ತನ್ನ ಊರಿನ ಜನರಿಗೆ ಓಡಾಡಲು ತೊಂದರೆ ಅನುಭವಿಸುತ್ತಿರುವದನ್ನು ಕಂಡ ಊರಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಸ್ವತಃ ಖರ್ಚಿನಲ್ಲಿ ರಸ್ತೆ ದುರಸ್ತಿಗೊಳಿಸಿ ಸೈ ಎನಿಸಿಕೊಂಡಿದ್ದಾರೆ.
ಬೀದರ್ ನಗರದಿಂದ ಕೂಗಳತೆ ದೂರದಲ್ಲಿರುವ ಶಹಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಅಲ್ಲಲ್ಲಿ ತಗ್ಗು ಬಿದ್ದರೂ ದುರಸ್ತಿ ಕಾರ್ಯ ನಡೆದಿರಲಿಲ್ಲ. ಇದನ್ನು ಕಂಡ ಇಳಿವಯಸ್ಸಿನ ಗ್ರಾಮದ ಶಂಕರೆಪ್ಪ ಬಿರಾದರ ಎಂಬುವರು ಸ್ವತಃ ದುಡ್ಡಿನಲ್ಲಿ ತಾತ್ಕಾಲಿಕವಾಗಿ ರಸ್ತೆ ಗುಂಡಿ ಮುಚ್ಚಿಸಿದ್ದಾರೆ.
ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಹಾಪುರ ಗ್ರಾಮದಲ್ಲಿ ಒಟ್ಟು ಮೂವರು ಸದಸ್ಯರಿದ್ದಾರೆ. ಅದರಲ್ಲಿ ಶಂಕರೆಪ್ಪ ಬಿರಾದರ ಒಬ್ಬರು. ಈ ಹಿಂದೆ ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಜನಪರ ಕೆಲಸಗಳಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದ ಶಂಕರೆಪ್ಪನವರು ಗ್ರಾಮಾಭಿವೃದ್ಧಿ ಬಗ್ಗೆ ತುಡಿತ ಇಟ್ಟುಕೊಂಡಿರುವ ಇವರು, ರಸ್ತೆ ಸಮಸ್ಯೆಯಿಂದ ಗ್ರಾಮಸ್ಥರ ತೊಂದರೆಗೆ ಮರುಗಿದ ಶಂಕರೆಪ್ಪನವರು ಮೂರು ಕಿ.ಮೀ. ಉದ್ದದ ರಸ್ತೆ ಮಧ್ಯೆದ ತಗ್ಗು, ಗುಂಡಿ ಮುಚ್ಚಿಸಿ ಅನುಕೂಲ ಮಾಡಿಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

“ನಾನು ಮೂರನೇ ಬಾರಿ ಗ್ರಾಮ ಪಂಚಾಯತಿ ಸದಸ್ಯನಾಗಿದ್ದೇನೆ, ಒಮ್ಮೆ ನನ್ನ ಪತ್ನಿ ಸದಸ್ಯೆಯಾಗಿದ್ದಳು. ಎಲ್ಲರೂ ಚುನಾವಣೆಯಲ್ಲಿ ಗೆಲ್ಲಲು ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆದರೆ ನಾನು ಯಾವಾಗಲೂ ಹಣ ಖರ್ಚು ಮಾಡುವುದಿಲ್ಲ. ಜನರೇ ಪ್ರೀತಿಯಿಂದ ನನ್ನನ್ನು ಗೆಲ್ಲಿಸುತ್ತಾರೆ. ಹೀಗಾಗಿ ಜನರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳಲು ಜನಪರ ಕೆಲಸ ಮಾಡಿಕೊಂಡು ಬಂದಿರುವೆ, ಊರಿನ ಸೇವೆಯಲ್ಲೇ ನನಗೆ ಸಂತೃಪ್ತಿಯಿದೆ” ಎಂದು ಹಿರಿಯ ಜೀವ ಶಂಕರೆಪ್ಪ ಬಿರಾದಾರ ಅವರು ಹೇಳುತ್ತಾರೆ.
“ಬೀದರ್ – ಜಹೀರಾಬಾದ್ ಮುಖ್ಯ ರಸ್ತೆಯಿಂದ ಶಹಾಪುರ ಗ್ರಾಮದವರೆಗಿನ 3 ಕಿ.ಮೀ. ರಸ್ತೆ ಹಾಳಾಗಿದ್ದ ಕಾರಣ ಒಂದು ತಿಂಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಶಾಲಾ -ಕಾಲೇಜಿನ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ, ಅದರಲ್ಲೂ ಶಕ್ತಿ ಯೋಜನೆಯಿಂದ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿರುವುದು ಕಂಡು ನಾನೇ ತಗ್ಗುಗಳನ್ನು ಮುಚ್ಚಲು ನಿರ್ಧರಿಸಿದ್ದೇನೆ” ಎಂದು ಹೇಳಿದರು.
