ಗಡಿ ಭಾಗದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನಿಸ್ವಾರ್ಥ ಭಾವದಿಂದ ಸಲ್ಲಿಸುತ್ತಿರುವ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಭಾನುವಾರ ನಡೆದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ 74ನೆಯ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯರನ್ನು ಸನ್ಮಾನಿಸಿ ಮಾತನಾಡಿ, ʼಬಸವಲಿಂಗ ಪಟ್ಟದ್ದೇವರು ಅವರು ತಮ್ಮ ಇಡೀ ಬದುಕನ್ನು ಬಸವತತ್ವ ಪ್ರಚಾರ ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದಾರೆʼ ಎಂದರು.
ವಿಶ್ವಗುರು ಬಸವಣ್ಣನವರ ಮತ್ತು ಡಾ.ಚನ್ನಬಸವ ಪಟ್ಟದ್ದೇವರ ತತ್ವ ಸಿದ್ಧಾಂತಗಳನ್ನು ಪೂಜ್ಯರು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಕರ್ನಾಟಕ ಅಷ್ಟೇ ಅಲ್ಲದೇ ನೆರೆಯ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಸೇರಿ ದೇಶ ವಿದೇಶಗಳಲ್ಲಿ ಪೂಜ್ಯರು ಬಸವತತ್ವ ಪ್ರಸಾರ ಕೈಗೊಂಡು ಬಸವಾದಿ ಶರಣರ ಸಂದೇಶಗಳು ಜನಮಾನಸಕ್ಕೆ ಮುಟ್ಟಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಅವರ ಸೇವಾ ಕಾರ್ಯಗಳು ಹೀಗೆ ಮುಂದುವರೆಯಲಿ. ಪೂಜ್ಯರ ಸಂಕಲ್ಪ ಈಡೇರಿಸಲು ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
‘ಡಾ.ಬಸವಲಿಂಗ ಪಟ್ಟದ್ದೇವರು ಮಾರ್ಗದರ್ಶನದಲ್ಲಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಆಗುತ್ತಿದ್ದು ಬರುವ 2025ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.
ʼನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಅನುಭವ ಮಂಟಪ ಸದಸ್ಯತ್ವ ಹೆಚ್ಚಿಸುವ ಗುರಿ ಬಸವಕಲ್ಯಾಣ ಅನುಭವ ಮಂಟಪದಲ್ಲಿ ನಿರಂತರ ದಾಸೋಹ ಹಮ್ಮಿಕೊಳ್ಳಲು ಸದಸ್ಯತ್ವ ಹೆಚ್ಚಿಸುವ ಗುರಿಯಾಗಿದೆ. ನಾನು ಯಾವತ್ತಿಗೂ ಸನ್ಮಾನ, ಪ್ರಶಸ್ತಿ, ಅದ್ಧೂರಿ ಜನ್ಮದಿನ ಆಚರಣೆಗೆ ಆಸೆ ಪಟ್ಟವನಲ್ಲ. ಸಮಾಜದಲ್ಲಿ ಮಾಡಬೇಕಾಗಿರುವುದು ಬಹಳಷ್ಟಿದೆ. ಬಸವಣ್ಣನವರ ಮತ್ತು ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಶಕ್ತಿಯಿಂದ ಸಮಾಜದಲ್ಲಿ ಒಂದಷ್ಟು ಉತ್ತಮ ಸೇವೆ ಸಲ್ಲಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.
ಅನುಭವ ಮಂಟಪದಲ್ಲಿ ನಿರಂತರ ದಾಸೋಹಕ್ಕಾಗಿ 11,000, 25,000, 50,000,1,00000 ಮೊತ್ತದ ಸದಸ್ಯತ್ವ ಮಾಡಿಕೊಳ್ಳಲಾಗುತ್ತಿದ್ದು ಆಸಕ್ತ ಭಕ್ತರು ತಮ್ಮ ಆರ್ಥಿಕತೆಗೆ ಅನುಗುಣವಾಗಿ ಸದಸ್ಯತ್ವ ಪಡೆದು ಸಹಕರಿಸಬೇಕು’ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ ಖಂಡ್ರೆ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಉದ್ಯಮಿ ಜಯರಾಜ ಖಂಡ್ರೆ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ ಸೇರಿದಂತೆ ಹಲವರು ಇದ್ದರು.
