ಹೈನುಗಾರಿಕೆ ಉತ್ತೇಜನ, ಜಾನುವಾರುಗಳ ಆರೋಗ್ಯ ರಕ್ಷಿಸುತ್ತೇವೆಂದು ಕೇಂದ್ರ-ರಾಜ್ಯಗಳು ಒಗ್ಗೂಡಿ ಜಾರಿಗೆ ತಂದ ‘ಪಶು ಸಂಜೀವಿನಿ’ ಯೋಜನೆ ‘ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ’ ಎಂದು ರೈತರು ಹೇಳುತ್ತಿದ್ದಾರೆ. ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸುತ್ತಿದ್ದರೂ, ಯೋಜನೆಯ ಫಲಭವ ಮಾತ್ರ ಯಾರಿಗೂ ದೊರೆತಿಲ್ಲವೆಂದೂ ಆರೋಪಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಸಹಭಾಗಿತ್ವದಲ್ಲಿ 2022ರ ಜುಲೈನಲ್ಲಿ ‘ಪಶುಸಂಜೀವಿನಿ’ ಯೋಜನೆಯನ್ನು ಜಾರಿಗೊಳಿಸಿದ್ದವು. ಇರದಂತೆ ರಾಜ್ಯದ ಎಲ್ಲ ತಾಲೂಕುಗಳಿಗೂ ತಲಾ ಒಂದರಕ್ಕೆ 300 ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿತ್ತು. ಆದರೆ, ಆ್ಯಂಬುಲೆನ್ಸ್ ಪಶು ಆಸ್ಪತ್ರೆಗಳ ಬಾಗಿಲಿನಲ್ಲಿ ನಿಂತು ಒಂದು ವರ್ಷವೇ ಕಳೆದರೂ, ಅವು ನಿಂತ ಜಾಗದಿಂದ ಕದಲಿಲ್ಲ. ಚಾಲಕರು ಮತ್ತು ಸಹಾಯಕರ ಕೊರತೆಯಿಂದ ಅವುಗಳು ನಿಂತಲ್ಲಿಯೇ ನಿಂತಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ಪಶುಪಾಲನೆ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯೂ ಅಸಹಾಯಕರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 8 ಹೊಸ ಆ್ಯಂಬುಲೆನ್ಸ್‌ಗಳು ಬಿಸಿಲು ಮಳೆ ಎನ್ನದೇ ನಿಂತಲ್ಲೇ ನಿಂತಿವೆ. ಇದೀಗ, ವಾಹನಗಳ ಕೆಳಗೆ ಕಳೆ ಗಿಡಗಳು ಬೆಳೆದಿವೆ. ಜನರ ತೆರಿಗೆ ಹಣ ಯಾವ ರೀತಿಯಲ್ಲಿ ಪೋಲಾಗುತ್ತಿದೆ ಎಂಬುದಕ್ಕೆ ಇದು ಕೂಡ ಒಂದು ಉದಾಹರಣೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಿದರೂ, ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು ಬಳಕೆ ಮತ್ತು ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿವೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಹನದಲ್ಲಿ ಆಧುನಿಕ ಶಸ್ತ್ರಚಿಕಿತ್ಸೆ, ಪ್ರಯೋಗಶಾಲೆ ಮತ್ತು ಸ್ಕ್ಯಾನಿಂಗ್‌ಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ, ಆ್ಯಂಬುಲೆನ್ಸ್ ಬಳಕೆಯಾಗದೇ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳೂ ಹಾಳಾಗುತ್ತಿವೆ. ಇದರಿಂದ ಸಾರ್ವಜನಿಕರ ತೆರಿಗೆ ಹಣವೂ ಪೋಲಾಗುತ್ತಿದೆ. ಸಂಭದ ಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಆ್ಯಂಬುಲೆನ್ಸ್ ಬಳಕೆಯ ಕುರಿತು ಗಮನ ಹರಿಸಬೇಕು ಎಂದು ಹೈನುಗಾರಿಕೆ ಮಾಡುತ್ತಿರುವ ರೈತರು ಒತ್ತಾಯಿಸಿದ್ದಾರೆ.
ಆ್ಯಂಬುಲೆನ್ಸ್ ಬಳಕೆಯಲ್ಲಿನ ಲೋಪಗಳ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿಯ ಪಶು ವೈದ್ಯ ಡಾ. ಚಂದ್ರಶೇಖರ್, “ಉಡುಪಿ ಜಿಲ್ಲೆಗೆ ಒಟ್ಟು 8 ಆಂಬ್ಯುಲೆನ್ಸ್‌ಗಳನ್ನು ನೀಡಲಾಗಿದೆ. ಅವುಗಳಲ್ಲಿ ಏಳು ತಾಲೂಕಿಗೆ ಒಂದರಂತೆ ಮತ್ತು ಪಾಲಿ ಕ್ಲಿನಿಕ್‌ಗೆ ಒಂದನ್ನು ನೀಡಲಾಗಿದೆ. ಯಜೇಸ್ ಸ್ಪಾರ್ಕ್ ಎನ್ನುವ ಕಂಪನಿ ಅವುಗಳ ನಿರ್ವಹಣೆಯ ಗುತ್ತಿಗೆ ತೆಗೆದುಕೊಂಡಿದೆ. ಅವರೇ ಎಲ್ಲ ರೀತಿಯಲ್ಲಿ ಆ್ಯಂಬುಲೆನ್ಸ್‌ಗಳ ನಿರ್ವಹಣೆ ಮಾಡಬೇಕು. ಒಂದು ಆಂಬ್ಯುಲೆನ್ಸ್‌ಗೆ ಒಬ್ಬ ಡಾಕ್ಟರ್, ಒಬ್ಬ ವಿಎಲ್ ಮತ್ತು ಒಬ್ಬ ‘ಡಿ ಗ್ರೂಪ್’ ನೌರಕರನ್ನು ಕಂಪನಿ ನೇಮಿಸಿಕೊಂಡು, ಆ್ಯಂಬುಲೆನ್ಸ್‌ಗಳ ಬಳಕೆಯನ್ನು ಆರಂಭಿಸಬೇಕಿತ್ತು. ಆದರೆ, ಅವುಗಳ ಬಳಕೆ ಆರಂಭವಾಗಿಲ್ಲ” ಎಂದು ತಿಳಿಸಿದ್ದಾರೆ.