ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ ₹52 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಯೋಜನೆ ಜಾರಿಯಲ್ಲಿ ಶೇ.98ರಷ್ಟು ಯಶಸ್ಸು ಸಾಧಿಸಿದ್ದೇವೆಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಬೀದರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾದ ಗ್ಯಾರಂಟಿ ಯೋಜನೆ ದೇಶ ಹಾಗೂ ವಿಶ್ವದ ಗಮನ ಸೆಳೆದಿವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಡಿ ಯಾವುದೇ ರೀತಿಯ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಬಡ ಹಾಗೂ ಮಾಧ್ಯಮ ವರ್ಗದ ಜನರ ಆರ್ಥಿಕ ಸಂಕಷ್ಟಗಳಿಗೆ ಸಾಕಷ್ಟು ಪರಿಹಾರ ನೀಡುವ ಮೂಲಕ ಅವರಲ್ಲಿ ಶಕ್ತಿ ತುಂಬಿದೆ. ಕೋಟ್ಯಾಂತರ ಫಲಾನುಭವಿಗಳು ಸಣ್ಣಪುಟ್ಟ ಉದ್ಯೋಗ ಸ್ಥಾಪಿಸಿ, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಬೀದರ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಪ್ರಚಾರಕ್ಕಾಗಿ ಕಾಲೇಜುಗಳಲ್ಲಿ ಹಾಗೂ ಯುವಕರಲ್ಲಿ ವಿಶೇಷ ಪ್ರಚಾರ ಆಂದೋಲನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
‘ಶಾಲಾ-ಕಾಲೇಜುಗಳು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಬಸ್‌ಗಳು ಸರಿಯಾದ ಸಮಯಕ್ಕೆ ಸಂಚರಿಸುವಂತೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಲುಗಡೆಗಳಲ್ಲಿ ನಿಲ್ಲಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಣಿಕೆಯಲ್ಲಿ ಕಂಡು ಬಂದಿದ್ದು, ಅನೇಕ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ನ್ಯಾಯ ಬೆಲೆ ಅಂಗಡಿಗಳಿಗೆ ಎಚ್ಚರಿಕೆ ನೀಡುವಂತೆ ಸೂಚಿಸಿದರು. ಕಳ್ಳ ಸಾಗಾಟದಲ್ಲಿ ಕಂಡು ಬಂದ ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಕೆಲ ಮಹಿಳೆಯರಿಗೆ ಐಟಿ ಹಾಗೂ ಜಿಎಸ್‌ಟಿ ತೆರಿಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಅಂಥ ಗೃಹಿಣಿಯರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಬೇಕು. ಗ್ರಾಮ ಒನ್ ಕೇಂದ್ರಗಳಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ತೊಂದರೆ ನೀಡಿದಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಒಟ್ಟು ಕುಟುಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿ ಒಟ್ಟು 3,81,970 ಪಡಿತರ ಚೀಟಿಗಳಿದ್ದು, ಈ ಪೈಕಿ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ 2025ರ ಮೇ ತಿಂಗಳ ಅಂತಕ್ಕೆ 3,74,323 ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆಗೆ ₹1197.64 ಕೋಟಿ :
