ಭಾಲ್ಕಿ ಪಟ್ಟಣದಲ್ಲಿ ಡಿ.20 ರಂದು ನಡೆಯಲಿರುವ ಚನ್ನಬಸವ ಮ್ಯಾರಥಾನ್ ಓಟದಲ್ಲಿ ಯುವಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 135ನೆಯ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ಚನ್ನಬಸವ ಮ್ಯಾರಥಾನ್ ಕರಪತ್ರ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಅಂಗವಾಗಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕಳೆದೊಂದು ವಾರದಿಂದ ವಿವಿಧ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಅದರಲ್ಲಿ ಚನ್ನಬಸವ ಮ್ಯಾರಥಾನ್ ಕೂಡ ಒಂದಾಗಿದೆʼ ಎಂದರು.
‘ಯುವ ಶಕ್ತಿಯನ್ನು ಅಧ್ಯಾತ್ಮ, ಬಸವತತ್ವದತ್ತ ಸೆಳೆಯುವ ಉದ್ದೇಶದಿಂದ 5:40ಕಿ.ಮೀ. ಚನ್ನಬಸವ ಮ್ಯಾರಥಾನ್ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 5:30ಕ್ಕೆ ಚನ್ನಬಸವಾಶ್ರಮದಿಂದ ಚನ್ನಬಸವ ಮ್ಯಾರಥಾನ್ ಹೊರಟು ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಷ್ಟೂರೆ ಕಲ್ಯಾಣ ಮಂಪಟದ ಮಾರ್ಗದ ರಸ್ತೆ ಮೂಲಕ ಚನ್ನಬಸವೇಶ್ವರ ಡಿಗ್ರಿ ಕಾಲೇಜು ಸಮೀಪದ ಮುಖ್ಯ ರಸ್ತೆಯಿಂದ ಬೊಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮುಖಾಂತರ ಪುನಃ ಚನ್ನಬಸವಾಶ್ರಮ ತಲುಪಲಿದೆ’ ಎಂದು ತಿಳಿಸಿದರು.
ನಿವೃತ್ತ ಎಂಜಿನಿಯರ್ ಸಿದ್ದಯ್ಯ ಕಾವಡಿಮಠ ಕರಪತ್ರ ಬಿಡುಗಡೆಗೊಳಿಸಿದರು. ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಆಗ್ರಹಿಸಿ ಧರಣಿ
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಚನ್ನಬಸವ ಮ್ಯಾರಥಾನ್ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಚಿಡಗುಪ್ಪೆ ಸೇರಿದಂತೆ ಪ್ರಮುಖರಾದ ಸಂಗಮೇಶ ಹುಣಜೆ ಮದಕಟ್ಟಿ, ಸತೀಶ ಧರ್ಮಣ್ಣ, ಸಾಹಿತಿ ರಾಜು ಜುಬರೆ, ಶಾಂತಯ್ಯ ಸ್ವಾಮಿ ಸೇರಿದಂತೆ ಹಲವರು ಇದ್ದರು.