ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣಕುಮಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ಹಿಂದುತ್ವದ ಭಾವನೆಗಳಿಗೆ ಧಕ್ಕೆಯಾದ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸದೇ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡದಿರುವ ಆರೋಪದಡಿ ಅಮಾನತು ಮಾಡಲಾಗಿದೆ.
ಥೀಮ್ ಪಾರ್ಕ್ ನಿರ್ಮಾಣಕ್ಕೆ ಒಟ್ಟು 11.5 ಕೋಟಿ ರೂ. ಮಂಜೂರಾಗಿ, 6.72 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳಿಸದೆ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸದೇ ತರಾತುರಿಯಲ್ಲಿ ಉದ್ಘಾಟಿಸಿದ ಕಾರಣ ಕಾಮಗಾರಿ ಗುಣಮಟ್ಟ ಹಾಗೂ ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಡೆದ ಭಾರಿ ಪರ-ವಿರೋಧ ಚರ್ಚೆಗಳ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಹೃದಯ ವಿದ್ರಾವಕ ಘಟನೆ; ಅಪ್ಪ, ಮಗನನ್ನು ಕೊಂದ ಚಿಕ್ಕಪ್ಪ
ಈ ಕಾಮಗಾರಿಯ ಬಗ್ಗೆ ಪೊಲೀಸ್ ಇಲಾಖೆ ಹಾಗೂ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ವಿಚರಣಾ ಆಯೋಗದಲ್ಲಿ ತನಿಖಾ ಹಂತದಲ್ಲಿದ್ದು, ತನಿಖೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇರುವುದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ದೇಶಕರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.