ಅಖಂಡ ಹಿಂದೂ ರಾಷ್ಟ್ರ ಕಲ್ಪನೆಯ ಸಂವಿಧಾನ ಸಿದ್ಧ ಪಡಿಸಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಕುಂಭಮೇಳದಲ್ಲಿನ ಸಂತ ಸಮಾವೇಶದಲ್ಲಿ ನಾವು ಪರಿಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪೆರ್ಣಂಕಿಲ ದೇವಸ್ಥಾನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇಂದು ದೇವಾಲಯಗಳು ಸರಕಾರದ ಕಪಿಮುಷ್ಠಿಯಲ್ಲಿದೆ. ಜೀರ್ಣೋದ್ದಾರ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ. ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ. ಅಂತಹ ಅನೇಕ ಆಕ್ಷೇಪಗಳಿವೆ. ಆದುದರಿಂದ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇಗುಲದ ಸಂಪತ್ತಿಂದ ಊರಿಗೆ ಶಿಕ್ಷಣ ಆಗಬೇಕು ಮತ್ತು ವೈದ್ಯಕೀಯಕ್ಕೆ ಹಣ ಬಳಕೆಯಾಗಬೇಕು. ಇದೆಲ್ಲ ಸನಾತನ ಬೋರ್ಡ್‌ನಿಂದ ಮಾತ್ರ ಸಾಧ್ಯ ಎಂದರು.
ಗೋ ಸಂಪತ್ತು ರಕ್ಷಣೆಗೆ ವಿಷ್ಣು ಸಹಸ್ರನಾಮ ಅಭಿಯಾನಕ್ಕೆ ಅನೇಕ ಪೀಠಾಧಿಪತಿಗಳು, ಮಠಾಧಿಪತಿಗಳು, ಸಂತರು ಹಾಗೂ ಸಮಾಜದಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಒಂದು ಹಂತದ ಅಭಿಯಾನ ನಡೆದಿದೆ. ಸರಕಾರ ಇದಕ್ಕೆ ಬಗ್ಗದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕುಂಭಮೇಳದ ಬಗ್ಗೆ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆ ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಈ ಹೇಳಿಕೆ ಬಾಲಿಷವಾಗಿದೆ. ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗಿಗಳಾಗುತ್ತಿದ್ದಾರೆ. ಇಲ್ಲಿ ಮಿಂದ ಲಕ್ಷಾಂತರ ಮಂದಿಯನ್ನು ಮೂರ್ಖರು ಎಂದು ಹೇಳಿದಂತೆ ಆಗುತ್ತದೆ ಎಂದು ಹೇಳಿದರು.
