ಬೀದರ್ ನಗರದ ಓಲ್ಡ್ ಸಿಟಿಯ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರು ಹಾಸಿಗೆಗಳ ಡಯಾಲಿಸಿಸ್ ಸೇವೆ ಆರಂಭಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮತಿ ನೀಡಿದ್ದು, ಶೀಘ್ರದಲ್ಲೇ ಡಯಾಲಿಸಿಸ್ ಸೇವೆಗೆ ಚಾಲನೆ ಸಿಗಲಿದೆ.
ಬೀದರ್ ಕ್ಷೇತ್ರದ ಶಾಸಕರೂ ಆದ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರ ಕಾಳಜಿಯ ಫಲವಾಗಿ ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹64.48 ಲಕ್ಷ ರೂ. ವೆಚ್ಚದಲ್ಲಿ ಆರು ಡಯಾಲಿಸಿಸ್ ಯಂತ್ರ, ಹಾಸಿಗೆ, ಆರ್.ಓ. ಪ್ಲಾಂಟ್ ಹಾಗೂ ಅಗತ್ಯ ಸಲಕರಣೆಗಳನ್ನು ಅಳವಡಿಸಲಾಗಿದೆ.
ʼನಗರದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಡಯಾಲಿಸಿಸ್ ಸೇವೆ ಒದಗಿಸುತ್ತಿರುವ ಕಾರಣ ಹೆಚ್ಚಿನ ಒತ್ತಡ ಇದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲೂ ಸೇವೆ ಪ್ರಾರಂಭಿಸಬೇಕೆಂಬ ರೋಗಿಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ತಾವು ವಿಶೇಷ ಪ್ರಯತ್ನ ನಡೆಸಿದ್ದು, ಇದೀಗ ಬಹು ದಿನಗಳ ಬೇಡಿಕೆ ಈಡೇರಲಿದೆʼ ಎಂದು ತಿಳಿಸಿದ್ದಾರೆ.
ʼಡಯಾಲಿಸಿಸ್ ಸೇವೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಮಂಡಳಿ ಪ್ರಸ್ತಾವಕ್ಕೆ ಮಂಜೂರಿ ನೀಡಿತ್ತು. ಈಗಾಗಲೇ 6 ಡಯಾಲಿಸಿಸ್ ಯಂತ್ರ ಹಾಗೂ ಇತರ ಉಪಕರಣಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಡಯಾಲಿಸಿಸ್ ಸೇವೆ ಆರಂಭದಿಂದ ಓಲ್ಡ್ ಸಿಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೋಗಿಗಳಿಗೆ ನೆರವಾಗಲಿದೆʼ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.