಿ ಹೂವು ಕಿತ್ತಿದ್ದಕ್ಕೆ, ವಿಕೃತ ಮನೆ ಮಾಲೀಕನೊಬ್ಬ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚೆಗೆ, ಮಹಿಳೆಯರ ಮೇಲಿನ ದೌರ್ಜನ್ಯಗಳಿಂದಲೇ ಬೆಳಗಾವಿ ಕುಖ್ಯಾತಿ ಗಳಿಸುತ್ತಿದೆ. ಇದೀಗ, ಮತ್ತೊಂದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ನಡೆದಿದೆ.
ಬೆಳಗಾವಿ ತಾಲೂಕಿನ ಬಸುರ್ಗೆ ಗ್ರಾಮದಲ್ಲಿ ಸೋಮವಾರ ಘಟನೆ ನಡೆಸಿದೆ. ಅಂಗನವಾಡಿ ಸಮೀಪವಿದ್ದ ಮನೆಯ ಅಂಗಳದಲ್ಲಿ ಹೂವಿನ ಗಿಡಗಳಿದ್ದವು. ಅವುಗಳಲ್ಲಿದ್ದ ಹೂವುಗಳನ್ನು ಅಂಗನವಾಡಿಯ ಮಕ್ಕಳು ಕಿತ್ತಿದ್ದಾರೆ.
ಇದರಿಂದ ಉದ್ರಿಕ್ತಗೊಂಡ ದುಷ್ಟ ಮನಸ್ಸಿನ ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಮಕ್ಕಳನ್ನು ಹೊಡೆಯಲು ಮುಂದಾಗಿದ್ದಾನೆ. ಮಧ್ಯ ಪ್ರವೇಶಿಸಿದ ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ ಅವರು ಮಕ್ಕಳನ್ನು ಹೊಡೆಯದಂತೆ ತಡೆದಿದ್ದಾರೆ. ಇದರಿಂದ ವಿಚಲಿತನಾದ ಕಲ್ಯಾಣಿ ಮೋರೆ ಕುಡುಗೋಲಿನಿಂದ ಸುಗಂಧಾ ಮೋರೆ ಅವರ ಮೂಗನ್ನೇ ಕತ್ತರಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರ ಮುಂದಿನ 16ನೇ ಹಣಕಾಸು ಆಯೋಗದ ಮುಂದೆ ಯಾವ ರೀತಿ ತನ್ನ ಬೇಡಿಕೆ ಮಂಡಿಸಲಿದೆ?
ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಾಸಲಾಗಿದೆ. ಮೂಗು ಕತ್ತರಿಸಿದ್ದರಿಂದ ಆಕೆಯ ಶ್ವಾಸಕೋಶಕ್ಕೂ ರಕ್ತ ಹೋಗಿದೆ ಎಂದು ತಿಳಿದುಬಂದಿದೆ. ಆಕೆ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಘಟನೆ ನಡೆದು ಎರಡು ದಿನಗಳಾಗಿವೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ, ಆರೋಪಿಯನ್ನು ಪೊಲೀಸರು ಬಂಧಿಸಿಲ್ಲವೆಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.