ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ರಾಜಕೀಯ ಪ್ರೇರಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ ಕಲಬುರಗಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ನಗರದ ಜಗತ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಸೇರಿದ ಪಕ್ಷದ ನೂರಾರು ಕಾರ್ಯಕರ್ತರು ಸೇರಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್,ಮಾಜಿ ಸಚಿವ ರೇವುನಾಯಕ್ ಬೆಳಮಗಿ ಹಾಗೂ ಕಾಂಗ್ರೆಸ್ ಮುಖಂಡರಾದ ಸುಭಾಷ್ ರಾಠೋಡ್, ಅರುಣಕುಮಾರ್ ಪಾಟೀಲ್, ನೀಲಕಂಠರಾವ್ ಮೂಲಗೆ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
ಬೀದರ್ : ಸಂಸದ ಸಾಗರ್ ಖಂಡ್ರೆ ನೇತ್ರತ್ವದಲ್ಲಿ ಪ್ರತಿಭಟನೆ
ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಶನಿವಾರ ಬೀದರನಲ್ಲಿ ಸಂಸದ ಸಾಗರ ಈಶ್ವರ ಖಂಡ್ರೆ ನೇತೃತ್ವದಲ್ಲಿ ಬೀದರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಯಿತು. ಬಳಿಕ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಂಸದ ಸಾಗರ ಖಂಡ್ರೆ ಮಾತನಾಡಿ, ʼಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಆಗದಿರುವ ಕಾರಣ ರಾಜಭವನ ದುರುಪಯೋಗ ಮಾಡಿಕೊಂಡು ಮುಖ್ಯಮಂತ್ರಿಗಳ ಹೆಸರಿಗೆ ಕಳಂಕ ತರುವ ಕೆಲಸ ಬಿಜೆಪಿ ಹಾಗೂ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆʼ ಎಂದು ಕಿಡಿಕಾರಿದರು.
ʼಸಂವಿಧಾನದ ಮುಖ್ಯಸ್ಥರಾಗಿ ಹೀಗೆ ಅಸಂವಿಧಾನಿಕ ನಡೆ ಅನುಸರಿಸುತ್ತಿರುವ ರಾಜ್ಯಪಾಲರ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದಾರುಣ ಘಟನೆ: ದಲಿತ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿ ಕೊಲೆ
ಪ್ರತಿಭಟನೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಸಂಜಯ ಜಾಗಿರದಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.