ಟ್ರ್ಯಾಕ್ಟರ್ ನಲ್ಲಿ ಕೆಂಪು ಮಣ್ಣು ತರಿಸಿ, ಆರೇಳು ಕಾರ್ಮಿಕರಿಂದ ರಸ್ತೆಯುದ್ದಕ್ಕೂ ಬಿದ್ದ ತಗ್ಗು, ಗುಂಡಿಗಳನ್ನು ಸಮತಟ್ಟುಗೊಳಿಸಲಾಗಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಮಾತನಾಡಿ ತಿಳಿಸಿದ ನಂತರ ಮತ್ತೆ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಿದ್ದಾರೆ. ಇಳಿವಯಸ್ಸಿನಲ್ಲೂ ಖುದ್ದು ಮುಂದೆ ನಿಂತು ರಸ್ತೆ ದುರಸ್ತಿ ಮಾಡಿರುವುದು ಯುವಜನಾಂಗಕ್ಕೆ ಸ್ಫೂರ್ತಿದಾಯಕ ಕಾರ್ಯ. ಜನಪರ ಕಳಕಳಿಯ ಜನಪ್ರತಿನಿಧಿಗಳು ಸಿಗುವುದು ಇಂದು ತುಂಬಾ ಅಪರೂಪ. ಅಂಥ ಅಪರೂಪದ ಜನಸೇವಕ ದೊರಕಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಭೇಷ್ ಹೇಳುತ್ತಾರೆ ಗ್ರಾಮಸ್ಥರು.

“ಗ್ರಾಮದ ಬಹುತೇಕರು ವಿವಿಧ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಬಸ್ ಪಾಸ್ ಹೊಂದಿರುವ ಬಡ ವಿದ್ಯಾರ್ಥಿಗಳು ಆಟೋಗಳಿಗೆ ದುಬಾರಿ ಹಣ ಕೊಟ್ಟು ಹೋಗಬೇಕು, ಇಲ್ಲವೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿತ್ತು. ಗ್ರಾಮಸ್ಥರ ಈ ಸಂಕಟ ನೋಡಲಾಗದೆ ಸ್ವತಃ ದುಡ್ಡಿನಲ್ಲೇ ತಾತ್ಕಾಲಿಕ ರಸ್ತೆ ದುರಸ್ತಿಗೊಳಿಸಿದ್ದೇನೆ. ಇದಕ್ಕಾಗಿ 30ಸಾವಿರ ರೂ. ಖರ್ಚಾಗಿದೆ” ಎಂದು ಈದಿನ.ಕಾಮ್ ದೊಂದಿಗೆ ಮಾತನಾಡಿ ಮಾಹಿತಿ ನೀಡಿದರು.
ಗ್ರಾಮಸ್ಥರಾದ ಶ್ರೀಮಂತ ಅವರು ಈದಿನ.ಕಾಮ್ ದೊಂದಿಗೆ ಮಾತನಾಡಿ, “ನಮ್ಮೂರಿನ ರಸ್ತೆ ಮಧ್ಯೆ ಅಲ್ಲಲ್ಲಿ ತಗ್ಗು ಬಿದ್ದು ಸಂಚಾರಕ್ಕೆ ತುಂಬಾ ಸಂಕಷ್ಟ ಆಗುತ್ತಿತ್ತು. ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದೀಗ ಊರಿನ ಹಿರಿಯರಾದ ಶಂಕರೆಪ್ಪ ಬಿರಾದಾರ ಅವರು ಸ್ವತಃ ಖರ್ಚಿನಲ್ಲಿ ಗುಂಡಿ ಮುಚ್ಚಿಸಿ ಓಡಾಡಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ , ಅದರಲ್ಲೂ 82 ವಯಸ್ಸಿನ ಹಿರಿಯರಿಗೆ ಗ್ರಾಮದ ಜನರ ಮೇಲೆ ಇರುವ ಕಾಳಜಿ ನೋಡಿ ಹೆಮ್ಮೆ ಎನಿಸುತ್ತದೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎರಡು ದೇಶಗಳ ಸ್ಥಾಪನೆ- ಇಸ್ರೇಲ್ ಪ್ಯಾಲೆಸ್ತೀನಿ ಕದನಕ್ಕೆ ಕಾಯಂ ಪರಿಹಾರ
ಗ್ರಾಮದ ಯುವ ಮುಖಂಡ ನಾಗೇಶ ಯರನಳ್ಳೆ ಈದಿನ.ಕಾಮ್ ದೊಂದಿಗೆ ಮಾತನಾಡಿ “ನಮ್ಮೂರಿನ ರಸ್ತೆ ದುರಸ್ತಿಯ ಮನವಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಲಿಲ್ಲ. ರಸ್ತೆ ಸಮಸ್ಯೆಯಿಂದ ಗ್ರಾಮಸ್ಥರು ಅನುಭವಿಸುತ್ತಿರುವುದು ಕಂಡು ಊರಿನ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರೆಪ್ಪ ಬಿರಾದರ್ ಅವರು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದು ಸಂತಸ ನೀಡಿದೆ. ಅಧಿಕಾರಿಗಳು ಮಾಡುವ ಕಾರ್ಯ ಊರಿನ ಹಿರಿಯರೊಬ್ಬರು ಮಾಡಿರುವುದು ಖುಷಿ ನೀಡಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಮಧ್ಯೆದ ತಗ್ಗು ಸಮತ್ತಟ್ಟುಗೊಳಿಸಿ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಶಹಾಪುರ ಗೇಟ್ ಬಳಿ ರಸ್ತೆ ತಡೆ ಮಾಡಲಾಗುವುದು” ಎಂದು ಎಚ್ಚರಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ತುಂಬಾ ಅದ್ಭುತವಾದ ಕೆಲಸಗಳನ್ನು ಮಾಡಿಸಿದ್ದಾರೆ ಬಿರಾದಾರ ಅಜ್ಜ ಅವರು. ನಿಮ್ಮ ಲೇಖನ ತುಂಬಾ ಸೊಗಸಾಗಿ ಮೂಡಿಬಂದಿದ್ದೆ ಕಂಬಾರ ಅವರೇ. 👏👏.