ತುಮಕೂರು ಜಿಲ್ಲೆಯ ಕೊರಗೆರೆ ಗ್ರಾಮ ಪಂಚಾಯತಿಯಲ್ಲಿ ಕೆಲವು ಸಾಮಗ್ರಿಗಳ ಖರೀದಿ ಹೆಸರಿನಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಗ್ರಾಮ ಪಂಚಾಯತಿ ಪಿಡಿಒಗೆ ದಂಡ ವಿಧಿಸುವಂತೆ ಮತ್ತು ಗ್ರಾಮ ಪಂಚಾಯತಿ ಸದಸ್ಯನ ಸದಸ್ವತ್ವ ರದ್ದುಗೊಳಿಸುವಂತೆ ಜಿಲ್ಲಾ ಪಂಚಾಯತಿ ಸಾರ್ವಜನಿಕ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಆದೇಶಿಸಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಕೊರಗೆರೆ ಗ್ರಾಮ ಪಂಚಾಯತಿಯ ಇಂದಿನ ಕಾರ್ಯದರ್ಶಿ, ಹಿಂದಿನ ಪಿಡಿಒ ಟಿ.ಕೆಂಚಪ್ಪ ಅವರು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪ ಸಾಬೀತಾಗಿದ್ದು ಅಕ್ರಮ ಎಸಗಿದ್ದ 32,000 ರೂ. ಹಣದ ಜೊತೆಗೆ 5,000 ರೂ. ದಂಡ ವಸೂಲಿ ಮಾಡುವಂತೆ ಪ್ರಾಧಿಕಾರ ಆದೇಶ ನೀಡಿದೆ.
ಟಿ.ಕೆಂಚಪ್ಪ ಅವರು ಪಿಡಿಒ ಆಗಿದ್ದ ಸಮಯದಲ್ಲಿ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಅನುಮೋದನೆ ಪಡೆಯದೆ ಸಾಮಗ್ರಿ ಖರೀದಿಗಾಗಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್.ದಿನೇಶ್ 32,000 ರೂ. ಚೆಕ್ ನೀಡಿದ್ದರು. ಈ ಬಗ್ಗೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಎಸ್.ಎಲ್.ಮಣಿಕಂಠ ಎಂಬವರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪ್ರಾಧಿಕಾರ, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ಇಂದಿನ ಪಿಡಿಒ ಎನ್ ನಮೀನ್ ಕುಮಾರ್ ಅವರಿಗೆ ತಿಳಿಸಿತ್ತು. ಆದರೆ, ವಿತರಣೆಯಾಗಿರುವ ಚೆಕ್‌ಅನ್ನು ನಗದೀಕರಿಸಲಾಗಿಲ್ಲವೆಂದು ನವೀನ್ ಕುಮಾರ್ ತಪ್ಪು ಮಾಹಿತಿ ನೀಡಿದ್ದರು. ಚೆಕ್‌ಅನ್ನು ನಗದೀಕರಿಸಿ, ಹಣ ಪಾವತಿಯಾಗಿರುವ ಬಗ್ಗೆ ದೂರುದಾರರು ವಿವರಣೆ ಸಲ್ಲಿಸಿದ್ದರು.
ಇದೆಲ್ಲವನ್ನೂ ಗಮನಿಸಿದ ಪ್ರಾಧಿಕಾರ, ಅಕ್ರಮ ನಡೆದಿದೆ ಎಂಬುದನ್ನು ದೃಢಪಡಿಸಿದೆ. ಅಲ್ಲದೆ, ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವಧನವನ್ನು ಬಿಟ್ಟು ಬೇರಾವುದೇ ಹಣ ಪಾವತಿಸುವಂತಿಲ್ಲ. ಸದಸ್ಯರು ಗುತ್ತಿಗೆ ಸೇರಿದಂತೆ ಯಾವುದೇ ಕಾಮಗಾರಿಗಳನ್ನು ನಿರ್ವಹಿಸುವಂತಿಲ್ಲ ಎಂಬ ನಿಯಮಗಳಿವೆ. ಅದರೂ ಸದಸ್ಯನಿಗೆ ಚೆಕ್ ನೀಡಲಾಗಿದೆ ಎಂಬುದನ್ನು ಕೂಡ ಗಮನಿಸಿದೆ.
ಅಕ್ರಮ ಸಾಬೀತಾಗಿದ್ದು, ಪಂಚಾಯತಿ ಅಧಿಕಾರಿ ಟಿ ಕೆಂಚಪ್ಪ ಅವರಿಂದ ಅಕ್ರಮ ಎಸಗಲಾಗಿದ್ದ 32,000 ರೂ. ಹಣವನ್ನು ಮರಳಿ ಪಡೆಯಬೇಕು. ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿದ ಪಿಡಿಒ ನವೀನ್ ಕುಮಾರ್‌ಗೆ 5,000 ರೂ. ದಂಡ ವಿಧಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಗ್ರಾಮ ಪಂಚಾಯತಿ ಸದಸ್ಯ ಬಿ.ಎಸ್ ದಿನೇಶ್ ಅವರ ಸದಸ್ಯತ್ವವನ್ನು ರದ್ದು ಮಾಡಬೇಕು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಧಿನಿಯಮ-1993ರ ಸೆಕ್ಷನ್ 43–ಎ(4) ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಪ್ರಾಧಿಕಾರವು ಜಿಲ್ಲಾ ಪಂಚಾಯತಿ ಸಿಒಒಗೆ ಶಿಫಾರಸ್ಸು ಮಾಡಿದೆ.