ಸಮಾಜದ ಒಳಿತಿಗೆ ಪಟ್ಟದ್ದೇವರ ಬದುಕು ಮುಡಿಪು : ಸಂಸದ ಸಾಗರ್ ಖಂಡ್ರೆ
ಸಮಾಜದ ಒಳಿತಿಗೆ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಬದುಕು ಮುಡಿಪಾಗಿಟ್ಟಿದ್ದಾರೆ ಜಿಲ್ಲೆಯ ಹೆಸರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಸರಿಸುವಲ್ಲಿ ಪಟ್ಟದ್ದೇವರ ಶೈಕ್ಷಣಿಕ ಕ್ರಾಂತಿ ಹಿರಿದು. ಪಟ್ಟದ್ದೇವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ರಾಂತಿ ಯಾರೂ ಮರೆಯುವ ಹಾಗಿಲ್ಲ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ 74ನೆಯ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ,’ಗಡಿಯಲ್ಲಿ ಪೂಜ್ಯರು ವಿವಿಧ ಸಾಮಾಜಿಕ ಕೆಲಸಗಳ ಜತೆಗೆ ಬಸವತತ್ವ ಜನಮಾನಸಕ್ಕೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನಾಥ ಮಕ್ಕಳ ಪೋಷಣೆ ಮಾಡುತ್ತ ನಿಜವಾದ ಮಾನವೀಯತೆ ತೋರುತ್ತಿದ್ದಾರೆ ಅವರ ಸೇವೆ ಹೀಗೆ ಮುಂದುವರೆಯಲಿ’ ಎಂದು ತಿಳಿಸಿದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಇಂದಿನ ಯುವ ಸನ್ಯಾಸಿಗಳು ಮಠದ ಆರ್ಥಿಕ ಸ್ಥಿತಿಯನ್ನು ಗಮನಿಸಿ ಪೀಠಕ್ಕೆ ಮಠಾಧೀಶರು ಆಗುತ್ತಾರೆ. ಆದರೆ ಬಸವಲಿಂಗ ಪಟ್ಟದ್ದೇವರು ಕೇವಲ ಗುರುವಿನ ಸೇವೆಯನ್ನು ತಮ್ಮ ಗುರಿಯಾಗಿಸಿಕೊಂಡು ಮಠಕ್ಕೆ ಪೀಠಾಧಿಪತಿ ಆಗಿರುವುದು ಅವರ ಶ್ರೇಷ್ಠತೆ ತೋರಿಸುತ್ತದೆ. ಹಿರೇಮಠದ ಏಳಿಗೆಯ ಕೀರ್ತಿ ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು
ಸುದೈವಿ ಮಕ್ಕಳಿಗೆ 11 ಜನ ಶರಣೆಯರು ಆರತಿ ಬೆಳಗಿ, ಸಿಹಿ ತಿನ್ನಿಸಿದರು. ಗುರುಕುಲ ಪಿಯು ಕಾಲೇಜಿನ ವಿದ್ಯಾರ್ಥಿ ವಿವೇಕ ಮಾರುತಿ ಸಿಕಂದಪೂರೆ ಸ್ಥಳದಲ್ಲೇ ಬಸವಲಿಂಗ ಪಟ್ಟದ್ದೇವರ ಭಾವಚಿತ್ರ ಬಿಡಿಸಿ ಸರ್ವರ ಪ್ರಶಂಸೆಗೆ ಪಾತ್ರನಾದನು. ಇದೇ ಸಂದರ್ಭದಲ್ಲಿ ವಿವಿಧ ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳು ಬಸವಲಿಂಗ ಪಟ್ಟದ್ದೇವರು ಕುರಿತು ಬರೆದ ಸ್ವರಚಿತ ಕವನ, ಭಾಷಣ ಮಾಡಿ ನೆರೆದವರ ಗಮನ ಸೆಳೆದರು.
ಈ ಸುದ್ದಿ ಓದಿದ್ದೀರಾ? ಇಡೀ ದಿನದ ಕ್ಷಣ ಕ್ಷಣದ ಸುದ್ದಿಗಳು 25/08/2024
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಚನ್ನಬಸವ ಪಟ್ಟದ್ದೇವರು ಬ್ಯಾಂಕ್‌ನ ನಿರ್ದೇಶಕ ಅನಿಲ ಹಾಲಕುಡೆ, ವ್ಯವಸ್ಥಾಪಕ ಗಣಪತಿ ಬಾವುಗೆ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಧನರಾಜ ಬಂಬುಳಗೆ, ಸಿದ್ರಾಮ ಗೊಗ್ಗಾ, ಜಯಕ್ಕಾ ಗಾಂವಕರ್, ಮಹಾಲಕ್ಷ್ಮಿ ಸೇರಿದಂತೆ ಹಲವರು ಇದ್ದರು. ಮಧುಕರ
ಗಾಂವಕರ್ ನಿರೂಪಿಸಿದರು.