ಬೀದರ ಜಿಲ್ಲೆಯಲ್ಲಿ ಗೃಹಲಕ್ಷೀ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಮಾಸಿಕ ₹2 ಸಾವಿರ ರಂತೆ ಇಲ್ಲಿಯವರೆಗೆ ₹1197.64 ಕೋಟಿ ಹಣವನ್ನು ಡಿಬಿಟಿ ಮುಖಾಂತರ ವರ್ಗಾಯಿಸಲಾಗಿದೆ. ಜಿಲ್ಲೆಯ ಬೀದರ (91,371), ಬಸವಕಲ್ಯಾಣ (63,170), ಭಾಲ್ಕಿ (62,421), ಹುಮನಾಬಾದ (48,224), ಚಿಟಗುಪ್ಪಾ (43,904), ಔರಾದ (35,565), ಕಮಲನಗರ (19,579), ಹುಲಸೂರ (10,089) ತಾಲ್ಲೂಕಿನಲ್ಲಿ ನೋಂದಣಿ ಆಗಿದ್ದಾರೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ 13,13,305 ಫಲಾನುಭವಿಗಳು (3,57,286 ಪಡಿತರ ಚೀಟಿಗಳು) ₹333.28 ಕೋಟಿ ರೂಪಾಯಿ ಅನುದಾನ ಬಳಕೆಯಾಗಿದೆ. ಜುಲೈ 2023 ರಿಂದ ಜನವರಿ 2025ರವರಿಗೆ 5 ಕೆ.ಜಿ. ಅಕ್ಕಿ ಮತ್ತು ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ಹಣವನ್ನು ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿತ್ತು. 2025ರ ಜನವರಿ ತಿಂಗಳ ಡಿಬಿಟಿ ಮೂಲಕ ವರ್ಗಾವಣೆ ಹಣ ಬಾಕಿ ಇದೆ. ಫೆಬ್ರವರಿ 2025ರಿಂದ 5 ಕೆ.ಜೆ. ಅಕ್ಕಿಯ ಹಣದ ಬದಲಿಗೆ 10ಕೆಜಿ ಅಕ್ಕಿ ನೀಡಲಾಗುತ್ತಿದೆ. ಪಡಿತರ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟ ಆಗದಂತೆ ನೋಡಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುವನಿಧಿ ಯೋಜನೆಯಡಿಯಲ್ಲಿ ಒಟ್ಟು 10,489 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಅದರಲ್ಲಿ 7,961 ಪದವಿ ಅಭ್ಯರ್ಥಿಗಳು ಮತ್ತು 148 ಡಿಪ್ಲೋಮಾ ಅಭ್ಯರ್ಥಿಗಳು ಫಲಾನುಭವಿಗಳಿಗೆ ₹15.98 ಕೋಟಿ ಅನುದಾನ ಬಳಕೆಯಾಗಿದೆ. ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಲ್ಲಿ ಒಟ್ಟು 3,49,588 ಫಲಾನುಭವಿಗಳಿದ್ದು ₹327.69 ಕೋಟಿ ಅನುದಾನ ಬಳಕೆಯಾಗಿದೆ’ ಎಂದು ತಿಳಿಸಿದರು.
ಪ್ರತಿ ದಿನ 1.3 ಲಕ್ಷ ಮಹಿಳೆಯರು ಪ್ರಯಾಣ:
ಶಕ್ತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 2023 ಜೂನ್ 11 ರಿಂದ 2025 ಮೇ 31ರವರೆಗೆ ಮಹಿಳೆಯರು, ಬಾಲಕಿಯರು ಒಟ್ಟು ಸೇರಿ 8.15 ಕೋಟಿ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. ಕೆಕೆಆರ್‌ಟಿಸಿ ವಿಭಾಗದ ವಾಹನದಲ್ಲಿ ಪ್ರತಿ ದಿನ ಸರಾಸರಿ 1.3 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ, ಇದಕ್ಕೆ ₹233.27 ಕೋಟಿ ಸಂದಾಯವಾಗಿದೆ. ಪ್ರತಿ ದಿನ ಪ್ರಯಾಣಿಕರಿಂದ ಸರಾಸರಿ ₹32.40 ಲಕ್ಷ ಸಾರಿಗೆ ಆದಾಯ ಸಂದಾಯವಾಗಿದೆ. ವಿದ್ಯಾರ್ಥಿಗಳಿಗೆ ಬಸ್‌ಗಳ ಸಮಸ್ಯೆಯಾಗದಂತೆ ಸಾರಿಗೆ ಸಂಸ್ಥೆ ಗಮನಹರಿಸಬೇಕು’ ಎಂದು ಹೇಳಿದರು.
ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಹಾಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಗ್ಯಾರಂಟಿ ಯೋಜನೆಗಖ ಯಶಸ್ವಿ ಹಿನ್ನೆಲೆಯಲ್ಲಿ ಮನೆ-ಮನೆ ಗ್ಯಾರಂಟಿ ವಿಶೇಷ ಆಂದೋಲವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ದ್ವೇಷ ಭಾಷಣ, ಪ್ರಚೋದನಕಾರಿ ಪೋಸ್ಟ್ ವಿರುದ್ಧ ಕಾನೂನು ಕ್ರಮ : ಪೊಲೀಸರ ಎಚ್ಚರಿಕೆ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ ಬದೊಲೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ ಎಮ್.ಎಚ್, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ರಮೇಶ್ ಪಾಟೀಲ್, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಪುಲೇಕರ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿ. ಪ್ರಭಾಕರ ಸೇರಿದಂತೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.